Advertisement

ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪಿಸಲು ಆಗ್ರಹ

09:39 PM May 11, 2019 | mahesh |

ಮಹಾನಗರ: ದ.ಕ., ಉಡುಪಿ, ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ರಾಜ್ಯ ಹೈಕೋರ್ಟ್‌ನ ಸಂಚಾರಿ ಪೀಠವನ್ನು ಸ್ಥಾಪಿಸಬೇಕು ಎಂದು ಸರಕಾರೇತರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

Advertisement

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಎಸ್‌. ಚಂದ್ರು, ಜನರು ಹೈಕೋರ್ಟ್‌ಗೆ ದೂರು ಸಲ್ಲಿಸಿ ನ್ಯಾಯ ಪಡೆಯಬೇಕಾದರೆ ಹೆಚ್ಚು ಸಮಯ, ಆರ್ಥಿಕ ಹೊರೆ, ನ್ಯಾಯವಾದಿಗಳ ಹುಡುಕಾಟ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪಿಸಿದರೆ ಕರಾವಳಿ ಭಾಗದ ಜನರಿಗೆ ನೆರವಾಗುತ್ತದೆ. ಉತ್ತರ ಕರ್ನಾಟಕದ ಗುಲ್ಬರ್ಗ, ಧಾರವಾಡದ ಮಾದರಿಯಲ್ಲಿ ನಗರದಲ್ಲಿ ಸಂಚಾರಿ ಪೀಠ ಸ್ಥಾಪಿಸಬೇಕು. ಈ ಬಗ್ಗೆ ಒಕ್ಕೂಟದ ವತಿಯಿಂದ ಎರಡು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಕಾನೂನು ಸಚಿವರು, ರಾಜ್ಯಪಾಲರು, ಮುಖ್ಯ ನ್ಯಾಯಾಧೀಶರು, ಸಂಸದರು, ಶಾಸಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಆರಂಭಿಕ ಹೋರಾಟಗಾರ ಎಸ್‌.ಪಿ. ಚೆಂಗಪ್ಪ, ದ.ಕ., ಉಡುಪಿ, ಕೊಡಗು ಭಾಗದ ನ್ಯಾಯವಾದಿಗಳು ಕೂಡ ಸಮಿತಿ ರಚಿಸಿ ಸಂಚಾರಿ ಪೀಠಕ್ಕೆ ಹೋರಾಟ ನಡೆಸುತ್ತಿರುವುದು ಅಭಿನಂದನೀಯ ಎಂದರು. ಈ ಬಗ್ಗೆ ಮುಖ್ಯಮಂತ್ರಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಂದ ಸ್ಪಂದನೆ ದೊರಕಿದೆ. ಶೀಘ್ರದಲ್ಲಿ ಈ ಬೇಡಿಕೆ ಈಡೇರದಿದ್ದಲ್ಲಿ ಜನಪ್ರತಿನಿಧಿಗಳ ಎದುರು ಹೋರಾಟ ಅನಿವಾರ್ಯ ಎಂದವರು ಹೇಳಿದರು.

ಕೆರೆಗಳ ಸಂರಕ್ಷಣೆ, ವಾರ್ಡ್‌ ಸಮಿತಿ ರಚನೆಗೆ ಒತ್ತಾಯ
ಹೆಚ್ಚು ಮಳೆಯಾಗುವ ಕರಾವಳಿ ಜಿಲ್ಲೆಯಲ್ಲಿ ನೀರಿಲ್ಲ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಕೆರೆ ಸಂರಕ್ಷಣೆ ಮಾಡುವಲ್ಲಿ ಸಂಬಂಧಪಟ್ಟವರು ಹೆಚ್ಚಿನ ಮುತುವರ್ಜಿ ವಹಿಸದಿರುವುದು ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಪ್ರಮುಖ ಕಾರಣ ಎಂದು ಒಕ್ಕೂಟದ ಸಲಹಾ ಮಂಡಳಿಯ ನಿರ್ದೇಶಕ ಪದ್ಮನಾಭ ಉಳ್ಳಾಲ ಹೇಳಿದರು. ಒಕ್ಕೂಟದ ವತಿಯಿಂದ ಕಳೆದ ಅಕ್ಟೋಬರ್‌ನಲ್ಲಿಯೇ ಸಮಸ್ಯೆಗಳ ಬಗ್ಗೆ ಎನ್‌ಜಿಒ, ತಜ್ಞರ ಜತೆ ಚರ್ಚೆ ನಡೆಸುವಂತೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿತ್ತು. ಆದರೆ ಅದಕ್ಕೆ ಪೂರಕ ಸ್ಪಂದಿಸಿಲ್ಲ ಎಂದರು.

ನಗರಾಡಳಿತ ಸಂಸ್ಥೆಗಳಲ್ಲಿ ವಾರ್ಡ್‌ ಸಮಿತಿ ರಚಿಸಬೇಕು ಎಂದು ಬಹಳಷ್ಟು ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದರೂ ಈವರೆಗೆ ಬೇಡಿಕೆ ಈಡೇರಿಲ್ಲ. ಜಿಲ್ಲೆಯ ಧಾರಣ ಸಾಮರ್ಥ್ಯ ಅರಿಯದೆ ಬೇಕಾಬಿಟ್ಟಿಯಾಗಿ ಕೈಗಾರಿಕೆಗಳಿಗೆ ಅನುಮತಿ ನೀಡುವ ಜತೆಗೆ ನೀರು ಪೂರೈಕೆಯನ್ನು ಕೂಡ ಮಾಡುವ ಮೂಲಕ ಬೇಸಗೆಯಲ್ಲಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ನಿರ್ಮಿಸಲಾಗುತ್ತಿದೆ. ಲಕ್ಯ ಡ್ಯಾಂನ ನೀರು ಸದುಪಯೋಗ ಮಾಡಿಕೊಂಡು, ಸಮುದ್ರದ ಉಪ್ಪು ನೀರು ಶುದ್ಧೀಕರಿಸಿ ನೀರು ವಿತರಣೆ ಮಾಡಬೇಕು. ಈ ಬಗ್ಗೆ ಗಮನ ಹರಿಸದಿದ್ದಲ್ಲಿ ಆಡಳಿತದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಹೋರಾಟ ನಡೆಸಲು ಒಕ್ಕೂಟ ನಿರ್ಧರಿಸಿದೆ ಎಂದು ಗೌರವಾಧ್ಯಕ್ಷ ವಿಜಯ ಕುಮಾರ್‌ ಹೆಗ್ಡೆ ಹೇಳಿದರು. ಪ್ರಧಾನ ಕಾರ್ಯದರ್ಶಿ ಮೆಲ್ವಿನ್‌ ಲೆಸ್ಲಿ, ಉಪಾಧ್ಯಕ, ನಾಗರಾಜ್‌ ಕೋಡಿಕೆರೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next