Advertisement

Accident: ಅಪಘಾತದಲ್ಲಿ ಸಾವು- ಬೆಂಗಳೂರು ದ್ವಿತೀಯ!

12:53 AM Nov 02, 2023 | Pranav MS |

ಹೊಸದಿಲ್ಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ರಸ್ತೆ ಅಪಘಾತದಲ್ಲಿ ಅಸುನೀಗುವವರ ಸಂಖ್ಯೆಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.

Advertisement

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ ವರದಿಯಲ್ಲಿ ಈ ಆಘಾತಕಾರಿ ಅಂಶವನ್ನು ಉಲ್ಲೇಖೀಸಲಾಗಿದೆ. 2022ನೇ ಸಾಲಿಗೆ ಸಂಬಂಧಿಸಿದ ಮಾಹಿತಿ ಇದಾಗಿದ್ದು, ಕಳೆದ ವರ್ಷ ಉದ್ಯಾನನಗರಿಯಲ್ಲಿ ಮಿತಿ ಮೀರಿದ ವೇಗದ ಸಂಚಾರದಿಂದಾಗಿ 772 ಮಂದಿ ಅಸುನೀಗಿದ್ದರೆ, 3,189 ಮಂದಿ ಗಾಯಗೊಂಡಿದ್ದಾರೆ. ಇದರ ಹಿಂದಿನ ವರ್ಷ 654 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರ ಜತೆಗೆ ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿಯಲ್ಲಿ ಕಳೆದ ವರ್ಷ 3,822 ಅಪಘಾತ ಪ್ರಕರಣಗಳು ನಡೆದಿವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. 2022ರಲ್ಲಿ ಅಪಘಾತಗಳ ಪ್ರಮಾಣ ಶೇ. 9.4ರಷ್ಟು ಹೆಚ್ಚಾಗಿದೆ.

ವಿಚಿತ್ರವೆಂದರೆ  ನೆರೆಯ ತಮಿಳುನಾಡಿನಲ್ಲಿ   ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಈ ರಾಜ್ಯದಲ್ಲಿ 64,105 ಅಪಘಾತಗಳು ಸಂಭವಿಸಿದೆ. ಚೆನ್ನೈಯಲ್ಲಿ ಅಪಘಾತದಿಂದ ಸಾವನ್ನಪ್ಪುವರ ಸಂಖ್ಯೆ ಕಡಿಮೆಯಾಗಿದೆ. 2021ರಲ್ಲಿ 998 ಮಂದಿ ಸಾವನ್ನಪ್ಪಿದ್ದರೆ, 2022ರಲ್ಲಿ 507 ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಕೈಗೊಂಡ ಕ್ರಮಗಳಿಂದಾಗಿ ಅಪಘಾತ ಪ್ರಕರಣಗಳು ತಗ್ಗಿವೆ.

ಮೆಟ್ರೋ ನಗರಗಳಲ್ಲಿ ಅತೀ ವೇಗದಿಂದ ವಾಹನ ಚಲಾಯಿಸಿ ಅಸುನೀಗಿರುವ ಲೆಕ್ಕಾಚಾರ ತೆಗೆದು ಕೊಂಡರೆ ಕಳೆದ ವರ್ಷ ಹೊಸದಿಲ್ಲಿಯಲ್ಲಿ 1,500 ಮಂದಿ ಅಸುನೀಗಿದ್ದರೆ, ಬೆಂಗಳೂರಿನಲ್ಲಿ 711, ಜೈಪುರ ದಲ್ಲಿ 683 ಮಂದಿ ಜೀವ ಕಳೆದುಕೊಂಡಿದ್ದಾರೆ.

17,089 ಸಾವು

Advertisement

ದೇಶದ ಐವತ್ತು ದೊಡ್ಡ ನಗರಗಳಲ್ಲಿ 17,089 ಮಂದಿ ಅಪಘಾತಗಳಿಂದ ಕೊನೆಯುಸಿರೆಳೆದಿದ್ದರೆ, 69 ಸಾವಿರ ಮಂದಿ ಗಾಯಗೊಂಡಿದ್ದಾರೆ.  ಸಣ್ಣ ಪ್ರಮಾಣದ ನಗರಗಳಲ್ಲಿ 2022ರಲ್ಲಿ  ಅಪಘಾತ ಪ್ರಮಾಣ ಶೇ. 14 ಹೆಚ್ಚಾಗಿದೆ. ಅದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next