Advertisement
ಯಮಧರ್ಮನ ಮುಂದೆ ನಿಂತಿದ್ದ ಎಳೆಯ ನಚಿಕೇತ. ಸಾವಿನ ಸಮ್ಮುಖದಲ್ಲಿ ಮನುಷ್ಯ ಜೀವ! ನಮ್ಮ ಬದುಕಿನ ಅಂಗಳಕ್ಕೆ ಯಾವಾಗ ಕಾಲಿಡಬಹುದೆಂದು ಯಾರೂ ಊಹಿಸಲಾಗದ- ಈ ಕಾರಣಕ್ಕೆ “ಅತಿಥಿ’ ಎನ್ನಬಹುದಾದ ಸಾವು ಈಗ, ತಾನೇ ಆತಿಥೇಯನಾಗಿತ್ತು. ಮರ್ತ್ಯಲೋಕದ ಒಂದು ಜೀವ ಸಾವಿನ ಅತಿಥಿಯಾಗಿ ಯಮನ ಮನೆಯಲ್ಲಿ ಸತ್ಕಾರಗೊಳ್ಳುತ್ತಿತ್ತು. ಪಾತ್ರಗಳು ಅದಲು ಬದಲಾಗಿದ್ದವು. ಮತ್ತು ಈ ಕಾರಣಕ್ಕೆ ಸಾವು ಸುಪ್ರಸನ್ನವಾಗಿತ್ತು. ಕೇಳಿದ್ದನ್ನು ನೀಡುವಂತೆ ಉದಾರವಾಗಿತ್ತು.
Related Articles
Advertisement
ನಚಿಕೇತನ ಮನಸ್ಸಿನಲ್ಲಿ ನೆಲಸಿದ್ದುದು ತನ್ನ ತಂದೆಯ ಚಿತ್ರ. ತನ್ನ ವಿಪರ್ಯಾಸಗಳನ್ನು ತಾನೇ ಅರಿಯಲಾಗದ, ಸ್ವಮಗ್ನಮನಸ್ಸಿನ, ಶಾಸ್ತ್ರಪರಂಪರೆಗಳನ್ನು ತನಗನುಕೂಲವಾಗಿ ಮಾತ್ರ ನೋಡುವ, ಕೋಪಗೊಳ್ಳುವ, ಕೋಪಗೊಂಡದ್ದಕ್ಕಾಗಿ ಮತ್ತೆ ತಾನೇ ವ್ಯಾಕುಲಗೊಳ್ಳುವ, ತಂದೆ ಎಂಬ ಈ ಅಶಾಂತ ವೃದ್ಧನ ಕುರಿತಾದ ಚಿಂತೆ. ಯಮಧರ್ಮ, “”ಮಗೂ ನಿನಗೆ ಬೇಕಾದುದೇನು? ಕೇಳು”- ಎಂದಾಗ ತಂದೆಯ ಈ ಚಿತ್ರ ಒಳಗಿಂದ ಮೇಲೆದ್ದು ಕಾಣಿಸಿತು. ನಚಿಕೇತ ಹೀಗೆ ಕೋರಿಕೊಂಡನಂತೆ: ಶಾಂತಸಂಕಲ್ಪಃ ಸಮನಾಃ ಯಥಾಸ್ಯಾತ್ ವೀತಮನ್ಯುಃ… ಕೋಪ ಅಳಿದು ಉಪಶಾಂತನಾದ, ಕೇಡಿನ ಯೋಚನೆಗಳು ಸುಳಿಯದ, ಶುಭ್ರಮನಸ್ಸಿನ ತಂದೆಯನ್ನು ನಾನು ಕಣ್ತುಂಬ ನೋಡಬಯಸುವೆ. ತನ್ನ ತಂದೆ ಹೇಗಿದ್ದರಾಗುತ್ತಿತ್ತು ಎಂದು ಎಚ್ಚೆತ್ತ ಮನಸ್ಸೊಂದು ಬಯಸಬಲ್ಲುದೋ ಅಂಥದೊಂದು ಸುಸಂಸ್ಕೃತ ಚಿತ್ರವಿದು. ಮಗನೆಂದರೆ ತಂದೆಯ ಇನ್ನೊಂದು ಜನ್ಮವೆನ್ನುವುದಾದರೆ ಇಲ್ಲಿ ಮಗನಿಂದ ತಂದೆಯೇ ಪುನರ್ಜನ್ಮವನ್ನು ಪಡೆದಂತಿರುವ ಚಿತ್ರವಿದೆ. ಇದು ಸಂಸಾರದ ಮಹಿಮೆಯೂ ಹೌದು. ಈ ಚಿತ್ರ ಬಿಡಿಸುವುದು ಉಪನಿಷತ್ತಿಗೆ ಇಷ್ಟ. ಅಲ್ಲದೆ ನಚಿಕೇತನ ಮಾತಿನಲ್ಲಿ ತಾನು ಮತ್ತೆ ತನ್ನ ಲೋಕಕ್ಕೆ , ತನ್ನ ಮನೆಯಂಗಳಕ್ಕೆ ಹಿಂದಿರುಗಬೇಕು; ಸಾವಿನ ಬಾಯಿಂದ ಉಗುಚಿ ಬಂದ ತನ್ನನ್ನು ತನ್ನ ತಂದೆ ನೋಡಿ ಬಾಯ್ತುಂಬ ಮಾತನಾಡಿಸಬೇಕು ಎಂಬ ಹಂಬಲ ವ್ಯಕ್ತವಾಗಿದೆ. ತ್ವತ್‌ಪ್ರಸೃಷ್ಟಂ ಮಾ—ಭಿವದೇತ್… ಏಕೆಂದರೆ, ಹಾಗಲ್ಲದೆ ತಂದೆಯ ವ್ಯಾಕುಲತೆ ಇಡಿಯಾಗಿ ಅಳಿಯದು.
ಒಳಮನಸ್ಸಿಗೂ ನಮ್ಮ ಶ್ರದ್ಧೆಗೂ ಸಂಬಂಧ, ವಿಪರ್ಯಾಸಗಳನ್ನು ಕಂಡಾಗ “ನನ್ನನ್ನು ಯಾರಿಗೆ ನೀಡುವೆ’ ಎಂದು ಕೇಳಿದ ಶ್ರದ್ಧೆಯೇ ಈಗ ಯಮಧರ್ಮನಲ್ಲಿ ಹೀಗೆ ಕೇಳಿಕೊಳ್ಳುತ್ತಿದೆ. ಪ್ರೀತಿಗೆ ಮಾತ್ರ ಪ್ರಶ್ನಿಸುವ ಹಕ್ಕು! ಪ್ರೀತಿಯೇ ಪ್ರಶ್ನಿಸುವಂತೆಯೂ ಮಾಡುವುದು! ಪ್ರೀತಿ ಎಂಬ ಮಾರ್ದವತೆ ಉಂಟಾಗುವುದು ಶ್ರದ್ಧೆಯ ಬಲದಿಂದ!
ಯಮಧರ್ಮನಿಗೆ, ಮರಣಭೀರುಗಳಾದ ಮನುಷ್ಯರೊಡನೆ ವ್ಯವಹಾರದಲ್ಲಿ ಇವೆಲ್ಲ ವಿರಳವಾಗಿ ಎದುರಾಗುವ ವಿದ್ಯಮಾನಗಳು. ಈ ಜೀವವನ್ನು ಯಮಧರ್ಮ ತನ್ನ ಅತಿಥಿ ಎಂದು ಆದರಿಸಿದ್ದ. ಅತಿಥಿ ಹಿಂದಿರುಗಲೇಬೇಕು! ಅಂದರೆ ತಾನು ಅತಿಥಿಯನ್ನು ಮರಳಿಸಬೇಕು; ಉದ್ದಕ್ಕೆ ಕೆಲ ಹೆಜ್ಜೆ ಜೊತೆಯಾಗಿ ನಡೆದು ವಿದಾಯವನ್ನು ಹೇಳಬೇಕು; ಸಾವಿನಗಡಿ ದಾಟಿಸಬೇಕು. ಹಾಗೆಯೇ ಆಗಲಿ; ಅದೇ ನನಗೂ ಇಷ್ಟವೆಂದ ಯಮಧರ್ಮ. ಮೃತ್ಯುಮುಖಾತ್ ಪ್ರಮುಕ್ತಂ ತ್ವಾಂ ದದೃಶಿವಾನ್ ಎಂದು. ಸಾಕ್ಷಾತ್ ಮೃತ್ಯುವೇ ಹೇಳಿದ ಮಾತಿದು. ಸಾವಿನ ಬಾಯೊಳಹೊಕ್ಕು ಹಿಂತಿರುಗಿದವರುಂಟೆ? ನೀನು ಅಂಥವರಲ್ಲೊಬ್ಬನಾಗುವೆ. ಅಂಥ ನಿನ್ನನ್ನು ನಿನ್ನ ತಂದೆ ನೋಡುವನು! ಆಗ ನಿರಾಳನಾಗುವನು. ನೆಮ್ಮದಿಯಾಗಿ ನಿದ್ರಿಸುವನು. ಆ ನಿರಾಳತೆಗೆ ಹೋಲಿಕೆಯುಂಟೆ? ತಂದೆಯಾದವನ ಒಳಸಂಕಟಗಳೇನೆಂದು ಯಮನಿಗೂ ತಿಳಿದಿರಬೇಕು. ಸಾವಿಗೆ ತಿಳಿಯದ ಬದುಕಿನ ರಹಸ್ಯಗಳುಂಟೆ?
ಸಾವಿನ ಬಳಿಗೆ ಹೋಗುವವರಲ್ಲಿ ತಾನು ಮೊದಲಿಗನೇ, ಎರಡನೆಯವನೇ ಎಂದೆಲ್ಲ ಮೊದಲಿಗೆ ತನ್ನಲ್ಲೇ ಜಿಜ್ಞಾಸೆ ಮಾಡಿದ್ದನು- ನಚಿಕೇತ. ಈಗ ಬದುಕಿನ ಗಡಿದಾಟಿ, ಸಾವಿನ ಅಂಗಳ ಹೊಕ್ಕು, ಆ ಅಪೂರ್ವ ಅನುಭವವನ್ನು ಹೊತ್ತು, ಹಿಂತಿರುಗಿದವರಲ್ಲಿ, ಹುಡುಗನನ್ನು ಹಿಮ್ಮರಳಿಸುವ ಹೊಣೆಯನ್ನು ಸಾವು ತಾನೇ ಹೊತ್ತು, ಹಾಗೆ ಹಿಂತಿರುಗಿ ಬಂದವರಲ್ಲಿ ಮಾತ್ರ ನಚಿಕೇತನೇ ಮೊದಲಿಗನಿರಬೇಕು.
ಮನುಷ್ಯ ಜೀವಿಯ ಪ್ರಜ್ಞೆ ನಿಜಕ್ಕೂ ಎಚ್ಚೆತ್ತುಕೊಳ್ಳಬೇಕಾದರೆ ಇಲ್ಲಿನ- ಈ ಲೋಕದ- ಅನುಭವ ಮಾತ್ರ ಸಾಲದು. ಇಲ್ಲಿನದು ನಾವು ಮೈದುಂಬಿ ಕಾಣಿಸಿಕೊಳ್ಳಬೇಕೆನ್ನುವ ಹಂಬಲದ ಲೋಕ. ಇಲ್ಲಿನ ಈ ಹಂಬಲದ ಅನುಭವವನ್ನು ಹೊತ್ತು, ಆದರೆ ಈ ಲೋಕಕ್ಕಿಂತ ಭಿನ್ನವಾದ ಅಂದರೆ ಪರೋಕ್ಷವಾದ ಒಂದು ಎಚ್ಚರದಲ್ಲಿ ನಮ್ಮನ್ನೇ ಗಮನಿಸುವ ಅನುಭವವುಳ್ಳ ಇನ್ನೊಂದು ಲೋಕ- ಸಾವಿನ ಲೋಕ- ಅದರ ಅನುಭವವೂ ನಾವು ಎಚ್ಚೆತ್ತುಗೊಳ್ಳಬೇಕಾದರೆ ಅಗತ್ಯವಾಗಿದೆ. ಅಷ್ಟೂ ಸಾಲದೆನಿಸುತ್ತದೆ ಉಪನಿಷತ್ತಿಗೆ. ಸಾವಿನ ಲೋಕದಿಂದ ಮತ್ತೆ ಇಲ್ಲಿಗೆ ಮರಳಿ, ಆ ಅನುಭವದ ಬುತ್ತಿಯನ್ನು ಉಣ್ಣುತ್ತ ಇಲ್ಲಿ ಬಾಳಬೇಕಾಗಿದೆ. ಅದು ನಿಜವಾದ ಎಚ್ಚರದ ಬದುಕು. ಎಚ್ಚರ ಎನ್ನುವ ಪದವೇ ಯಾವುದೋ ತಂದ್ರಿಯಿಂದ ಎಚ್ಚರ ಎಂಬರ್ಥವನ್ನು ಸೂಚಿಸುತ್ತದೆ. ಈ ಲೋಕ, ಇದು ಸ್ಥಾಯಿಯಾದದ್ದು , ಇದರಾಚೆಗೆ ಇನ್ನೇನೂ ಇರಲಾರದೆನ್ನುವ ಭಾವವೇ ಒಂದು ಬಗೆಯ ನಿದ್ದೆ ; ತಂದ್ರಿ ಇಲ್ಲಿ ಇದ್ದು , ಇಲ್ಲಿಂದ ತೆರಳಿ ಇನ್ನೊಂದು ಬಗೆಯ ಅನುಭವವನ್ನು ಪಡೆದು, ಆ ಅನುಭವದ ಹಿನ್ನೆಲೆಯಲ್ಲಿ ಮರಳಿ ಇಲ್ಲಿಗೆ ಬಂದು ಬಾಳುವ ಜಂಗಮ-ಚರಂತಿ ಜೀವನವೇ ನಿಜವಾದ ಎಚ್ಚರದ ಜೀವನ ಎನ್ನುತ್ತದೆ ಉಪನಿಷತ್ತು. ಹಾಗೆ ಅಲ್ಲಿಂದ ಮರಳಿದವರನ್ನು ಸ್ವಾಗತಿಸುವುದೂ ಇಲ್ಲಿ ಸುಲಭದ ಮಾತಾಗಿ ಉಳಿದಿಲ್ಲ !
ಕಲೆ : ಎಂ. ಎಸ್. ಮೂರ್ತಿಲಕ್ಷ್ಮೀಶ ತೋಳ್ಪಾಡಿ