ಇಸ್ಲಮಾಬಾದ್: ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರಫ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.
ಪಾಕಿಸ್ಥಾನದ ವಿಶೇಷ ನ್ಯಾಯಾಲಯ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರಫ್ ಗೆ ದೇಶದ್ರೋಹದ ಆರೋಪದಲ್ಲಿ ಗಲ್ಲು ಶಿಕ್ಷೆ ವಿಧಿಸಿದೆ.
ನಾಲ್ಕು ವರ್ಷದ ಹಿಂದೆ ಲಂಡನ್ ಗೆ ಪರಾರಿಯಾಗಿದ್ದ ಮುಶ್ರಫ್ ನಂತರ ಕಳೆದ ಪಾಕಿಸ್ಥಾನ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತ್ತೆ ಪಾಕಿಸ್ಥಾನಕ್ಕೆ ಆಗಮಿಸಿದ್ದರು.
ಸದ್ಯ ದುಬೈನಲ್ಲಿ ನೆಲೆಸಿರುವ ಪರ್ವೇಜ್ ಮುಶ್ರಫ್ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಪಾಕಿಸ್ಥಾನದ ಸೇನಾಧಿಕಾರಿಯಾಗಿದ್ದ ಪರ್ವೇಜ್ ನಂತರ ದಂಗೆ ನಡೆಸಿ ದೇಶದ ಚುಕ್ಕಾಣಿ ಹಿಡಿದಿದ್ದರು. 1999ರಿಂದ 2008ರವರೆಗೆ ಪಾಕಿಸ್ಥಾನದಲ್ಲಿ ಅಧಿಕಾರ ಅನುಭವಿಸಿದ್ದ ಮುಶ್ರಫ್ ಸಮಯದಲ್ಲೇ ಭಾರತ- ಪಾಕ್ ನಡುವಿನ ಕಾರ್ಗಿಲ್ ಯುದ್ದವೂ ನಡೆದಿತ್ತು.
ನವೆಂಬರ್ 19ರಂದು ವಿಚಾರಣೆ ಅಂತ್ಯಗೊಳಿಸಿದ್ದ ವಿಶೇಷ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ತ್ರಿಸದ್ಯ ಪೀಠ 74ರ ಹರೆಯದ ಪರ್ವೇಜ್ ಮುಶ್ರಫ್ ಗೆ ಗಲ್ಲು ಶಿಕ್ಷೆ ಪ್ರಕಟಿಸಿದೆ.