Advertisement

ಕೊಕ್ಕರೆ ಬೆಳ್ಳೂರಿನಲ್ಲಿ ಹೆಜ್ಜಾರ್ಲೆ ಸರಣಿ ಸಾವು

03:31 PM Nov 16, 2019 | Suhan S |

ಮಂಡ್ಯ: ಜಿಲ್ಲೆಯ ಪ್ರಸಿದ್ಧ ಪಕ್ಷಿಧಾಮಗಳಲ್ಲಿ ಒಂದಾದ ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್‌ ಸಾವಿನ ಸರಣಿ ಮುಂದುವರಿದಿದೆ. ಕಳೆದೊಂದು ವಾರದಿಂದ ಪಕ್ಷಿಗಳ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

Advertisement

ಪೆಲಿಕಾನ್‌ ಶವಪರೀಕ್ಷೆ ವರದಿಯಲ್ಲೆಲ್ಲೂ ಹಕ್ಕಿಜ್ವರದಿಂದ ಸಾವನ್ನಪ್ಪಿದೆ ಎನ್ನುವುದು ದಾಖಲಾಗಿಲ್ಲ. ಜಂತುಹುಳುಗಳ ಹೆಚ್ಚಳದಿಂದ ಪಕ್ಷಿಗಳು ಸಾವನ್ನಪ್ಪಿವೆ ಎನ್ನುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿರುವ ಅಂಶವಾಗಿದೆ.

ವೈದ್ಯರಿಗೇ ಗೊಂದಲ: ಜಂತುಹುಳು ಪಕ್ಷಿಗಳ ದೇಹಕ್ಕೆ ಯಾವ ಮೂಲದಿಂದ ಸೇರುತ್ತಿದೆ ಎನ್ನುವುದನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಮೀನುಗಳ ಭಕ್ಷಣೆಯಿಂದ ಹೆಚ್ಚಾಗುತ್ತಿವೆಯೋ ಅಥವಾ ಕಲುಷಿತ ನೀರು ಕುಡಿದ ಪರಿಣಾಮದಿಂದ ಪಕ್ಷಿಗಳ ಹೊಟ್ಟೆಯೊಳಗೆ ಜಂತುಹುಳುಗಳ ಪ್ರಮಾಣ ಜಾಸ್ತಿಯಾಗುತ್ತಿದೆಯೋ ಎನ್ನುವ ಗೊಂದಲ ಪಶು ವೈದ್ಯರನ್ನು ಕಾಡುತ್ತಿದೆ.ಬೆಂಗಳೂರಿನ ಪ್ರಯೋಗಾಲಯ ದಿಂದ ಬಂದ ವರದಿ ಹಾಗೂ ಮದ್ದೂರು ತಾಲೂಕು ಪಶು ವೈದ್ಯರು ನಡೆಸಿದ ಮೃತ ಪೆಲಿಕಾನ್‌ ಪಕ್ಷಿಗಳ ಶವಪರೀಕ್ಷೆಯಲ್ಲೂ ಇದೇ ಅಂಶ ಪತ್ತೆಯಾಗಿದೆ. ಪಕ್ಷಿಗಳ ಹೊಟ್ಟೆಯನ್ನು ಕೊಯ್ದ ವೇಳೆ ಅಸಂಖ್ಯಾತ ಜಂತುಹುಳುಗಳಿರುವುದು ಕಂಡುಬಂದಿದೆ.

ತೂತು ಬಿದ್ದ ಕರುಳು: ಮರದಿಂದ ಅಸ್ವಸ್ಥಗೊಂಡು ಕೆಳಗೆ ಬಿದ್ದಿರುವ ಪೆಲಿಕಾನ್‌ವೊಂದರ ಶವಪರೀಕ್ಷೆ ನಡೆಸಿದ ಸಮಯದಲ್ಲಿ ಪಕ್ಷಿಯ ಹೊಟ್ಟೆಯೊಳಗೆ ಸುಮಾರು 400 ಎಂಎಲ್‌ನಷ್ಟು ಜಂತುಹುಳು ಪತ್ತೆಯಾಗಿವೆ. ಅವು ಕರುಳನ್ನೇ ಉದ್ದಕ್ಕೂ ತಿಂದು ಹಾಕಿರುವುದು ಕಂಡುಬಂದಿದೆ. ಇದರಿಂದ ನಿತ್ರಾಣಗೊಂಡ ಪಕ್ಷಿಗಳು ಕೆಳಗೆ ಬಿದ್ದು ಅಸ್ವಸ್ಥಗೊಂಡ ಬಳಿಕ ಸಾವನ್ನಪ್ಪುತ್ತಿವೆ ಎಂದು ಹೇಳಲಾಗಿದೆ.

ಜಂತುಹುಳ ಹೆಚ್ಚಳ: ಪಕ್ಷಿಗಳ ದೇಹದೊಳಗೆ ಜಂತುಹುಳುಗಳು ಹೆಚ್ಚಾಗುತ್ತಿರುವ ಅಂಶವೊಂದನ್ನು ಹೊರತುಪಡಿಸಿ ಸಾವಿಗೆ ಬೇರೆ ಸಂಗತಿಗಳೇ ಪತ್ತೆಯಾಗುತ್ತಿಲ್ಲ. ಕಳೆದ ಎರಡು ವರ್ಷಗಳ ಹಿಂದೆಯೂ ಪೆಲಿಕಾನ್‌ಗಳು ಸಾವನ್ನಪ್ಪಿದ ಸಮಯದಲ್ಲೂ ಇದೇ ಸಂಗತಿ ಬೆಳಕಿಗೆ ಬಂದಿತ್ತು. ಆದರೆ, ಪ್ರತಿ ವರ್ಷ ಇದು ಮುಂದುವರಿಯುತ್ತಿದ್ದರೂ ಪಕ್ಷಿಗಳ ಸಾವನ್ನು ತಡೆಯುವುದಕ್ಕೆ ಈವರೆಗೆ ಸಾಧ್ಯವಾಗದಿರುವುದು ಪಕ್ಷಿಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.

Advertisement

ಪತ್ತೆ ಮಾಡುವುದು ಸವಾಲು: ಜಂತುಹುಳುಗಳ ಪ್ರಮಾಣ ಪಕ್ಷಿಗಳ ದೇಹದಲ್ಲಿ ಹೆಚ್ಚುತ್ತಿರುವುದಕ್ಕೆ ಕಾರಣವೇನು ಎನ್ನುವುದು ಪಶು ವೈದ್ಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊಕ್ಕರೆ ಬೆಳ್ಳೂರು ವ್ಯಾಪ್ತಿಯಲ್ಲಿ ಸುಮಾರು 9 ಕೆರೆಗಳಿವೆ. ಎಲ್ಲಾ ಕೆರೆಗಳಲ್ಲೂ ಮೀನುಗಳಿಗೆ. ಸಂತಾನಾಭಿವೃದ್ಧಿಗೆ ಬಂದಿರುವ ಪಕ್ಷಿಗಳು ಯಾವ ಕೆರೆಯ ನೀರು ಕುಡಿದು ಅಥವಾ ಮೀನು ತಿಂದು ಜಂತು ಹುಳುಗಳು ಹೆಚ್ಚಾಗುತ್ತಿದೆ ಎನ್ನುವುದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.

ನೀರು ಅಥವಾ ಮೀನಿನಿಂದ ಜಂತುಹುಳುಗಳು ಹೆಚ್ಚಾಗುತ್ತಿರುವುದನ್ನು ಶಂಕಿಸಿ ಅದಕ್ಕೆ ಏನಾದರೂ ಔಷಧ ಬೆರೆಸಿದಲ್ಲಿ ಮೀನುಗಳು ಸಾವನ್ನಪ್ಪುವ ಅಥವಾ ಕೆರೆ ನೀರು ಕಲುಷಿತಗೊಂಡು ಬೇರೆ ರೀತಿಯ ಪರಿಣಾಮ ಬೀರಬಹುದೆಂಬ ಆತಂಕ ಪಶು ವೈದ್ಯರನ್ನು ಕಾಡುತ್ತಿದೆ.

ಔಷಧೋಪಚಾರ ಅಸಾಧ್ಯ: ಸಂತಾನಾಭಿವೃದ್ಧಿಗಾಗಿ ಆಗಮಿಸಿ ಸ್ವೇಚ್ಚೆಯಿಂದ ಹಾರಾಡುತ್ತಿರುವ ಪಕ್ಷಿಗಳನ್ನು ಹಿಡಿದು ಔಷಧ ನೀಡೋಣವೆಂದರೆ ಪಕ್ಷಿಗಳಿಗೆ ಸ್ವಾತಂತ್ರ್ಯಕ್ಕೆ ಭಂಗ ಉಂಟು ಮಾಡಿದಂತಾಗುವುದು. ಜೊತೆಗೆ ಮುಂದಿನ ವರ್ಷದಿಂದ ಪಕ್ಷಿಗಳು ಬಾರದೇ ಹೋಗುವ ಸಾಧ್ಯತೆಗಳೂ ಇವೆ. ಇದು ಮತ್ತೂಂದು ರೀತಿಯ ಸಮಸ್ಯೆಗೆ ಕಾರಣವಾಗಲಿದೆ. ಅಲ್ಲದೆ, ಎಲ್ಲಾ ಪಕ್ಷಿಗಳನ್ನು ಹಿಡಿದು ಪರೀಕ್ಷೆಗೊಳಪಡಿಸುವುದು ಸುಲಭ ಸಾಧ್ಯವೂ ಅಲ್ಲ. ಪಕ್ಷಿಗಳು ಬಹಳ ಎತ್ತರದ ಪ್ರದೇಶಗಳಲ್ಲಿ ನೆಲೆಸಿರುವುದರಿಂದ ಅಸ್ವಸ್ಥಗೊಂಡ ಪಕ್ಷಿಗಳನ್ನು ಗುರುತಿಸುವುದು ಅಸಾಧ್ಯದ ಕೆಲಸವಾಗಿದೆ ಎಂದು ಪಶು ವೈದ್ಯ ಸತೀಶ್‌ ಅವರು ಉದಯವಾಣಿಗೆ ತಿಳಿಸಿದರು.

ಕೆಳಗೆ ಬಿದ್ದ ಪಕ್ಷಿಗಳನ್ನು ಉಳಿಸಲಾಗದು: ಮರಗಳ ಎತ್ತರದಲ್ಲಿ ಗೂಡು ಕಟ್ಟಿಕೊಂಡು ನೆಲೆಸಿರುವ ಹೆಜ್ಜಾರ್ಲೆಗಳು ಅಸ್ವಸ್ಥಗೊಂಡು ನೆಲಕ್ಕೆ ಬೀಳುತ್ತಿವೆ. ಈ ಸಂದರ್ಭದಲ್ಲಿ ಅವುಗಳನ್ನು ಬದುಕಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಎತ್ತರದಿಂದ ಕೆಳಗೆ ಪಕ್ಷಿಗಳು ಬಿದ್ದ ಕೂಡಲೇ ದೇಹದೊಳಗೆ ಹೃದಯಸ್ತಂಭನ,ಮ ಬೆನ್ನುಮೂಳೆ ಅಥವಾ ಕತ್ತು ಮುರಿತಕ್ಕೆ ಒಳಗಾಗುತ್ತಿವೆ. ಈ ಸಮಯದಲ್ಲಿ ಪಕ್ಷಿಗಳಿಗೆ ಚಿಕಿತ್ಸೆ ನೀಡಿ ಬದುಕಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅವು 24 ಗಂಟೆಯೊಳಗೆ ಸಾವನ್ನಪ್ಪುತ್ತವೆ ಎಂದು ಹೇಳಿದರು.

ಪಕ್ಷಿಗಳ ಸಾವನ್ನು ತಡೆಯುವುದಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಮರಗಳ ಕೆಳಭಾಗದಲ್ಲಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದನ್ನು ಹೊರತುಪಡಿಸಿದರೆ ಉಳಿದಂತೆ ಇನ್ನಾವುದೇ ಪರ್ಯಾಯ ಮಾರ್ಗಗಳನ್ನು ಅನುಸರಿಸುವುದಕ್ಕೆ ಅರಣ್ಯ ಇಲಾಖೆ ಹಾಗೂ ಪಶುಪಾಲನಾ ಇಲಾಖೆಯಿಂದ ಸಾಧ್ಯವಾಗದೆ ಕೈಚೆಲ್ಲಿ ಕುಳಿತಿವೆ

ಪೆಲಿಕಾನ್‌ಗಳಿಗೆ ಹಕ್ಕಿಜ್ವರದ ಭೀತಿ ಇಲ್ಲ! :  ಕಳೆದ 20 ದಿನಗಳಲ್ಲಿ ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಮೂರು ಪೆಲಿಕಾನ್‌ ಗಳು ಸಾವನ್ನಪ್ಪಿವೆ. ಹಕ್ಕಿಜ್ವರ ಹರಡಿರಬಹುದೆಂಬ ಆತಂಕ ವ್ಯಕ್ತವಾಗಿದ್ದರೂ ಅದು ದೃಢಪಟ್ಟಿಲ್ಲ. ಅಲ್ಲಿಯೂ ಪಕ್ಷಿಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಲುಷಿತ ನೀರು ಹಾಗೂ ಮೀನು ತಿಂದು ಪಕ್ಷಿಗಳು ಸಾವನ್ನಪ್ಪಿರಬಹುದೆಂದುಹೇಳಲಾಗುತ್ತಿದೆ. ಅದೇ ರೀತಿ ಕೊಕ್ಕರೆ ಬೆಳ್ಳೂರಿನಲ್ಲಿ ಹಕ್ಕಿಜ್ವರದ ಭೀತಿ ಇಲ್ಲ. ಜಂತುಹುಳುಗಳ ಕಾರಣದಿಂದ ಹೆಜ್ಜಾರ್ಲೆಗಳು ಸಾವನ್ನಪ್ಪಿವೆ ಎಂದುವೈದ್ಯಕೀಯ ಪರೀಕ್ಷಾ ವರದಿಗಳು ಖಚಿತಪಡಿಸಿವೆ. ಕುಕ್ಕರಹಳ್ಳಿಯಲ್ಲಿ ಸಾವನ್ನಪ್ಪಿರುವ ಪೆಲಿಕಾನ್‌ಗಳು ಕೊಕ್ಕರೆ ಬೆಳ್ಳೂರಿನಿಂದ ಹಾರಿಹೋಗಿರುವ ಪಕ್ಷಿಗಳೇ ಎನ್ನುವುದೂ ಯಾರಿಗೂ ಗೊತ್ತಿಲ್ಲದ ಅಂಶವಾಗಿದೆ.

ಮೃತ ಪೆಲಿಕಾನ್‌ಗಳನ್ನು ಶವಪರೀಕ್ಷೆಗೆ ಒಳಪಡಿಸಿದಾಗ ಅವುಗಳ ಹೊಟ್ಟೆಯೊಳಗೆ ಜಂತುಹುಳುಗಳಿರುವುದು ಪತ್ತೆಯಾಗಿದೆ. ಜಂತುಹುಳುಗಳ ಹೆಚ್ಚಳಕ್ಕೆ ಕಾರಣವೇನೆಂಬುದನ್ನು ಗುರುತಿಸುವುದು ಕಷ್ಟವಾಗಿದೆ. ಮೀನುಗಳ ಸೇವನೆ ಅಥವಾಕುಡಿಯುವ ನೀರು ಇದಕ್ಕೆ ಕಾರಣವೋ ಎನ್ನುವುದು ತಿಳಿಯದಾಗಿದೆ. ಸತೀಶ್‌, ಪಶು ವೈದ್ಯ

 

-ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next