Advertisement

45 ದಿನದಲ್ಲೇ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ: ವ್ಯಾಪಕ ಪ್ರಶಂಸೆ

06:00 AM Sep 17, 2018 | Team Udayavani |

ಕೋಲಾರ: ದೆಹಲಿಯ ನಿರ್ಭಯಾ ಪ್ರಕರಣ ಹೋಲುವಂತೆ ಮಾಲೂರಿನ ವಿದ್ಯಾರ್ಥಿನಿ ರಕ್ಷಿತಾಳನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣ ನಡೆದು 45 ದಿನಗಳಲ್ಲೇ ಆರೋಪಿಗೆ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿರುವುದು ನ್ಯಾಯಾಲಯ ಹಾಗೂ ಪೊಲೀಸ್‌ ವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಕೋಲಾರ ಜಿಲ್ಲೆಯ ಮಾಲೂರಿನ ರೈಲ್ವೆ ನಿಲ್ದಾಣ ಸೇತುವೆ ಬಳಿ ಆ.1 ರಂದು ರಕ್ಷಿತಾ ಕೊಲೆ ಪ್ರಕರಣ ನಡೆದಾಗ ರಾತ್ರಿ 7 ರಿಂದ 8 ಗಂಟೆಯೊಳಗೆ ತನಿಖಾಧಿಕಾರಿ ಮಾಲೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ಸತೀಶ್‌ ನೇತೃತ್ವದ ತಂಡ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು ಆರೋಪಿಯನ್ನು 48 ಗಂಟೆಯೊಳಗೆ ಪತ್ತೆ ಹಚ್ಚಲು ಹಾಗೂ 45 ದಿನಗಳಲ್ಲೇ ಗಲ್ಲು ಶಿಕ್ಷೆ ವಿಧಿಸಲು ಪ್ರಮುಖ ಕಾರಣವಾಗಿದೆ.

ಪ್ರಮುಖ ಸಾಕ್ಷಿಗಳು: ಘಟನೆ ನಡೆದ ಸ್ಥಳದ ಕುರಿತು ರಕ್ಷಿತಾಳ ಜತೆಯಲ್ಲಿದ್ದ ಆಕೆಯ ಗೆಳತಿ ನೀಡಿದ ಸುಳಿವು ಹಾಗೂ ಸ್ಥಳದಲ್ಲಿ ರಕ್ಷಿತಾಳ ಶಾಲಾ ಬ್ಯಾಗ್‌, ಆಕೆಯ ಹಾಗೂ ಆರೋಪಿಯ ಚಪ್ಪಲಿಗಳನ್ನು ಪೊಲೀಸರು ಸಂಗ್ರಹಿಸಿ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸುವವರೆಗೂ ಆರೋಪಿ ಸುರೇಶ್‌ಬಾಬು ಕೊಲೆ ಕೃತ್ಯ ನಡೆಸಿದಾಗ ಹಾಕಿಕೊಂಡಿದ್ದ ಬಟ್ಟೆಗಳನ್ನೇ ಧರಿಸಿದ್ದು, ಮತ್ತು ಘಟನೆ ಸ್ಥಳದಲ್ಲಿ ದೊರೆತ ಚಪ್ಪಲಿಗಳು ತನ್ನದೇ ಎಂದು ಒಪ್ಪಿಕೊಂಡಿದ್ದು ಕೂಡ ಆರೋಪ ಸಾಬೀತಿಗೆ ಪ್ರಮುಖ ಸಾಕ್ಷಿಯಾಗಿದೆ. ಆರೋಪಿಯ ಬಟ್ಟೆಯ ಮೇಲಿದ್ದ ರಕ್ತದ ಕಲೆಗಳು ರಕ್ಷಿತಾಳ ಡಿಎನ್‌ಎಗೆ ಹೋಲಿಕೆಯಾಗಿರುವುದನ್ನು ನ್ಯಾಯಾಲಯ ಪ್ರಮುಖ ಸಾಕ್ಷಿಯಾಗಿ ಬಳಸಲ್ಪಟ್ಟಿದೆ.

3 ದಿನದಲ್ಲೇ ಪ್ರಯೋಗಾಲಯ ವರದಿ: ಯಾವುದೇ ಅಪರಾಧ ಪ್ರಕರಣದಲ್ಲಿ ಕೃತ್ಯ ನಡೆದ ಸ್ಥಳದಲ್ಲಿ ಸಂಗ್ರಹಿಸಿದ ವಸ್ತುಗಳ, ಕಲೆಗಳ ಪ್ರಯೋಗಾಲಯದ ವರದಿ ಬರಲು ನಾಲ್ಕೈದು ತಿಂಗಳುಗಳೇ ಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಆರೋಪಿ ಅಂಗಿಯ ಮೇಲಿನ ರಕ್ತದ ಕಲೆಯ ವರದಿಯು ಕೇವಲ ಮೂರೇ ದಿನಗಳೊಳಗಾಗಿ ಪೊಲೀಸರ ಕೈಸೇರಿದೆ.

22 ದಿನಗಳೊಳಗೆ ಚಾರ್ಜ್‌ಶೀಟ್‌: ಯಾವುದೇ ಅಪರಾಧ ಪ್ರಕರಣದ ಆರೋಪ ಪಟ್ಟಿ ಸಲ್ಲಿಸಲು 3-4 ತಿಂಗಳು ಅಥವಾ ಕೆಲವೊಮ್ಮೆ ವರ್ಷವನ್ನೂ ತೆಗೆದುಕೊಳ್ಳುತ್ತದೆ. ಆದರೆ, ಈ ಪ್ರಕರಣದಲ್ಲಿ 201 ಪುಟಗಳ ಆರೋಪ ಪಟ್ಟಿಯನ್ನು ತನಿಖಾಧಿಕಾರಿ 22 ದಿನಗಳೊಳಗಾಗಿ ಸಲ್ಲಿಸುವ ಮೂಲಕ ತ್ವರಿತವಾಗಿ ನ್ಯಾಯ ಸಿಗಲು ಸಾಧ್ಯವಾಗಿದೆ.

Advertisement

ತನಿಖಾಧಿಕಾರಿ ಸಲ್ಲಿಸಿದ ಆರೋಪ ಪಟ್ಟಿ, ಸಾಕ್ಷಿಗಳಾಗಿ ಗುರುತಿಸಿದ್ದ 46 ಮಂದಿ ಪೈಕಿ 33 ಮಂದಿಯನ್ನು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದ್ದಲ್ಲದೇ ನ್ಯಾಯಾಧೀಶರಾದ ಬಿ.ಎಸ್‌.ರೇಖಾ ಇತರೇ ವ್ಯಾಜ್ಯಗಳ ವಿಲೇವಾರಿ ಒತ್ತಡದಲ್ಲಿಯೂ ರಕ್ಷಿತಾ ಕೊಲೆ ಪ್ರಕರಣದ 33 ಸಾಕ್ಷಿಗಳ ವಾದ ಆಲಿಸಿ ದಾಖಲಿಸಿಕೊಂಡು, ಆರೋಪಿ ಕ್ಯತ್ಯವನ್ನು ಸಾಬೀತುಪಡಿಸಿದ ನ್ಯಾಯಾಲಯ, ಘಟನೆ ನಡೆದ 45ನೇ ದಿನಕ್ಕೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ಈವರೆವಿಗೂ ಸುಮಾರು 45ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನ್ಯಾಯಾಧೀಶರಾದ ಬಿ.ಎಸ್‌.ರೇಖಾ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಲೂರಿನ ರಕ್ಷಿತಾ ಹಾಗೂ ಅದೇ ದಿನ ಮಾಸ್ತಿ ಸಮೀಪ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯ ನಾಲ್ವರು ಸೇರಿ ಒಟ್ಟು ಐವರಿಗೆ ಒಂದೇ ದಿನ ಒಬ್ಬರೇ ಗಲ್ಲು ಶಿಕ್ಷೆ ವಿಧಿಸಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ.

ರಕ್ಷಿತಾ ಕೊಲೆ ಪ್ರಕರಣದಲ್ಲಿ ಆರೋಪಿಗೆ 45 ದಿನದೊಳಗೆ ಗಲ್ಲು ಶಿಕ್ಷೆಯಾಗಿರುವುದು ಪೊಲೀಸ್‌ ಇಲಾಖೆಯ ಪ್ರಯತ್ನಕ್ಕೆ ಸಿಕ್ಕ ಪ್ರತಿಫ‌ಲವಾಗಿದೆ. ಎಸ್ಪಿ ಡಾ.ರೋಹಿಣಿ ಸಫೆಟ್‌ ಕಟೋಚ್‌ರ ಮಾರ್ಗದರ್ಶನದಲ್ಲಿ ಘಟನೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ತನಿಖೆ ನಡೆಸಿ ಬೇಗ ಆರೋಪ ಪಟ್ಟಿ ಸಲ್ಲಿಸಿದ್ದರಿಂದ ತ್ವರಿತವಾಗಿ ರಕ್ಷಿತಾ ಸಾವಿಗೆ ನ್ಯಾಯ ಒದಗಿಸುವಂತಾಗಿದೆ.
– ಸತೀಶ್‌, ರಕ್ಷಿತಾ ಪ್ರಕರಣದ ತನಿಖಾಧಿಕಾರಿ

ನ್ಯಾಯಾಲಯಕ್ಕೆ ಬಂದರೆ ಗೆದ್ದವರು ಸೋತ, ಸೋತವನು ಸತ್ತ ಎನ್ನುವ ಮಾತನ್ನು ಹುಸಿ ಮಾಡುವಂತೆ ಕೋಲಾರ ನ್ಯಾಯಾಲಯ 45 ದಿನಗಳೊಳಗಾಗಿ ರಕ್ಷಿತಾ ಆರೋಪಿ ಗಲ್ಲು ಶಿಕ್ಷೆ ವಿಧಿಸಿರುವುದು ಸ್ವಾಗತಾರ್ಹ.
– ಸತೀಶ್‌ ನ್ಯಾಯವಾದಿ, ಕೋಲಾರ.

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next