Advertisement

ಸಾಲಮನ್ನಾ ನ್ಯೂನತೆ ಸರಿಪಡಿಸದಿದ್ರೆ ಹೋರಾಟ

10:44 AM Jul 06, 2019 | Team Udayavani |

ನರಗುಂದ: ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರಾಜ್ಯ ಸರ್ಕಾರ ಘೋಷಿಸಿದ ರೈತರ ಸಾಲಮನ್ನಾ ಯೋಜನೆಯಲ್ಲಿ ಸ್ಪಷ್ಟತೆಯಿಲ್ಲ. ಸಹಕಾರಿ ಬ್ಯಾಂಕ್‌ನಲ್ಲಿ ಲಾಭ ಪಡೆದ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಅವಕಾಶವಿಲ್ಲ. ಇಂತಹ ಹಲವಾರು ನ್ಯೂನತೆಗಳನ್ನು ಸರಿಪಡಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ಶಂಕರಪ್ಪ ಅಂಬಲಿ ಎಚ್ಚರಿಕೆ ನೀಡಿದರು.

Advertisement

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, 2017,ಡಿ.31ರವರೆಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ಸುಸ್ತಿ ಸಾಲ ಮತ್ತು 2018 ಜು.10ರವರೆಗಿನ ಸಹಕಾರಿ ಬ್ಯಾಂಕ್‌ನಲ್ಲಿನ ಸಾಲ ಮನ್ನಾ ಘೋಷಣೆ ಮಾಡಲಾಗಿದೆ. ಆದರೆ ಮೊದಲಿಗೆ ಸಹಕಾರಿ ಬ್ಯಾಂಕಿನಲ್ಲಿನ ಸಾಲಮನ್ನಾ ಮಾಡಿದ ಸರ್ಕಾರದ ಕ್ರಮದಿಂದ ಯೋಜನೆ ರೈತರಿಗೆ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲ ಎಂದರು.

ರಾಷ್ಟ್ರೀಕೃತ ಬ್ಯಾಂಕಿನಲ್ಲಿನ 2 ಲಕ್ಷ ಹಾಗೂ ಸಹಕಾರಿ ಬ್ಯಾಂಕಿನಲ್ಲಿನ 1 ಲಕ್ಷ ರೂ.ಸಾಲ ಮನ್ನಾ ಘೋಷಿಸಲಾಗಿದೆ. ಆದರೆ ಒಂದು ಕಡೆಗೆ ಲಾಭ ಪಡೆದ ರೈತರಿಗೆ ಮತ್ತೂಂದು ಕಡೆ ವಂಚಿತವಾಗುವಂತಾಗಿದೆ. ಉ.ಕ.ರೈತರಿಗೆ ಸಾಲಮನ್ನಾ ಲಾಭ ಸಿಗದಂತೆ ಮಾಡಲಾಗಿದೆ. ಆದ್ದರಿಂದ ಎಲ್ಲ ರೈತರ ಸಂಪೂರ್ಣ 2 ಲಕ್ಷ ರೂ. ಸಾಲಮನ್ನಾ ಘೋಷಣೆಗೆ ರಾಜ್ಯ ಸರ್ಕಾರ ಮುಂದಾಗದಿದ್ದರೆ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಹೇಳಿದರು.

ಅಧಿಸೂಚನೆ ನೀಡಲಿ: ನ್ಯಾಯಾಧೀಕರಣ ಮಹದಾಯಿ ನದಿ ನೀರು ಹಂಚಿಕೆ ಮಾಡಿ ವರ್ಷ ಗತಿಸುತ್ತ ಬಂದರೂ ನಮ್ಮ ಪಾಲಿನ ನೀರು ನಮಗೆ ದೊರಕುತ್ತಿಲ್ಲ. ಈ ಹಂತದಲ್ಲಿ ಕೇಂದ್ರ ಸರ್ಕಾರದ್ದು ಒಂದೆಡೆ ನಿರ್ಲಕ್ಷ್ಯವಾದರೆ, ರಾಜ್ಯ ಸರ್ಕಾರದ್ದು ಮತ್ತೂಂದೆಡೆ ನಿರ್ಲಕ್ಷ ್ಯವಾಗುತ್ತಿದೆ. ಮುಖ್ಯವಾಗಿ ಕೇಂದ್ರ ಸರ್ಕಾರ ಅಗತ್ಯ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಪಿನಂತೆ ಪರಿಷ್ಕೃತ ಯೋಜನಾ ವರದಿ(ಡಿಪಿಆರ್‌) ಇದುವರೆಗೂ ಸಲ್ಲಿಸದಿರುವುದು ಪ್ರಮುಖ ಅಡ್ಡಿಯಾಗಿದೆ ಎಂದು ಶಂಕರಪ್ಪ ಅಂಬಲಿ ಆರೋಪಿಸಿದರು.

ಒಂದೊಂದು ವಿಷಯದಲ್ಲಿ ಮೂರೂ ರಾಜ್ಯಗಳು ನ್ಯಾಯಾಧೀಕರಣ ತೀರ್ಪು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿವೆ. ಆದರೆ ಈ ಹಂತದಲ್ಲಿ ನಮ್ಮ ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ಪಡೆಯಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಜಲಶಕ್ತಿ, ಪರಿಸರ, ಅರಣ್ಯ ಇಲಾಖೆ ಅನುಮತಿ ಪಡೆದರೆ ಆ ಕೂಡಲೇ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್‌ ಹೊರಡಿಸಬೇಕು ಎಂದು ಒತ್ತಾಯಿಸಿದರು.

Advertisement

ಇದೇ ಜು.16ಕ್ಕೆ ಮಹದಾಯಿ ಹೋರಾಟ 4 ವರ್ಷಗಳನ್ನು ಪೂರೈಸುತ್ತ ಬಂದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಮಾತು ಆಲಿಸುತ್ತಿಲ್ಲ. ಇನ್ನಾದರೂ ಉಭಯ ಸರ್ಕಾರಗಳು ಸಮನ್ವಯತೆಯಿಂದ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ರೈತಸಂಘ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ, ಶಹರ ಅಧ್ಯಕ್ಷ ವಿಠಲ ಜಾಧವ, ಲೋಕನಾಥ ಹೆಬಸೂರ, ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ವೀರಣ್ಣ ಸೊಪ್ಪಿನ, ಚನ್ನು ನಂದಿ, ಜಿನ್ನಪ್ಪ ಮುತ್ತಿನ ಇದ್ದರು.

ರೈತರ ಮೇಲಿನ ಪ್ರಕರಣ ಬಾಕಿ:

ಹಿಂದಿನ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಮಹದಾಯಿ ಹೋರಾಟದಲ್ಲಿ ರೈತರ ಮೇಲೆ ದಾಖಲಾದ ಎಲ್ಲ ಪ್ರಕರಣ ಹಿಂಪಡೆಯಲಾಗಿದೆ ಎಂದು ಘೋಷಿಸಲಾಗಿತ್ತು. ಆದರೆ ನರಗುಂದ, ನವಲಗುಂದ, ಹುಬ್ಬಳ್ಳಿ, ಸವದತ್ತಿ ತಾಲೂಕುಗಳ ಸುಮಾರು 300 ರೈತರ ಮೇಲೆ ಇನ್ನೂ ಪ್ರಕರಣ ದಾಖಲಿವೆ. ಹೀಗಾಗಿ ರೈತರು ಇಂದಿಗೂ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ. ಸರ್ಕಾರ ಕೂಡಲೇ ಉಳಿದ ರೈತರ ಮೇಲಿನ ಪ್ರಕರಣ ಹಿಂಪಡೆಯಬೇಕು. •ಶಂಕರಪ್ಪ ಅಂಬಲಿ. ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ.
Advertisement

Udayavani is now on Telegram. Click here to join our channel and stay updated with the latest news.

Next