ಉಡುಪಿ : ಪ್ರೀತಿ, ಪ್ರೇಮ ಎಂದು 8 ವರ್ಷಗಳ ಕಾಲ ಸುತ್ತಾಡಿ ಮದುವೆ ವಿಚಾರ ಬಂದೊಡನೆ ಉಂಟಾದ ಮನಸ್ತಾಪ ಪ್ರೇಮಿಗಳಿಬ್ಬರ ಕೊಲೆಯಲ್ಲಿ ಅಂತ್ಯಕಂಡಿದೆ. ಸೋಮ ವಾರ ಯುವತಿ ಮೃತಪಟ್ಟಿದ್ದರೆ ಮಂಗಳವಾರ ಯುವಕನೂ ಮೃತ ಪಟ್ಟಿದ್ದಾನೆ.
ಸೋಮವಾರ ಕಲ್ಯಾಣಪುರ ಸಂತೆಕಟ್ಟೆಯ ರೋಬೋಸಾಫ್ಟ್ ಸಮೀಪದ ರಾ.ಹೆ.66ರಲ್ಲಿ ಪ್ರಿಯತಮೆ ಸೌಮ್ಯಾಳನ್ನು ಚೂರಿಯಿಂದ ಇರಿದು ಕೊಲೆಗೈದ ಯುವಕ ಸಂದೇಶ್ ಕುಲಾಲ್ ಬಳಿಕ ಅದೇ ಚೂರಿಯಿಂದ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಗಾಯಗೊಡು ಮಣಿಪಾಲ ಆಸ್ಪತ್ರೆಯಲ್ಲಿ ತುರ್ತುನಿಗಾ ಘಟಕದಲ್ಲಿದ್ದ. ಮಂಗಳವಾರ ಮುಂಜಾನೆ ಆಸುನೀಗಿದ್ದಾನೆ.
ಘಟನೆ ಹಿನ್ನೆಲೆ : ಸೌಮ್ಯಾ ಅವರ ತಂದೆಗೆ ಹೃದಯ ಸಂಬಂಧಿ ಕಾಯಿಲೆ ಇರುವ ಕಾರಣಕ್ಕೆ ಮಗಳ ಮದುವೆ ಆದಷ್ಟು ಬೇಗ ನಡೆಯಬೇಕು ಎಂಬ ಅಸೆ ಇತ್ತು. ಆದರೆ ಸಂದೇಶ್ ಕುಲಾಲ್ ಜತೆಗೆ ಮದುವೆ ವಿಳಂಬ ಆಗುತ್ತಿದ್ದಂತೆ ಸೌಮ್ಯಾ ಅವರಿಗೆ ಕಳೆದ ವಾರ ಬೇರೆ ಹುಡುಗನ ಜತೆಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಡಲಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಸಂದೇಶ್ ಕುಲಾಲ್ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಎನ್ನಲಾಗಿದ್ದು, ಇದೇ ಘಟನೆಗೆ ಪ್ರಮುಖ ಕಾರಣವಾಗಿ ಪರಿಣಮಿಸಿದೆ. ಪ್ರಿಯಕರನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿ ಪ್ರಕರಣ ಇತ್ಯತ್ಯಗೊಳಿಸಲಾಗುತ್ತದೆ.
ಮದುವೆ ವಿಳಂಬ ನೆಪ : ಹುಡುಗ ಹಾಗೂ ಹುಡುಗಿಯ ಮನೆಯವರಿಗೆ ಇವರಿಬ್ಬರೂ ಮದುವೆಯಾಗುವುದು ಇಷ್ಟವಿತ್ತು. ಇವರಿಗೂ ಇಷ್ಟವಿತ್ತು. ಈ ಬಗ್ಗೆ ಎರಡೂ ಕುಟುಂಬಗಳು ಮಾತುಕತೆಯನ್ನೂ ನಡೆಸಿದ್ದರು. ಆದರೆ ಕೊನೆಯ ಮಾತುಕತೆಯ ಸಂದರ್ಭ ಹುಡುಗನ ಅಣ್ಣನ ನಿಶ್ಚಿತಾರ್ಥ ಈಗಾಗಲೇ ನಡೆದಿದ್ದು, ಆತನ ಮದುವೆಯಾದ ಬಳಿಕವೇ ಈತನ ಮದುವೆ ಮಾಡುವುದಾಗಿ ಮನೆಯಲ್ಲಿ ತಿಳಿಸಿದ್ದರು ಎನ್ನಲಾಗಿದೆ. ಇತ್ತ ಹುಡುಗಿಯ ತಂದೆ ಅನಾರೋಗ್ಯದಲ್ಲಿದ್ದು, ಆದಷ್ಟು ಬೇಗ ಮಗಳ ಮದುವೆ ಮಾಡಿ ಮಗಿಸುವ ಆಲೋಚನೆಯಲ್ಲಿದ್ದರು. ಇಷ್ಟೆಲ್ಲದರ ನಡುವೆ ಕಳೆದ ವಾರ ಹುಡುಗಿ ತನ್ನ ತಂದೆಯ ಇಚ್ಛೆಯಂತೆಬೇಗನೆಮದುವೆ ಮಾಡುವ ಉದ್ದೇಶದಿಂದ ತನ್ನದೇ ಸಮುದಾಯದ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವಿಚಾರ ಪ್ರಿಯಕರನ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ಆಕೆ ಆತನ ಮೊಬೈಲ್ ಸಂಖ್ಯೆಯನ್ನೂ ಬ್ಲಾಕ್ ಮಾಡಿದ್ದಳು ಎನ್ನಲಾಗಿದೆ.
ಪೋಷಕರು ನಿಗಾ ವಹಿಸಿ : ಮಕ್ಕಳು ಯವ್ವನಾವಸ್ಥೆಗೆ ತಲುಪುವ ಸಂದರ್ಭದಲ್ಲಿ ಪೋಷಕರು ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಸಾಮಾಜಿಕ ಜಾಲತಾಣಗಳನ್ನು ಮಕ್ಕಳು ದುರ್ಬಳಕೆ ಮಾಡದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಇಚ್ಛೆ ಇಲ್ಲದಿದ್ದರೂ ಬಲವಂತದಿಂದ ಮದುವೆ ಮಾಡುವ ಮನಸ್ಥಿತಿಯನ್ನೂ ಪೋಷಕರು ದೂರ ಮಾಡಬೇಕಿದೆ. ಎರಡೂಕುಟುಂಬಗಳುಮಾತುಕತೆಯ ಮೂಲಕ ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಿ ಮುಂದುವರಿ ಯುವುದು ಉತ್ತಮ ಬೆಳವಣಿಗೆ ಎಂದು ಪೊಲೀಸ್ ಇಲಾಖಾಧಿಕಾರಿಯೊಬ್ಬರು ಹೇಳುತ್ತಾರೆ.