ಧಾರವಾಡ: ಮಾತೃಪೂರ್ಣ ಯೋಜನೆಗೆ ಎಲ್ಲರ ಸಹಕಾರ ಮುಖ್ಯವಾಗಿದ್ದು, ಇದರಿಂದ ಮಹಿಳೆ ಮತ್ತು ಮಕ್ಕಳ ಮರಣ ಪ್ರಮಾಣ ತಗ್ಗಿಸಬಹುದು ಎಂದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.
ನಗರದ ಡಾ| ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಶುಕ್ರವಾರ ಜರುಗಿದ ಮಾತೃಪೂರ್ಣ ಯೋಜನೆ ಅನುಷ್ಠಾನ ಪೂರ್ವಭಾವಿಯಾಗಿ ಹಮ್ಮಿಕೊಂಡ ಬೆಳಗಾವಿ ವಿಭಾಗಮಟ್ಟದ ಅಧಿಕಾರಿಗಳು ಮತ್ತು ಅಂಗನವಾಡಿ ಮೇಲ್ವಿಚಾರಕಿಯರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಾತೃಪೂರ್ಣ ಯೋಜನೆಯ ಲಾಭವನ್ನು ಎಲ್ಲರೂ ಪಡೆಯಬೇಕು. ಅಲೆಮಾರಿಗಳು, ರೈತ ಕಾರ್ಮಿಕ ಹೆಣ್ಣು ಮಕ್ಕಳು, ಗುಡ್ಡಗಾಡು ಪ್ರದೇಶದ ವಾಸಿಗಳು ಅಂಗನವಾಡಿಗಳು ದೂರ ಇರುವ ಕಾರಣಗರ್ಭಿಣಿಯರಿಗೆ ಪ್ರತಿನಿತ್ಯ ಬರಲು ತೊಂದರೆಗಳಿದ್ದರೆ ಅವುಗಳನ್ನು ತಿಳಿದು ಸ್ಥಳೀಯ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಮಹಿಳೆ ಮತ್ತು ಮಕ್ಕಳಿಗೆ ಸಂಬಂ ಧಿಸಿದ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ಮೇಲ್ವಿಚಾರಕಿಯರು ಸಮಸ್ಯೆಗೆ ತಕ್ಷಣ ಪರಿಹಾರ ನೀಡಬೇಕು. ನಿಮ್ಮಿಂದ ಪರಿಹಾರ ನೀಡಲು ಸಾಧ್ಯವಾಗದಿದ್ದಲ್ಲಿ ಮೇಲ್ವಿಚಾರಕಿಯರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಬೇಕು. ಸರ್ಕಾರ ಮಟ್ಟದಲ್ಲಿ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು.
ಅಂಗನವಾಡಿ ಕಾರ್ಯಕರ್ತರಲ್ಲಿ ಈ ಯೋಜನೆ ಬಗ್ಗೆ ಅರಿವು ಮೂಡಬೇಕು. ಪ್ರತಿ ಗರ್ಭಿಣಿ ಮಹಿಳೆಯರಿಗೆ ಅವರ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆ ಬಗ್ಗೆ ತಿಳಿಸಬೇಕು. ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿಯಲ್ಲಿ ನೀಡುವ ಪೌಷ್ಟಿಕ ಆಹಾರ ಸೇವಿಸಬೇಕು. ಇದರಿಂದ ದೇಹಕ್ಕೆ ಬೇಕಾದ ಎಲ್ಲ ಅಗತ್ಯ ವಿಟಾಮಿನ್ ದೊರೆಯುತ್ತದೆ ಎಂದರು.
ಸಂವಾದ: ನಂತರ ಮೇಲ್ವಿಚಾರಕಿಯರು ಮತ್ತು ಅ ಧಿಕಾರಿಗಳೊಂದಿಗೆ ನಡೆದ ಸಂವಾದದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿಗೆ ಬಾರದಿರಲು ಏನೇ ಕಾರಣಗಳಿದ್ದರೂ ತಿಳಿಸುವಂತೆ ಸಚಿವರು ಕೇಳಿದರು. ಇದಕ್ಕೆ ಉತ್ತರಿಸಿದ ಮೇಲ್ವಿಚಾರಕಿಯರು, ಗಡಿ ಪ್ರದೇಶದಲ್ಲಿ ಭಾಷೆಯ ಸಮಸ್ಯೆ, ಶ್ರೀಮಂತರು, ಸ್ವಪ್ರತಿಷ್ಠೆಯುಳ್ಳವರು, ಜಾತಿಯತೆ ಮಾಡುವ ಕೆಲವರು ಈ ರೀತಿ ಅಂಗನವಾಡಿಗೆ ಬಂದು ಊಟ ಸೇವಿಸಲು ನಿರಾಕರಿಸುವ ಸಮಸ್ಯೆಗಳು ಇರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ನಿರ್ದೇಶಕರಾದ ದೀಪಾ ಚೋಳನ್, ಜಂಟಿ ನಿರ್ದೇಶಕ ಕಲಮದಾನಿ, ಉಪ ನಿರ್ದೇಶಕ ಬಿ.ಎಸ್.ಕಲಾದಗಿ, ಡಿಎಚ್‌ಒ ಓ.ಆರ್.ಎಮ್.ದೊಡ್ಡಮನಿ, ಬೆಳಗಾವಿ ವಿಭಾಗಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.