Advertisement

ಗಾಯಾಳು ಒಂಟಿ ಸಲಗ ಸಾವು

09:34 AM May 30, 2019 | Team Udayavani |

ಸುಬ್ರಹ್ಮಣ್ಯ,: ಸುಬ್ರಹ್ಮಣ್ಯ ಸಮೀಪದ ಬಾಳುಗೋಡು ಮೀಸಲು ಅರಣ್ಯದಲ್ಲಿ ಇತ್ತೀಚೆಗೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಸುಮಾರು 16 ವರ್ಷದ ಒಂಟಿ ಸಲಗ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳೆದಿದೆ. ಸಮೀಪದ ಅರಣ್ಯದ ಏಲಕ್ಕಿತೋಟ ಎಂಬಲ್ಲಿ ಆನೆಯ ಶವ ಕಂಡುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆಭೇಟಿ ನೀಡಿ ತಪಾಸಣೆ ನಡೆಸಿದರು.

Advertisement

ಪಶ್ಚಿಮ ಘಟ್ಟ ಸಾಲಿನಲ್ಲಿ ಬರುವ ಸುಬ್ರಹ್ಮಣ್ಯ ಅರಣ್ಯ ಇಲಾಖೆ ವಿಭಾಗದ ಬಾಳುಗೋಡು ಮೀಸಲು ಅರಣ್ಯದಲ್ಲಿ ಎ. 7ರಂದು ಕಾಡಾನೆಯೊಂದು ಗಾಯಗೊಂಡು ನರಳಾಡುತ್ತಿರುವ ಸ್ಥಿತಿಯಲ್ಲಿ ಇದ್ದುದನ್ನು ಸ್ಥಳೀಯರು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಎರಡು ದಿನದ ಬಳಿಕ ರಾಷ್ಟ್ರೀಯ ಅಭಯಾರಣ್ಯ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಹಾಗೂ ಸ್ಥಳಿಯ ಪಶುವೈದ್ಯಾಧಿಕಾರಿಗಳ ಮೂಲಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಗಾಯ ಗುಣವಾಗುತ್ತದೆ ಎಂದು ಇಲಾಖೆ ಹೇಳಿತ್ತು.

ಜನರ ಕಾಳಜಿ; ಇಲಾಖೆ ನಿರ್ಲಲಕ್ಷ್ಯ
ಇಲಾಖೆ ಚಿಕಿತ್ಸೆ ನೀಡಿ ಕೈತೊಳೆದುಕೊಂಡಿದ್ದರೂ ಆನೆ ಯೊಂದಿಗಿನ ಜನರ ಭಾವನಾತ್ಮಕ ನಂಟು ಮುಂದುವರಿದಿತ್ತು. ಚಿಕಿತ್ಸೆಯ ಬಳಿಕವೂ ಗಾಯ ವಾಸಿಯಾಗದೆ ಇರುವುದನ್ನು ಗಮನಿಸಿ ಇಲಾಖೆಯ ಕಮನಕ್ಕೆ ತಂದಿದ್ದರು. ಇದೇ ಸಂದರ್ಭದಲ್ಲಿ ಬೇರೊಂದು ಆನೆಯ ತಿವಿತಕ್ಕೆ ಒಳಗಾಗಿ ಈ ಆನೆ ಮತ್ತೆ ಜರ್ಝರಿತವಾಗಿತ್ತು. ನಿತ್ರಾಣಗೊಂಡಿದ್ದ ಆನೆ ಕಾಡಿಗೆ ಹೋಗಿಲ್ಲ. ಆದರೆ ಸ್ಥಳೀಯರು ಆಹಾರ ನೀಡುತ್ತಿದ್ದರಿಂದ ಅದು ಕಾಡಿಗೆ ಹೋಗಿಲ್ಲ. ಅದನ್ನು ಬಿಟ್ಟು ಬಿಡುವಂತೆ ಅಧಿಕಾರಿಗಳು ಹೇಳಿದ್ದರು. ಅಂದಿನಿಂದ ಜನರು ಆನೆಗೆ ಆಹಾರ ಒದಗಿಸುವುದನ್ನು ಸ್ಥಗಿತಗೊಳಿಸಿದ್ದರು. ಬಳಿಕ ಆನೆ ಬುಧವಾರ ಸಮೀಪದ ಕಾಡಿನ ಏಲಕ್ಕಿ ತೋಟ ಎಂಬ ಸ್ಥಳದಲ್ಲಿ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.

ಶವ ಮಹಜರಿನ ಶಂಕೆ!
ರಾತ್ರಿಯಾದ್ದರಿಂದ ಶವ ಮಹಜರು ಗುರುವಾರ ನಡೆಸುವುದಾಗಿ ಹೇಳಲಾಗಿತ್ತು. ಆದರೆ ಇಲಾಖೆ ಅಧಿಕಾರಿಗಳು ವೈದ್ಯರನ್ನು ರಾತ್ರಿ ಕಾಡಿಗೆ ಕರೆದೊಯ್ದು ಮಹಜರಿಗೆ ಮುಂದಾಗಿದ್ದು ಇದಕ್ಕೆ ಸ್ಥಳೀಯರು ಆಕ್ಷೇಪಿಸಿದ್ದಾರೆ. ಅಧಿಕಾರಿಗಳ ತರಾತುರಿಯ ಈ ಮಹಜರಿನ ನಿರ್ಧಾರದ ಬಗ್ಗೆ ಸ್ಥಳೀಯರಿಗೆ ನಾನಾ ಸಂಶಯಗಳು ಕಾಡಿವೆ.

ಫಲಿಸದ ಹರಕೆ; ಸ್ಥಳೀಯರ ಕಣ್ಣೀರು
ಗಾಯಾಳು ಆನೆಯ ಮೇಲೆ ಸ್ಥಳೀಯರಿಗೆ ಭಾರೀ ಪ್ರೀತಿ, ಕಾಳಜಿ ಮೂಡಿತ್ತು. ಅದರ ಆರೋಗ್ಯ ಸುಧಾರಿಸಲಿ ಎಂದು ಚಾಮುಂಡಿ ದೇವಿಗೆ, ಅಯ್ಯಪ್ಪನಿಗೆ ಹರಕೆ ಹೊತ್ತಿದ್ದರು. ಪ್ರತಿನಿತ್ಯ ಯುವಕರ ತಂಡ ಆನೆಯನ್ನು ಹತ್ತಾರು ಕಿ.ಮೀ. ಹಿಂಬಾಲಿಸಿ ಚಲನವಲನ ಗಮನಿಸುತ್ತಿತ್ತು. ಮಂಗಳವಾರವೂ ಆನೆ ಕಾಡಿನಲ್ಲಿ ಜೀವಂತ ಇರುವುದನ್ನು ಕಂಡು ಬಂದಿದ್ದ ಅವರಿಗೆ ಮರುದಿನ ಆನೆ ಸತ್ತಿರುವುದನ್ನು ನಂಬಲು ಅಸಾಧ್ಯವಾಗಿತ್ತು. ಸಾಕು ಪ್ರಾಣಿಯಂತೆ ಪ್ರೀತಿ ತೋರಿದ್ದ ಮಂದಿ ಅದರ ಸಾವಿನ ನೋವು ಸಹಿಸಲಾರದೆ ಕಣ್ಣೀರಿಟ್ಟರು. ಆನೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲು ಇಲಾಖೆ ಉದಾಸೀನ ತೋರಿದ್ದರಿಂದ ಅಮಾಯಕ ಆನೆ ಸಾವನ್ನಪ್ಪಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next