ಮಹದೇವಪುರ: ಕಾರ್ಖಾನೆಗಳ ಮತ್ತು ಅಪಾರ್ಟ್‌ಮೆಂಟ್‌ಗಳ ಕಲುಷಿತ ನೀರಿನಿಂದ ಬೆಳ್ಳಂದೂರು ವಾರ್ಡ್‌ನ ಹರಳೂರು ಕೆರೆಯಲ್ಲಿ ಮೀನುಗಳ ಮಾರಣ ಹೋಮವಾಗಿದೆ. ಕಳೆದ ಕೆಲ ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಬಾರೀ ಮಳೆ ಹಿನ್ನೆಲೆ ಮಳೆ ನೀರಿನ ಜೊತೆ ಕಾರ್ಖಾನೆಗಳ ಹಾಗೂ ಅಪಾರ್ಟ್‌ಮೆಂಟ್‌ಗಳ ಚರಂಡಿ ನೀರು ನೇರವಾಗಿ ಕೆರೆಗೆ ಸೇರುತ್ತಿರುವುದರಿಂದ ಸಾವಿರಾರು ಮೀನುಗಳು ಸಾವಿಗೀಡಾಗಿವೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಪಾರ್ಟ್‌ಮೆಂಟ್ ಮತ್ತು ಕಾರ್ಖಾನೆಗಳಲ್ಲಿ ಎಸ್‌ಟಿಪಿ ಘಟಕ ಅಳವಡಿಸಿಕೊಳ್ಳಲು ಕಟ್ಟು ನಿಟ್ಟಿನ ಆದೇಶ ನೀಡಿದ್ದರೂ ಸರ್ಕಾರ ಕ್ರಮ ಜರುಗಿಸುವಲ್ಲಿ ವಿಫಲವಾಗಿರುವುದರಿಂದ ಕಲುಷಿತ ರಾಸಾಯನಿಕ ತ್ಯಾಜ್ಯ ಕೆರೆ ಸೇರಿ ಜಲಚರ ನಾಶಕ್ಕೆ ಕಾರಣವಾಗಿದೆ.
ಹರಳೂರು ಕೆರೆಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದರೂ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಕೆರೆಯ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್ ಮತ್ತು ಕಾರ್ಖಾನೆಗಳೊಂದಿಗೆ ಅಧಿಕಾರಿಗಳು ಶಾಮಿಲಾಗಿ ಕೆರೆಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ ಎಂದು ಗುತ್ತಿಗೆದಾರ ಶ್ರೀನಿವಾಸ್ ಆರೋಪಿಸುತ್ತಿದ್ದಾರೆ.
ಮೂರು ದಿನಗಳಿಂದ ಕೆರೆಯಲ್ಲಿ ಮೀನುಗಳು ಸಾಯುತ್ತಿವೆ ಈ ಬಗ್ಗೆ ಸಹ ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಅಧಿಕಾರಿ ಸಹ ಬೇಟಿ ನೀಡಿಲ್ಲ. ಕೆರೆಯಲ್ಲಿ ಮೀನು ಸಾಕಾಣೆ ಮಾಡಲು ಮೀನುಗಾರಿಕೆ ಇಲಾಖೆಯಿಂದ ಗುತ್ತಿಗೆ ಪಡೆದು ಕೆಳದ ತಿಂಗಳು 3 ಲಕ್ಷ ಮರಿಗಳು ಬಿಡಲಾಗಿತ್ತು. ಮರಿ ಮತ್ತು ದೊಡ್ಡ ಮೀನುಗಳು ಸಾವಿಗೀಡಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಶ್ರೀನಿವಾಸ್ ಹೇಳಿದರು.