ಮೈಸೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಡಿಪೋಗಳಲ್ಲೇ ನಿಂತಿದ್ದ ಸಾರಿಗೆ ಬಸ್‌ಗಳು ಇಂದಿನಿಂದ ರಸ್ತೆಗಿಳಿದು ಸಾರ್ವಜನಿಕರಿಗೆ ಸೇವೆ ನೀಡಲಿವೆ. ಕಳೆದ 2 ತಿಂಗಳಿಂದ ಸಂಚಾರ ನಿಲ್ಲಿಸಿದ್ದ ಮೈಸೂರು ನಗರ ಮತ್ತು ಗ್ರಾಮಾಂತರ ಸಾರಿಗೆ ಬಸ್‌ಗಳು ಸೇವೆಗೆ ಸಜ್ಜಾಗಿವೆ. ನಗರದ ಬನ್ನಿಮಂಟಪ, ಸಾತಗಳ್ಳಿ, ಕುವೆಂಪು ನಗರ ಮತ್ತು ವಿಜಯ ನಗರ ಬಸ್ ಡಿಪೋಗಳಲ್ಲಿನ 448 ಬಸ್ ಗಳು, ಮೈಸೂರು ಗ್ರಾಮಾಂತರ ಸಾರಿಗೆ ವಿಭಾಗದ 700 ಬಸ್‌ಗಳು ಸೇವೆ ನೀಡಲಿವೆ.
ಅಗತ್ಯ ಮುಂಜಾಗ್ರತಾ ಕ್ರಮ: ಸೋಂಕು ತಡೆಗೆ ಮೈಸೂರಿನ ಎಲ್ಲಾ ಡಿಪೋಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಬಸ್‌ಗಳಿಗೆ ದ್ರಾವಣ ಸಿಂಪಡಿಸಲಾಗಿದೆ. ನೀರಿಗೆ ಬೀಚಿಂಗ್ ಬೆರೆಸಿ ಬಸ್ ತೊಳೆಯಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಘಟಕ ತೆರೆಯಲಾಗಿದೆ. ಪ್ರಯಾಣಿಕರ ಕೈಗಳಿಗೆ ಸಾನಿಟೈಸರ್ ನೀಡಲಾಗುತ್ತದೆ. ಬಸ್ ಹತ್ತಲು, ಇಳಿಯಲು ಒಂದು ಬಾರಿಗೆ ಒಬ್ಬರಿಗೆ ಮಾತ್ರ ಅವಕಾಶವಿದೆ. ಸಿಬ್ಬಂದಿ, ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ.
ರಸ್ತೆಗಿಳಿಯಲಿವೆ ಆಟೋ, ಟ್ಯಾಕ್ಸಿ: ಲಾಕ್‌ಡೌನ್ ಸಡಿಲಿಕೆ ಮಾಡಿ ಆಟೋ, ಟ್ಯಾಕ್ಸಿ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದರಿಂದ ವೋಲಾ, ಉಬರ್ ಸೇರಿದಂತೆ ಆಟೋ, ಟ್ಯಾಕ್ಸಿ, ಕ್ಯಾಬ್‌ಗಳು ಸಂಚಾರ ಆರಂಭಿಸಲಿವೆ.
ಬಸ್‌ಗಳು ಸರ್ಕಾರದ ಮಾರ್ಗಸೂಚಿಯಂತೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಸಂಚರಿಸಲಿವೆ. ಆರಂಭಿಕ ಹಂತದಲ್ಲಿ 60ರಿಂದ 70 ಬಸ್‌ಗಳನ್ನು ಬಿಡಲಾಗುವುದು. ಬಸ್ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ, ಸ್ಯಾನಿಟೇಸರ್ ಮಾಡಲಾಗುದು. ಮಧ್ಯೆ ಹತ್ತುವರಿಗೆ ಸ್ಯಾನಿಟೇಸರ್ ಮಾಡಲು ನಿರ್ವಾಹಕರಿಗೆ ತಿಳಿಸಲಾಗುವುದು.
-ಎಸ್.ಪಿ.ನಾಗರಾಜ್, ವಿಭಾಗೀಯ ನಿಯಂತ್ರಣಾಧಿಕಾರಿ, ನಗರ ಸಾರಿಗೆ