ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು ಎನ್ನುವ ಹಾಗೆ, ಮನೆಮಠ ಏನೂ ಇಲ್ಲದೆ ತನ್ನ ಜೀವನಪೂರ್ತಿ ಜಗತ್ತು ಸುತ್ತುತ್ತಿದ್ದ ಗಣಿತಜ್ಞ ಪಾಲ್ ಏರ್ಡಿಶ್. ನಿಮಗೆ ಏರ್ಡಿಶ್‌ರನ್ನು ಭೇಟಿಯಾಗಬೇಕೆ? ನೀರುವಲ್ಲೇ ಇದ್ದು ಕಾಯಿರಿ. ಒಂದಿಲ್ಲೊಂದು ದಿನ ಏರ್ಡಿಶ್ ನಿಮ್ಮ ಊರನ್ನೂ ಹಾದುಹೋಗಬಹುದು! ಎಂಬ ಮಾತು ಗಣಿತ ವಲಯದಲ್ಲಿ ಪ್ರಚಲಿತದಲ್ಲಿತ್ತು. ಅವರಿಗೆ, ಪ್ರಪಂಚದ ತುಂಬಾ ಗೆಳೆಯರಿದ್ದರು. ಯಾವ ಊರಿಗೆ ಹೋದರೂ ಅವರನ್ನು ಗೆಳೆಯರು ಸ್ಪರ್ಧೆಗೆ ಬಿದ್ದಂತೆ ಮುಗಿಬಿದ್ದು ಆತಿಥ್ಯದ ವ್ಯವಸ್ಥೆ ಮಾಡುತ್ತಿದ್ದರು. ಅಲ್ಲದೆ, ಏರ್ಡಿಶ್ 500ಕ್ಕೂ ಹೆಚ್ಚು ಜನರೊಡನೆ ಸೇರಿ ಸಂಶೋಧನಾ ಲೇಖನಗಳನ್ನು ಬರೆದರು. ಆ ಅಷ್ಟೂ ಜನರೊಡನೆ ಪತ್ರ, ಫೋನುಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ತಮಾಷೆಯೆಂದರೆ, ತನ್ನ ಎಲ್ಲಾ ಗೆಳೆಯರ ಫೋನ್ ನಂಬರುಗಳನ್ನು ಪುಸ್ತಕ ನೋಡದೆಯೇ ಡಯಲ್ ಮಾಡುವಷ್ಟು ಅವರ ನೆನಪಿನ ಶಕ್ತಿ ಚುರುಕಾಗಿತ್ತು. ಒಮ್ಮೆ ಯಾವುದೋ ಸಂಕಿರಣದಲ್ಲಿ ಸಿಕ್ಕಿದ ಗಣಿತಜ್ಞನೊಡನೆ ಮಾತಾಡುತ್ತ ನೀವೆಲ್ಲಿಯವರು? ಎಂದು ಕೇಳಿದರು ಏರ್ಡಿಶ್. ವ್ಯಾಂಕೋವರ್‌ನವನು – ಉತ್ತರಿಸಿದ ಆತ. ಓಹ್ ಹೌದೆ? ಹಾಗಾದರೆ, ನಿಮಗೆ ಅಲ್ಲಿನ ಗಣಿತಜ್ಞ ಎಲಿಯೆಟ್ ಮೆಂಡೆಲ್ಸನ್ ಪರಿಚಯ ಇದೆ ಅಂದುಕೊಳ್ಳುತ್ತೇನೆ. ನನ್ನ ತೀರಾ ಆತ್ಮೀಯ ಗೆಳೆಯ ಆತ ಎಂದರು ಏರ್ಡಿಶ್. ಪ್ರೊಫೆಸರ್ ಏರ್ಡಿಶ್ ಅವರೆ, ನಾನು ನಿಮ್ಮ ಗೆಳೆಯ ಎಲಿಯೆಟ್ ಮೆಂಡೆಲ್ಸನ್! – ಉತ್ತರ ಬಂತು.
– ರೋಹಿತ್ ಚಕ್ರತೀರ್ಥ