ಚಿಕ್ಕಬಳ್ಳಾಪುರ: ಸ್ಮ್ಯೂಲ್ ಆ್ಯಪ್‌ನಲ್ಲಿ ಗೀಳು ಬೆಳೆಸಿಕೊಂಡಿದ್ದ ಗೃಹಿಣಿಯೊಬ್ಬಳು, ಸ್ಮ್ಯೂಲ್‌ಸಿಂಗಿಂಗ್‌ನಲ್ಲಿ ಪರಿಚಯವಾಗಿದ್ದ ಯುವಕ ತನ್ನೊಂದಿಗೆ ಹಾಡುತ್ತಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ನಗರದ ನಿವಾಸಿ ಶಿಲ್ಪ (35) ಆತ್ಮಹತ್ಯೆಗೆ ಶರಣಾದವಳು. ಶಿವಾನಂದ ಎಂಬುವರನ್ನು ಮದುವೆಯಾಗಿದ್ದ ಶಿಲ್ಪಗೆ ಇಬ್ಬರು ಮಕ್ಕಳಿದ್ದಾರೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಶಿಲ್ಪ, ಚಿಕ್ಕಬಳ್ಳಾಪುರದ ಗರ್ಲ್ಸ್ ಸ್ಕೂಲ್ ರಸ್ತೆ ಹಿಂಭಾಗ ಬಾಡಿಗೆ ಮನೆ ಮಾಡಿಕೊಂಡು ದಂಪತಿ ಸಮೇತ ವಾಸವಾಗಿದ್ದರು. ಸ್ಮ್ಯೂಲ್ ಸಿಂಗಿಂಗ್ ಗೀಳು ಬೆಳೆಸಿಕೊಂಡಿದ್ದ ಶಿಲ್ಪ, ಆ್ಯಪ್‌ನಲ್ಲಿ ಹಾಸನ ಮೂಲದ ದೇವರಾಜ್ ಎಂಬಾತನ ಜೊತೆಗೆ ಆಗಾಗ ಹಾಡುತ್ತಿದ್ದಳು. ಆದರೆ, ಶುಕ್ರವಾರ ರಾತ್ರಿ ಶಿಲ್ಪ ಜೊತೆಗೆ ದೇವರಾಜ್ ಸ್ಮ್ಯೂಲ್ ಸಿಂಗಿಂಗ್‌ನಲ್ಲಿ ಹಾಡದೇ ದೂರ ಉಳಿದದ್ದಕ್ಕೆ ಮನನೊಂದು, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಶುಕ್ರವಾರ ಶಿವಾನಂದ ಬೇರೆ ಊರಿಗೆ ಹೋಗಿದ್ದರು. ಮಕ್ಕಳು ಆಕೆಯ ತವರು ಮನೆಯಲ್ಲಿದ್ದುಕೊಂಡು ಓದುತ್ತಿದ್ದರು. ಹೀಗಾಗಿ, ಶಿಲ್ಪ ಮನೆಯಲ್ಲಿ ಒಬ್ಬಳೇ ಇದ್ದಳು. ಶನಿವಾರ ಬೆಳಗ್ಗೆ ಶಿವಾನಂದ ಅವರು ಪತ್ನಿಗೆ ಕರೆ ಮಾಡಿದರೆ, ಆಕೆ ಕರೆ ಸ್ವೀಕರಿಸಲಿಲ್ಲ. ಬಳಿಕ, ಅನುಮಾನಗೊಂಡು, ಮನೆಯ ಮಾಲೀಕನಿಗೆ ವಿಷಯ ತಿಳಿಸಿದರು. ಮನೆಯ ಮಾಲೀಕರು ಹಾಗೂ ಸುತ್ತಲಿನ ನಿವಾಸಿಗಳು ಮನೆಯ ಬಾಗಿಲು ಒಡೆದು ನೋಡಿದಾಗ ಶಿಲ್ಪ, ಮನೆಯಲ್ಲಿದ್ದ ಪ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಕಂಡು ಬಂತು. ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಚಾಟಿಂಗ್: ಶುಕ್ರವಾರ ತಡರಾತ್ರಿ ಶಿಲ್ಪಾ, ಯುವಕನಿಗೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಕರೆ ಮಾಡಿದಾಗ ಆತ ಕರೆ ಸ್ವೀಕರಿಸಿಲ್ಲ. ಕೊನೆಗೆ, ತನ್ನನ್ನು ನೀನು ದೂರ ಮಾಡುತ್ತಿದ್ದೀಯಾ ಎಂದು ಶಿಲ್ಪ ಮೆಸೇಜ್ ಮಾಡಿದ್ದಾಳೆ. ಹೀಗೆ ಸಾಕಷ್ಟು ಬಾರಿ ಚಾಟಿಂಗ್ ಮುಂದುವರಿದಿದೆ. ಆದರೆ, ಸ್ಮ್ಯೂಲ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ದೇವರಾಜ್‌ನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಕ್ಕೆ, ಶಿಲ್ಪ ಕೊನೆಗೆ ಜಿಗುಪ್ಸೆಗೊಂಡು ನೇಣಿಗೆ ಕೊರಳೊಡ್ಡಿದ್ದಾಳೆ. ಆತ್ಮಹತ್ಯೆಗೂ ಮೊದಲು ಶಿಲ್ಪ, ಡೆತ್‌ನೋಟ್‌ನಲ್ಲಿ “ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿದ್ದಾಳೆ.