ಮಡಿಕೇರಿ: ಮಡಿಕೇರಿಯಲ್ಲಿ 2016ರಲ್ಲಿ ನಡೆದ ಡಿವೈಎಸ್‌ಪಿ ಮಾದಪಂಡ ಗಣಪತಿ ಅವರ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆ ಯನ್ನು ಸುಪ್ರೀಂ ಕೋರ್ಟ್ ನಿರ್ದೇಶನ ದಂತೆ ಚೆನ್ನೈಯ ಸಿಬಿಐ ಪೂರ್ಣ ಗೊಳಿಸಿದ್ದು, ಬುಧವಾರ ಅಧಿಕಾರಿಗಳು ತನಿಖಾ ವರದಿಯನ್ನು ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದರು.
ಚೆನ್ನೈ ಸಿಬಿಐ ತಂಡದ ಡಿವೈಎಸ್‌ಪಿ ರವಿ ಮತ್ತು ಸಿಬಿಐಯ ಸರಕಾರಿ ವಕೀಲ ಸುಬೋಧ್ ನೇತೃತ್ವದಲ್ಲಿ ಕೋರ್ಟ್‌ಗೆ ಆಗಮಿಸಿದ ನಾಲ್ವರು ಸಿಬಿಐ ಅಧಿಕಾರಿಗಳು ತೆರೆದ ಕೋರ್ಟ್ ನಲ್ಲಿ ಒಟ್ಟು 262 ಪುಟಗಳ ಸುದೀರ್ಘ ತನಿಖಾ ವರದಿಯನ್ನು ಸಲ್ಲಿಸಿದರು.
ಡಿವೈಎಸ್‌ಪಿ ಗಣಪತಿ ಸಾವಿನ ಕುರಿತಂತೆ ಮೃತರ ಸಂಬಂಧಿಕರು ಜೆಎಂಎಫ್ಸಿ ಕೋರ್ಟ್ ಮೊರೆ ಹೋಗಿ ನಗರ ಪೊಲೀಸರಿಗೆ ಪ್ರಕರಣದ ಕುರಿತು ಎಫ್ಐಆರ್ ದಾಖಲಿಸಲು ಸೂಚಿಸುವಂತೆ ಮನವಿ ಮಾಡಿದ್ದರು. ಈ ಸಂದರ್ಭ ಅಂದಿನ ನ್ಯಾಯಮೂರ್ತಿಗಳು ನಗರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಸೂಚಿಸಿದ್ದರು. ಆದರೆ ರಾಜ್ಯ ಸರಕಾರ ಸಿಐಡಿಗೆ ಪ್ರಕರಣವನ್ನು ನೀಡಿದ ಪರಿಣಾಮ ನಗರದ ಪೊಲೀಸರಿಗೆ ತನಿಖೆ ನಡೆಸಲು ಸಾಧ್ಯವಾಗಲಿಲ್ಲ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತನಿಖೆಯನ್ನು ಕೈಗೆತ್ತಿಕೊಂಡ ಚೆನ್ನೈ ಸಿಬಿಐ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿತ್ತು.
ಪ್ರಕರಣದ ಹಿನ್ನೆಲೆ
2017ರ ಜು.7ರಂದು ಮಡಿಕೇರಿಗೆ ಆಗಮಿಸಿದ್ದ ಡಿವೈಎಸ್‌ಪಿ ಗಣಪತಿ, ಮಡಿಕೇರಿಯ ಸುದ್ದಿ ವಾಹಿನಿಯೊಂದಕ್ಕೆ ತೆರಳಿ ಹಲವು ಪ್ರಭಾವೀ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ಬಳಿಕ ಅವರಿದ್ದ ಲಾಡ್ಜ್ ಕೊಠಡಿಯಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿತ್ತು.