ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕೆಲವರು ವರ್ಗಾವಣೆ ದಂಧೆ, ಹಣದ ಕಾರಣಕ್ಕಾಗಿ ಅಸಮಾಧಾನ ಆಗಿರಬಹುದು. ಅವರು ದೆಹಲಿಗಾದರೂ ಹೋಗಲಿ ಎಲ್ಲಿಗಾದರೂ ಹೋಗಲಿ ನಮಗೇನು ಆಗಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಜಾರಕಿಹೊಳಿ ಸಹೋದರರ ವಿರುದ್ಧ ಪರೋಕ್ಷವಾಗಿ ವಾಗಾœಳಿ ನಡೆಸಿದ್ದಾರೆ.
ರಾಜ್ಯ ಬಿಜೆಪಿ ವಿಶೇಷ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ ಕಾಂಗ್ರೆಸ್‌ನವರು ಏನಾದ್ರೂ ಮಾಡಿಕೊಂಡು ಹಾಳಾಗಿ ಹೋಗ್ಲಿ. ಯಾವನಾದ್ರೂ ಏನಾದ್ರೂ ಮಾಡಿಕೊಳ್ಳಲಿ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಬಿಜೆಪಿ ಸರ್ಕಾರ ಬೀಳಿಸೋದಕ್ಕೆ ಹೋಗಿಲ್ಲ. ದೇವರ ಮೇಲೆ ಪ್ರಮಾಣ ಮಾಡುತ್ತೇನೆ. ನಾವು ಯಾವ ಶಾಸಕರನ್ನು ಸಂಪರ್ಕ ಮಾಡುತ್ತಿಲ್ಲ. ಸುಮ್ಮನೆ ನಮ್ಮ ಹೆಸರು ಎಳೆಯಲಾಗುತ್ತಿದೆ ಸರ್ಕಾರ ತಾನಾಗೇ ಬಿದ್ದರೆ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದರು.
ಕಾಂಗ್ರೆಸ್ ನಾಯಕರೇ ಇಂದು ಗುಂಪು ಮಾಡಿಕೊಂಡು ಕಚ್ಚಾಟ ಮಾಡುತ್ತಿದ್ದಾರೆ. ಅವರು ಕಚ್ಚಾಡಿಕೊಂಡು ಬಿಜೆಪಿ ಮೇಲೆ ಹಾಕುತ್ತಿದ್ದಾರೆ. ಈ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಗಿ ಕಾಳಿನಷ್ಟೂ ಜನರಿಗೆ ಈ ಸರ್ಕಾರದ ಮೇಲೆ ವಿಶ್ವಾಸ ಇಲ್ಲ. ಯಾರೂ ಯಾರ ಮಾತೂ ಕೇಳದ ಸ್ಥಿತಿ ಸರ್ಕಾರದಲ್ಲಿ ಇಲ್ಲ. ಪಾರದರ್ಶಕವಾಗಿರಬೇಕಿದ್ದ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ನಾವು ಯಾವ ಶಾಸಕರನ್ನೂ ಸಂಪರ್ಕಿಸಿಲ್ಲ. ಅವರೇ ತಪ್ಪು ಮಾಡಿಕೊಂಡು ಬಿಜೆಪಿ ಮೇಲೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ವಿಶೇಷ ಸಭೆಗೆ ಆಗಮಿಸಿ ವೇದಿಕೆ ಕೆಳಗೆ ಕುಳಿತಿದ್ದ ಶ್ರೀರಾಮುಲು ಅವರನ್ನು ಯಡಿಯೂರಪ್ಪ ಕರೆದು ವೇದಿಕೆ ಮೇಲೆ ಕುಳ್ಳರಿಸಿದ್ದು ವಿಶೇಷ. ಕಳೆದ ಕೆಲವು ದಿನಗಳ ಹಿಂದೆ ಕಣ್ಣು ಆಪರೇಷನ್ ಮಾಡಿಸಿಕೊಂಡಿರುವ ಶ್ರೀರಾಮುಲು ಕಪ್ಪು ಕನ್ನಡ ಹಾಕಿಕೊಂಡು ಬಂದಿದ್ದರು.