ಬೆಳಗಾವಿ: ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪೌರ ಕಾರ್ಮಿಕ ಮೃತಪಟ್ಟಿದ್ದು, ಮಹಾನಗರ ಪಾಲಿಕೆ ನಾಲ್ಕು ತಿಂಗಳಿಂದ ವೇತನ ಪಾವತಿಸದೆ ಹಗಲು ರಾತ್ರಿ ದುಡಿಸಿದ್ದಾರೆ, ಹೀಗಾಗಿ ಅನಾರೋಗ್ಯದಿಂದ ಪೌರ ಕಾರ್ಮಿಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಪೌರ ಕಾರ್ಮಿಕರು ಸೋಮವಾರ ಬೆಳಗ್ಗೆ ಖಾಸಗಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಅನಿಲ್ ಕಾಂಬಳೆ (28) ಎಂಬಾತ ಅನಾರೋಗ್ಯದಿಂದ ಮೃತಪಟ್ಟ ಪೌರ ಕಾರ್ಮಿಕ. ಕಳೆದ ಕೆಲವು ತಿಂಗಳಿಂದ ವೇತನ ಪಾವತಿ ಆಗಿಲ್ಲ. ಗಣೇಶೋತ್ಸವ ವೇಳೆಯೂ ಹಗಲು, ರಾತ್ರಿ ಎನ್ನದೇ ಪೌರ ಕಾರ್ಮಿಕ ನಗರದಲ್ಲಿ ಕೆಲಸ ಮಾಡಿದ್ದನು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅನಿಲ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದಿನ ದಿನಕ್ಕೂ ಆರೋಗ್ಯ ಹದಗೆಡುತ್ತಿದ್ದಂತೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಹಣಕಾಸಿನ ಮುಗ್ಗಟ್ಟಿನಿಂದ ಬಸವಳಿದಿದ್ದ ಈ ಕುಟುಂಬಕ್ಕೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿರಲಿಲ್ಲ. ಸೋಮವಾರ ಚಿಕಿತ್ಸೆ ಫಲಿಸದೇ ಅನಿಲ್ ಮೃತಪಟ್ಟಿದ್ದಾನೆ.
ಅನಿಲ್ ನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೌರ ಕಾರ್ಮಿಕರು ಆಸ್ಪತ್ರೆಗೆ ಧಾವಿಸಿ ಮಹಾನಗರ ಪಾಲಿಕೆ ಎದುರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯೆ ನೀಡಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಪೌರ ಕಾರ್ಮಿಕರಿಗೆ ನಾಲ್ಕು ತಿಂಗಳ ವೇತನ ವಿಳಂಬ ಆಗಿಲ್ಲ. ಆಗಿರುವ ತೊಂದರೆ ಬಗೆ ಹರಿಸಲಾಗುವುದು. ಅವರಿಗೆ ಅಗತ್ಯ ಇರುವ ಇಎಸ್ ಐ, ಪಿಎಫ್ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಸಮಸ್ಯೆ ಆಗದಂತೆ ಪಾಲಿಕೆ ಪೌರ ಕಾರ್ಮಿಕರ ಹಿತದೃಷ್ಟಿಯಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಲಿದೆ ಎಂದು ತಿಳಿಸಿದರು.