Advertisement

ಸೋಂಕಿಗೆ ಬಲಿ: ವಾರಿಯರ‍್ಸ್‌ ಕುಟುಂಬಕ್ಕೆ ಪರಿಹಾರ

06:14 AM Jun 26, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ವಾರಿಯರ‍್ಸ್‌‌ ಆಗಿ ಕರ್ತವ್ಯನಿರ್ವಹಿಸಿ ಕೊನೆಗೆ ಕೋವಿಡ್‌ 19 ಸೋಂಕಿಗೆ ಪ್ರಾಣತೆತ್ತ ಮೂವರು ಪೊಲೀಸ್‌ ಸಿಬ್ಬಂದಿಗೆ ಸರ್ಕಾರ ತಲಾ 30 ಲಕ್ಷ ರೂ. ಪರಿಹಾರ ಚೆಕ್‌ ವಿತರಿಸಿತು. ನಗರ ಪೊಲೀಸ್‌ ಆಯುಕ್ತರ  ಕಚೇರಿ ಆವರಣ ದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ಮೃತರ ಕುಟುಂಬಕ್ಕೆ ಪರಿಹಾರದ ಚೆಕ್‌ ವಿತರಿಸಿದರು.

Advertisement

ಕಲಾಸಿಪಾಳ್ಯ, ವಿ.ವಿ. ಪುರಂ ಮತ್ತು ವಿಲ್ಸನ್‌ ಗಾರ್ಡನ್‌ ಸಂಚಾರ ಠಾಣೆ ಮೂವರು ಸಿಬ್ಬಂದಿ ಕೋವಿಡ್‌ 19ಗೆ ಬಲಿಯಾಗಿದ್ದರು. ಮೃತರ ಕುಟುಂಬ ಸದಸ್ಯರು ಕ್ವಾರಂಟೈನ್‌ನಲ್ಲಿ ಇದ್ದುದರಿಂದ ಅವರ ಪರವಾಗಿ ವಿಜಯ್‌ ಕುಮಾರ್‌,  ಶಿವಕುಮಾರ್‌ ಮತ್ತು ದಯಾನಂದ ಸಿ.ಭೋಗಿ ಎಂಬವರು ಸಚಿವರಿಂದ ಚೆಕ್‌ ಸ್ವೀಕರಿಸಿದರು. ಬಳಿಕ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, “ಪೊಲೀಸರು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮಂಜೂಣಿಯಲ್ಲಿದ್ದು  ಕೆಲಸ ಮಾಡುತ್ತಿದ್ದಾರೆ.

ಬದಲಾಗುತ್ತಿರುವ ಸಮಯಕ್ಕೆ ತಕ್ಕಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನಿಗಳೂ ಪೊಲೀಸರ ಕಾರ್ಯವೈಖರಿಯನ್ನು ಪ್ರಶಂಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  “ಕರ್ನಾಟಕ ರಾಜ್ಯಾದ್ಯಂತ  ಕೋವಿಡ್‌ ವಿರುದ್ಧ ಹೋರಾಟದಲ್ಲಿ ಈಗಾಗಲೇ ನೂರಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ತಗುಲಿದ್ದು, ಸರ್ಕಾರ ಅವರ ಚಿಕಿತ್ಸಾ ಹಾಗೂ ಯೋಗಕ್ಷೇಮಕ್ಕಾಗಿ ವಿಶೇಷ ಆಸ್ಪತ್ರೆಗಳನ್ನು ತೆರೆಯುತ್ತಿದೆ. ಪೊಲೀಸರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಎಲ್ಲ ರೀತಿಯ  ಕ್ರಮ ವಹಿಸಿದೆ’.

ಪೊಲೀಸರಲ್ಲಿ ಸುಮಾರು 108 ಮಂದಿ ಸೋಂಕಿತರಾಗಿದ್ದು, ಮೂವರು ಮೃತರಾಗಿದ್ದಾರೆ. 90 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು. ನಗರ  ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಹೇಮಂತ್‌ ನಿಂಬಾಳ್ಕರ್‌, ಸೌಮೇಂದು ಮುಖರ್ಜಿ, ಎಸ್‌. ಮುರುಗನ್‌, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ ಬಿ.ಆರ್‌. ರವಿಕಾಂತೇಗೌಡ, ಹಿರಿಯ  ಅಧಿಕಾರಿಗಳಿದ್ದರು.

ಪ್ರತ್ಯೇಕ ಆಸ್ಪತ್ರೆ: ಪೊಲೀಸ್‌ ಸಿಬ್ಬಂದಿಗಳ ಚಿಕಿತ್ಸೆಗೆ ಬೆಂಗಳೂ ರಿನಲ್ಲಿ ಐದು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ನಗರದ ವಿಕ್ರಂ ಆಸ್ಪತ್ರೆ, ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ, ಎಂ.ಎಸ್‌. ರಾಮಯ್ಯ ಆಸ್ಪತ್ರೆ, ಸೇಂಟ್‌ ಜಾನ್‌ ಆಸ್ಪತ್ರೆ  ಹಾಗೂ  ಮಹಾವೀರ್‌ ಜೈನ್‌ ಆಸ್ಪತ್ರೆಗಳನ್ನು ಗುರುತಿಸಲಾಗಿದೆ.

Advertisement

ಸಾಮಾನ್ಯರೂ ವಾರಿಯರ‍್ಸ್: ನಗರದಲ್ಲಿ ಕೋವಿಡ್‌ 19 ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಕೂಡ ಕೋವಿಡ್‌ 19 ವಾರಿಯರ‍್ಸ್ ಆಗಿ ಕೆಲಸ ಮಾಡಬೇಕು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಮನವಿ  ಮಾಡಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ನಗರದಲ್ಲಿ ವಾಸಿಸುವ ಜನಸಾಮಾ ನ್ಯರೂ ಕೋವಿಡ್‌ 19 ವಾರಿಯರ‍್ಸ್‌‌ ಆಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next