ಹೊಸನಗರ: ಕೋವಿಡ್ ವೈರಸ್‌ನಿಂದಾಗಿ ಸಮಸ್ಯೆಗಳು ದಿನೇ ದಿನೇ ಉಲ್ಬಣವಾಗುತ್ತಿವೆ. ಈ ನಡುವೆ ಸರ್ಕಾರಿ ಯೋಜನೆಗಳನ್ನು ನಂಬಿಕೊಂಡ ರೈತರ ಪಾಡುದೇವರಿಗೇ ಪ್ರೀತಿ ಎಂಬಂತಾಗಿದೆ. ಇದೀಗ ಹನಿ ನೀರಾವರಿ ಸಬ್ಸಿಡಿ ಬಾರದೇ ರೈತರ ಕಣ್ಣಲ್ಲಿ ನೀರ ಹನಿ ಉದುರುವಂತಾಗಿದೆ.
ತೋಟಗಾರಿಕೆ ಬೆಳೆಗೆ ಉತ್ತೇಜನ ನೀಡುವ ಸಲುವಾಗಿ ಮತ್ತು ನೀರಿನ ಉಳಿತಾಯದ ಹಿನ್ನೆಲೆಯಲ್ಲಿಹನಿ ನೀರಾವರಿಗೆ ಸರ್ಕಾರ ಸಬ್ಸಿಡಿ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಎಕರೆಗೆ ಇಂತಿಷ್ಟು ಎಂಬ ದರವನ್ನು ನಿಗದಿಪಡಿಸಿ ಜಿಜಿಆರ್‌ಸಿ ನಿಯಮಾವಳಿ ಪ್ರಕಾರ ಶೇ.90 ರಷ್ಟು ಸಬ್ಸಿಡಿಯನ್ನು ಸರ್ಕಾರ ನೀಡುತ್ತಿದೆ. ಆದರೆ ಕಳೆದ ಎರಡು ವರ್ಷದಿಂದ ಸಬ್ಸಿಡಿ ಬಾರದೇ ರೈತರು ಪರದಾಡುವಂತಾಗಿದೆ.
ಏನಿದು ಸಬ್ಸಿಡಿ ಯೋಜನೆ: ತೋಟಗಾರಿಕಾ ಬೆಳೆ ಬೆಳೆಯುವ ರೈತರು ಹನಿ ನೀರಾವರಿ ಯೋಜನೆಯನ್ನು ಅಳವಡಿಸಿಕೊಳ್ಳಬಹುದಾಗಿದೆ. ಅಡಕೆ, ತೆಂಗು ಸೇರಿದಂತೆ ತೋಟಗಾರಿಕಾ ಬೆಳೆ ಬೆಳೆಯುವ ರೈತರು ತಮ್ಮ ಆರ್‌ಟಿಸಿ, ಕೊಟೇಷನ್ ಮತ್ತು ಅರ್ಜಿಯನ್ನು ತೋಟಗಾರಿಕಾ ಇಲಾಖೆಗೆ ಸಲ್ಲಿಸಬೇಕು. ರೈತರಿಗೆ ಅವರ ಜಮೀನು ಆಧರಿಸಿ ಇಲಾಖೆ, ವರ್ಕ್ ಆರ್ಡರ್ ನೀಡುತ್ತದೆ. ನಂತರ ರೈತರು ಸೂಕ್ತ ಕಂಪನಿಗಳಿಂದ ಹನಿ ನೀರಾವರಿಯನ್ನು ಅಳವಡಿಸಿಕೊಂಡು ಸೂಕ್ತ ದಾಖಲೆಯನ್ನು ಇಲಾಖೆಗೆ ಸಲ್ಲಿಸಬೇಕು. ರೈತನಿಂದ ಬಂದ ಕಡತವನ್ನು ಜಿಜಿಆರ್‌ಸಿ ನಿಯಮಾವಳಿ ಪ್ರಕಾರ ಶೇ.90 ಸಬ್ಸಿಡಿ ಅನ್ವಯ ಮಾಡಿಕೊಂಡು ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ನಂತರ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ಹಣ ಹಾಕಲಾಗುತ್ತದೆ. ರೈತರು ತಮಗಿರುವ ತೋಟಗಾರಿಕೆ ಬೆಳೆಯನ್ನು ಅನ್ವಯಿಸಿ ಸಬ್ಸಿಡಿ ಯೋಜನೆಯನ್ನು ಪಡೆದುಕೊಳ್ಳಬಹುದು. ಸರ್ಕಾರದ ನಿಯಮಾವಳಿಯಂತೆ ಹನಿ ನೀರವರಿಯನ್ನು ಅಳವಡಿಸಿಕೊಂಡ ನಂತರ ಅರ್ಜಿ ಸಲ್ಲಿಸಿ ಸಬ್ಸಿಡಿ ಹಣಕ್ಕಾಗಿ ಕಾಯುತ್ತಿದ್ದಾರೆ. ಆದರೆ ಎರಡು ವರ್ಷದಿಂದ ಸಬ್ಸಿಡಿ ಬಂದಿಲ್ಲ. ಸಾಲ ಮಾಡಿಕೊಂಡು ತಮ್ಮ ತೋಟಗಳಿಗೆ ಹನಿ ನೀರಾವರಿ ಅಳವಡಿಸಿಕೊಂಡ ರೈತರು ಸಾಲ ಕಟ್ಟಲಾಗದೆ ಪರದಾಡುವಂತಾಗಿದೆ.
697 ಕಡತ ಬಾಕಿ: ತಾಲೂಕಿನ ತೋಟಗಾರಿಕಾ ಇಲಾಖೆಯಲ್ಲಿ ಸಬ್ಸಿಡಿಗಾಗಿ ಕಾದು ಕುಳಿತ 697 ಕಡತಗಳಿವೆ. 2018-19ರಲ್ಲಿ 313 ಫೈಲ್, 2019-20 ರಲ್ಲಿ 384 ರೈತರ್ ಫೈಲ್ ಸಬ್ಸಿಡಿಗಾಗಿ ಬಾಕಿ ಉಳಿದಿವೆ.ಈ ಬಗ್ಗೆ ಅಧಿ ಕಾರಿಗಳನ್ನು ಕೇಳಿದರೆ ಸಬ್ಸಿಡಿ ಬರುತ್ತದೆ ಎನ್ನುತ್ತಾರೆ ಹೊರತು ಯಾವಾಗ ಬರಲಿದೆ ಎಂಬ ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂಬುದು ರೈತರ ಅಳಲು.
ಮಲೆನಾಡಲ್ಲಿ ಕೃಷಿಯೇ ಒಂದು ಸವಾಲು. ಬಿಸಿಲ-ಮಳೆಯ ವ್ಯತ್ಯಯದಿಂದಾಗಿ ತೋಟಗಾರಿಕಾ ಬೆಳೆಯನ್ನು ಉಳಿಸಿಕೊಳ್ಳುವುದೇ ಕಷ್ಟ. ಈ ನಡುವೆ ಸಾಲಮಾಡಿ ಹನಿ ನೀರಾವರಿ ಅಳವಡಿಸಿಕೊಂಡ ರೈತರಿಗೆ ಸರ್ಕಾರದ ಸಬ್ಸಿಡಿ ಹಣವೇ ದಿಕ್ಕು. ಕೋವಿಡ್ ಆರ್ಭಟದಿಂದಾಗಿ ಬದುಕೇ ದೊಡ್ಡ ಸಮಸ್ಯೆಯಾಗಿದೆ. ಈ ನಡುವೆ ಬರಬೇಕಾದ ಸಬ್ಸಿಡಿ ಹಣವೂ ಬಾಕಿ ಉಳಿದರೆ ಏನು ಗತಿ ಸ್ವಾಮಿ. ಸರ್ಕಾರ ಇನ್ನಾದರೂ ರೈತರ ಹಿತರಕ್ಷಣೆಗೆ ಧಾವಿಸಲಿ.-
ಶ್ರೀಧರ ಶೆಟ್ಟಿ, ಕೋಟೆಕೆರೆ
ಹನಿ ನೀರಾವರಿ ಅಳವಡಿಸಿಕೊಂಡು ಸಬ್ಸಿಡಿ ಹಣಕ್ಕಾಗಿ ರೈತರು ಕಾಯುತ್ತಿರುವುದು ನಿಜ. ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶಿವಮೊಗ್ಗ ತೋಟಗಾರಿಕಾ ಇಲಾಖೆಯ ಡಿಡಿ ರಾಘವೇಂದ್ರ ಮಡಿವಾಳ್ ಅವರು ಬಂದು ಖುದ್ದಾಗಿ ಪರಿಶೀಲಿಸಿದ್ದಾರೆ.ಶೀಘ್ರ ಸಬ್ಸಿಡಿ ಹಣ ಮಂಜುರಾತಿಗೆ ಸರ್ಕಾರದ ಮಟ್ಟದಲ್ಲಿ ಮಾತನಾಡಲಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂಬ ಭರವಸೆ ನೀಡಿದ್ದಾರೆ. –
ಪುಟ್ಟನಾಯ್ಕ ಟಿ.ಸಿ., ತೋಟಗಾರಿಕೆ ಅಧಿಕಾರಿ, ಹೊಸನಗರ