Advertisement

ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ? 

07:00 AM Apr 21, 2018 | |

ಹೊಸದಿಲ್ಲಿ: 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವಂಥ ರಾಕ್ಷಸರಿಗೆ ಮರಣದಂಡನೆ ವಿಧಿಸುವ ಕುರಿತಂತೆ ಪೋಕ್ಸೋ ಕಾಯ್ದೆಗೆ ತಿದ್ದುಪಡಿ ತರಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಅರಿಕೆ ಮಾಡಿಕೊಂಡಿದೆ. ಇದೇ ವೇಳೆ, ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಮಾತುಗಳೂ ಕೇಳಿಬಂದಿದ್ದು, ಶನಿವಾರ ನಡೆಯಲಿರುವ ಕೇಂದ್ರ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ.

Advertisement

ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಆರೋಪಿಗಳಿಗೆ ಗರಿಷ್ಠ ಮಟ್ಟದ ಶಿಕ್ಷೆ ವಿಧಿಸಬೇಕೆಂಬ ಕೂಗು ರಾಷ್ಟ್ರ ವ್ಯಾಪಿ ಕೇಳಿ ಬರುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. 8 ತಿಂಗಳ ಶಿಶುವಿನ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರಕಾರ ಈ ರೀತಿ ಪ್ರತಿಕ್ರಿಯೆ ನೀಡಿದೆ. ಮುಂದಿನ ವಿಚಾರಣೆ 27ರಂದು ನಡೆಯಲಿದೆ. ಈ ಹಿಂದೆ ಕಥುವಾ ಪ್ರಕರಣ ಸಂಬಂಧ ಅಲಾಖ್‌ ಅಲೋಕ್‌ ಶ್ರೀವಾಸ್ತವ  ಇದೇ ಆಗ್ರಹ ಮಾಡಿದ್ದರು. ಆಗ ಎಲ್ಲದಕ್ಕೂ ಗಲ್ಲು ಶಿಕ್ಷೆಯೇ ಪರಿಹಾರವಲ್ಲ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿ.ಎಸ್‌ ನರಸಿಂಹ ಹೇಳಿದ್ದರು.  ಕೇಂದ್ರ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಈ ಅಂಶ ಪ್ರಸ್ತಾಪಿಸಿದ್ದರು. 

ಸಂಬಂಧಿ ಇದ್ದಾರಾ?: “ನಿಮ್ಮ ಸಂಬಂಧಿ ಯಾರಾದರೂ ಅತ್ಯಾಚಾರಕ್ಕೀಡಾಗಿದ್ದಾರಾ? ಸಂತ್ರಸ್ತರ ಕುಟುಂಬದ ಯಾರಾದರೂ ನಮ್ಮ ಮುಂದೆ ಬಂದು ನಿಂತಿದ್ದಾರಾ? ಹೀಗೆಂದು ಪ್ರಶ್ನಿಸಿದ್ದು ಸುಪ್ರೀಂ ಕೋರ್ಟ್‌. ಉನ್ನಾವ್‌ ಅತ್ಯಾಚಾರ ಪ್ರಕರಣದಲ್ಲಿ ಜನ ಪ್ರತಿನಿಧಿಗಳು ಭಾಗಿಯಾಗಿದ್ದು, ಅವರ ವಿರುದ್ಧ ಪೊಲೀಸರು ಆರೋಪಪಟ್ಟಿ ದಾಖ ಲಿಸುತ್ತಿಲ್ಲ ಎಂದು ಆರೋಪಿಸಿ ಕೋರ್ಟ್‌ ಮೊರೆ ಹೋಗಿದ್ದ ವಕೀಲರೊಬ್ಬರಿಗೆ ನ್ಯಾಯಪೀಠ ಇಂಥ ಪ್ರಶ್ನೆ ಹಾಕಿದೆ. ಉನ್ನಾವ್‌ ಪ್ರಕರಣಕ್ಕೂ, ನಿಮಗೂ ಸಂಬಂಧ ಇಲ್ಲದಿರುವಾಗ ಅರ್ಜಿ ಸಲ್ಲಿಸಿದ್ದೇಕೆ ಎಂದೂ ಪ್ರಶ್ನಿಸಿರುವ ನ್ಯಾಯಪೀಠ, ವಕೀಲ ಶರ್ಮಾ ಅವರ ಅರ್ಜಿ ವಜಾ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next