ಚಿಕ್ಕಮಗಳೂರು: ನಗರದಲ್ಲಿ ತಳ್ಳುಗಾಡಿ ವ್ಯಾಪಾರಿಗಳಿಗೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ನಗರಸಭೆ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ವ್ಯಾಪಾರಿಯೊಬ್ಬರು ತಳ್ಳುಗಾಡಿಗೆ ಬೆಂಕಿ ಹಚ್ಚಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಮಲ್ಲಂದೂರು ರಸ್ತೆಯಲ್ಲಿ ಸೋಮವಾರ ಸಂಜೆ ತಳ್ಳುಗಾಡಿ ವ್ಯಾಪಾರಿಯೊಬ್ಬರು ತಳ್ಳುಗಾಡಿ ಮೂಲಕ ವ್ಯಾಪಾರ ಮಾಡುತ್ತಿದ್ದರು. ಅವರನ್ನು ನಗರಸಭೆಯವರು ತೆರವು ಮಾಡಲು ಮುಂದಾಗಿದ್ದರು. ಈ ವೇಳೆ ತಳ್ಳುಗಾಡಿ ವ್ಯಾಪಾರಿಯೊಬ್ಬರು ಗಾಡಿಯನ್ನು ತೆರವು ಮಾಡಲು ಒಪ್ಪದೆ ನಗರಸಭೆ ಸಿಬ್ಬಂದಿ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಳ್ಳುಗಾಡಿಯನ್ನು ತೆರವು ಮಾಡದಂತೆ ವ್ಯಾಪಾರಿ ಪರಿಪರಿಯಾಗಿ ಬೇಡಿಕೊಂಡರೂ ಒಪ್ಪದ ನಗರಸಭೆ ಸಿಬ್ಬಂದಿ ತಳ್ಳುಗಾಡಿಯನ್ನು ತೆರವು ಮಾಡಲು ಮುಂದಾಗಿದ್ದಾರೆ.
ಇದರಿಂದ ಬೇಸತ್ತ ವ್ಯಾಪಾರಿ ತನ್ನ ತಳ್ಳುಗಾಡಿಗೆ ತಾನೇ ಬೆಂಕಿ ಹಚ್ಚಿಕೊಂಡು ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಳ್ಳುಗಾಡಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ವ್ಯಾಪಾರ ಮಾಡಲು ಸಾಲ ಮಾಡಿದ್ದೇನೆ. ನಗರಸಭೆ ಅಧಿಕಾರಿ, ಸಿಬ್ಬಂದಿ ವ್ಯಾಪಾರ ಮಾಡಲು ಲಂಚ ಕೇಳುತ್ತಾರೆ. ಲಂಚ ನೀಡದಿದ್ದಲ್ಲಿ ತಳ್ಳುಗಾಡಿಯನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುವಂತಿಲ್ಲ ಎಂದು ಗಾಡಿಯನ್ನೇ ಕೊಂಡೊಯ್ಯುತ್ತಿದ್ದಾರೆ. ನಾವು ಬಡವರು, ವ್ಯಾಪಾರ ಇಲ್ಲದಿದ್ದರೆ ಕುಟುಂಬವನ್ನು ಸಾಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಯನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದವರು ಬಡ ವ್ಯಾಪಾರಿಗಳ ಮೇಲೆ ನಗರಸಭೆ ಅಧಿಕಾರಿ, ಸಿಬ್ಬಂದಿ ನೀಡುತ್ತಿರುವ ಕಿರುಕುಳದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಳ್ಳುಗಾಡಿ ವ್ಯಾಪಾರಿಗಳು ಎಲ್ಲೆಂದರಲ್ಲಿ ಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಪೊಲೀಸ್ ಇಲಾಖೆಯವರು ನಗರಸಭೆಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ತಳ್ಳುಗಾಡಿಯನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡದೆ ತಳ್ಳಿಕೊಂಡೇ ವ್ಯಾಪಾರ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಕೆಲ ವ್ಯಾಪಾರಿಗಳು ರಸ್ತೆ ಬದಿಗಳಲ್ಲಿ ಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕಾರಣಕ್ಕೆ ಇಂತಹ ವ್ಯಾಪಾರಿಗಳಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಸೋಮವಾರ ಮಲ್ಲಂದೂರು ರಸ್ತೆಯ ವ್ಯಾಪಾರಿಗೆ ನಗರಸಭೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರಷ್ಟೆ. ಅವರು ಗಾಡಿಗೆ ಬೆಂಕಿ ಹಚ್ಚಿಲ್ಲ.
–ವರಸಿದ್ಧಿ ವೇಣುಗೋಪಾಲ್, ನಗರಸಭೆ ಅಧ್ಯಕ್ಷ