ತುಮಕೂರು: ಅಧಿಕಾರಿಗಳ ಜೊತೆ ಡೀಲ್ ಮಾಡಿಕೊಳ್ಳುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಕರಗತ, ನಾವು ಆ ಜಾಯಮಾನದಲ್ಲಿ ಬಂದಿಲ್ಲ. ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಮಾಡುವ ಡೀಲ್, ಕಿಕ್‌ಬ್ಯಾಕ್ ವ್ಯವಹಾರ ಎಲ್ಲದರಲ್ಲಿಯೂ ಪರಿಣಿತರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.
ಸಿಎಂ ಹೇಳಿಕೆಗೆ ಸಹಮತ: ಅವರು ನಗರದ ಪುರಸ್ ಕಾಲೋನಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಡೀಲ್ ಮಾಡೋದು ಕುಮಾರ ಸ್ವಾಮಿಯಿಂದ ಕಲಿಬೇಕಿಲ್ಲ ನಾನು 1984 ರಲ್ಲಿಯೇ ಮಂತ್ರಿಯಾದವನು ಎಂದು ಮುಖ್ಯ ಮಂತ್ರಿಯವರ ಹೇಳಿಕೆಗೆ ಉತ್ತರಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಿದ್ದರಾಮಯ್ಯ ಅವರ ಮಾತಿಗೆ ನನ್ನ ಸಹಮತವಿದೆ ಎಂದಿದ್ದಾರೆ.
ಅಧಿಕಾರಿಗಳ ಜೊತೆ ಡೀಲ್ ಮಾಡಿಕೊಳ್ಳುವುದು ಸಿದ್ದರಾಮಯ್ಯನವರಿಗೆ ಮಾತ್ರ ಕರಗತ ನಾವು ಆ ಜಾಯಮಾನದಲ್ಲಿ ಎಂದೂ ಬಂದವರಲ್ಲ. ಮುಖ್ಯ ಮಂತ್ರಿ ಹೆಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅಧಿಕಾರಿಗಳ ಜೊತೆ ಮಾಡುವ ಡೀಲ್ ಹಾಗೂ ಇತರೆ ವ್ಯವಹಾರಗಳು ಹೇಗೆ ರುಜು ಹಾಕಿಕೊಳ್ಳಬೇಕು ಅನ್ನೋದರಲ್ಲಿ ಸಿದ್ದರಾಮಯ್ಯ ಪರಿಣಿತರು ಎಂದು ಹೇಳಿದರು.
ಆರ್ಥಿಕ ಪರಿಸ್ಥಿತಿ ದುರ್ಬಲ: ಅಂತವರಿಗೆ ನಾವು ಹೇಳಿಕೊಡಲು ಆಗುವುದಿಲ್ಲ, ಅವರಿಗೆ ಹೇಳಿ ಕೊಡುವಷ್ಟು ನಾವು ದೊಡ್ಡವರಲ್ಲ. ಸಿದ್ದರಾಮಯ್ಯ ಇರುವುದೇ ಈ ರಾಜ್ಯದ ಲೂಟಿ ಮಾಡುವುದಕ್ಕೆ ಅನ್ನುವುದು ಅಂಕಿ ಅಂಶಗಳಿಂದ ಸಾಬೀತಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವ ಬಗ್ಗೆ ಬಿಸ್‌ನೆಸ್ ಲೈನ್ ಪತ್ರಿಕೆ ಬಹಿರಂಗ ಪಡಿಸಿದೆ ಎಂದರು.
ಈ ಮುಖ್ಯಮಂತ್ರಿಗಳು ರಾಜ್ಯದ ಬೊಕ್ಕಸವನ್ನು ದಿವಾಳಿ ಮಾಡಿ ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ದುರಂಕಾರ, ಗರ್ವ, ದುಡ್ಡಿನ ಮದ ಅವರನ್ನು ಈ ರೀತಿ ಮಾತನಾಡಿಸುತ್ತಿದೆ ಎಂದರು. ಲಂಚದ ಪಾಠ: ಆರೋಗ್ಯ ಸಚಿವರೇ ವಿಧಾನ ಸೌಧದಲ್ಲಿ ಹೇಳಿದ್ದರು ಲಂಚ ತೆಗೆದುಕೊಳ್ಳೋದು ತಪ್ಪಿಲ್ಲ ಎಂದು ಹೇಳಿದ್ದರು. ದುಡ್ಡು ಹೊಡೆಯುವುದನ್ನು ನಾವು ಕಲಿತುಕೊಂಡಿದ್ದೇವೆ ನೀವು ಕಲಿತು ಕೊಳ್ಳಿ ಎಂದು ವಿಧಾನ ಸಭೆಯಲ್ಲಿ ಪಾಠ ಮಾಡಿದ್ದಾರೆ ಎಂದರು.
ಗುಬ್ಬಿ ಶಾಸಕ ಶ್ರೀನಿವಾಸ್, ಮೇಯರ್ ರವಿಕುಮಾರ್, ತುಮಕೂರು ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜ್, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾಯದರ್ಶಿ ಇಂತಿಯಾಸ್ ಇದ್ದರು.