Advertisement

ಬೇಟೆಗೆಂದು ಹೋದವ ಶವವಾದ

10:32 AM Oct 23, 2018 | |

ಮಡಿಕೇರಿ: ಕಾಡು ಪ್ರಾಣಿ ಬೇಟೆಗೆ ತೆರಳಿದ ಸಂದರ್ಭ ಆಕಸ್ಮಿಕವಾಗಿ ಗುಂಡೇಟು ತಗುಲಿ ಸಂಶಯಾಸ್ಪದ ರೀತಿಯಲ್ಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಕ್ಕಂದೂರು ಸಮೀಪದ ಹೆಮ್ಮತ್ತಾಳು ಗ್ರಾಮದಲ್ಲಿ ಸಂಭವಿಸಿದೆ.
ಸ್ಥಳೀಯ ನಿವಾಸಿ ಅಯ್ಯಕುಟ್ಟಿರ ದೇವಯ್ಯ ಅವರ ಪುತ್ರ ರಂಜಿತ್‌ (32) ಮೃತ ವ್ಯಕ್ತಿ. ಬೇಟೆಗೆಂದು ಜತೆಯಲ್ಲಿ ತೆರಳಿದ ಕಾಳಿಮಾಡ ದಿನೇಶ್‌ (40) ಘಟನೆಯ ಬಳಿಕ ಬಂದೂಕು ಬಿಟ್ಟು ತಲೆಮರೆಸಿಕೊಂಡಿದ್ದಾನೆ. ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಹೆಮ್ಮೆತ್ತಾಳು ಗ್ರಾಮದ ನಿವಾಸಿ ಅಯ್ಯಕುಟ್ಟರ ರಂಜಿತ್‌ ಮತ್ತು ದಕ್ಷಿಣ ಕೊಡಗಿನ ಶ್ರೀಮಂಗಲ ವೆಸ್ಟ್‌ನೆಮ್ಮೆಲೆ ಗ್ರಾಮದ ಕಾಳಿಮಾಡ ದಿನೇಶ್‌ ಪರಸ್ಪರ ಸಂಬಂಧಿಗಳು. ದಸರಾ ರಜೆ ಹಿನ್ನೆಲೆಯಲ್ಲಿ ದಿನೇಶ್‌ ಅವರು ರಂಜಿತ್‌ ಮನೆಗೆ ಬಂದಿದ್ದರು ಎನ್ನಲಾಗಿದೆ. ಅ. 21ರ ಸಂಜೆ ರಂಜಿತ್‌ ಹಾಗೂ ದಿನೇಶ್‌ ತಮ್ಮ-ತಮ್ಮ ಬಂದೂಕುಗಳೊಂದಿಗೆ ಬೇಟೆಗೆ ಹೊರಟಿದ್ದರು. ಜತೆಯಾಗಿ ಹೊರಟವರು ದಾರಿ ಮಧ್ಯೆ ಮನಸ್ಸು ಬದಲಾಯಿಸಿ ಪ್ರತ್ಯೇಕವಾಗಿ ಬೇಟೆಯಾಡಲು ತೆರಳಿದ್ದರು ಎನ್ನಲಾಗಿದೆ. ರಾತ್ರಿ ತೋಟದ ನಡುವೆ ಗುಂಡಿನ ಸದ್ದು ಕೇಳಿಸಿದಾಗ ದೇವಯ್ಯ ಸ್ಥಳಕ್ಕೆ ಧಾವಿಸಿದ್ದು, ಮಗ ಸತ್ತು ಬಿದ್ದಿರುವುದು ಕಂಡುಬಂತು.

ಜತೆಯಲ್ಲೇ ಬೇಟೆಗೆ ತೆರಳಿದ್ದ ಕಾಳಿಮಾಡ ದಿನೇಶ್‌ನನ್ನು ವಿಚಾರಿಸಿದಾಗ ರಂಜಿತ್‌ ಕಾಲು ಜಾರಿ ಬರೆಯಿಂದ ಬಿದ್ದಿದ್ದು, ಆ ಸಂದರ್ಭ ಬಂದೂಕಿನಿಂದ ಗುಂಡು ಸಿಡಿದು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಆ ಬಳಿಕ ದಿನೇಶ್‌ ತಲೆಮರೆಸಿಕೊಂಡಿರುವುದರಿಂದ ಸಾವಿನಲ್ಲಿ ಸಂಶಯ ವ್ಯಕ್ತವಾಗಿದೆ. ಬೇರೆ ಬೇರೆಯಾಗಿ ತೆರಳಿದ್ದರಿಂದ ತಪ್ಪು ಗ್ರಹಿಕೆಯಾಗಿ ಗುಂಡು ಹಾರಾಟ ನಡೆದಿರಬಹುದು ಎಂದು ಶಂಕಿಸಲಾಗಿದೆ.

ರಂಜಿತ್‌ ಕುಟುಂಬಸ್ಥರು ಮೃತದೇಹವನ್ನು ಮನೆಗೆ ತಂದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಳಿಮಾಡ ದಿನೇಶ್‌ ಬೇಟೆಗಾಗಿ ಬಳಸಿದ ಬಂದೂಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆರೋಪಿಯ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಮೃತ ರಂಜಿತ್‌ ಅವಿವಾಹಿತರಾಗಿದ್ದು, ತಂದೆ- ತಾಯಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next