ಈ ಹಿಂದೆ “ಷಡ್ಯಂತ್ರ’, “ರೆಡ್’, “ಬ್ಲೂ ಐಸ್’ ಮೊದಲಾದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದ ಹಿರಿಯ ಛಾಯಾಗ್ರಾಹಕ ಮತ್ತು ನಿರ್ಮಾಪಕರ ಸಂಘದ ಸ್ಥಾಪಕ ಹೆಚ್.ಎಂ.ಕೆ.ಮೂರ್ತಿಯವರ ಪುತ್ರ ರಾಜೇಶ್ ಮೂರ್ತಿ ಈಗ “ಡೆಡ್ಲಿ ಅಫೇರ್’ ಎನ್ನುವ ಮತ್ತೊಂದು ಚಿತ್ರವನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ತಮ್ಮ ಈ ಹಿಂದಿನ ಚಿತ್ರಗಳಲ್ಲಿ ಪತಿ-ಪತ್ನಿ ಸಂಬಂಧಗಳು ಮತ್ತು ಸೈಕಲಾಜಿಕಲ್ ಕಥಾಹಂದರವನ್ನು ತೆರೆಮೇಲೆ ಹೇಳಿದ್ದ ರಾಜೇಶ್ ಮೂರ್ತಿ ಈ ಬಾರಿ ವಿವಾಹೇತರ ಸಂಬಂಧಗಳ ಕುರಿತಾಗಿರುವ ಕಥೆಯೊಂದನ್ನು ತೆರೆಮೇಲೆ ಹೇಳ ಹೊರಟಿದ್ದಾರೆ.
ಅಂದಹಾಗೆ, ಶೇಕಡಾ 90ರಷ್ಟು ಗಂಡಸರ ಜೀವನದಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕಥಾ ವಸ್ತು. ವಿವಾಹೇತರ ಸಂಬಂಧಗಳನ್ನು ಇಟ್ಟುಕೊಂಡಿರುವವರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಅಮಾಯಕ ಗಂಡಸರನ್ನು ಅಂತಹ ಹೆಂಗಸರು ಯಾವ ರೀತಿ ಬ್ಲಾಕ್‌ವೆುàಲ್ ಮಾಡುತ್ತಾರೆ. ಅಂತಹವರಿಂದ ಯಾವ ರೀತಿ ಟಾರ್ಚರ್ ಅನುಭವಿಸಬೇಕಾಗುತ್ತದೆ. ಇದೆಲ್ಲದರ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ ಎಂದು ವಿವರಣೆ ಕೊಡುತ್ತಾರೆ ನಿರ್ದೇಶಕರು.
ಈಗಾಗಲೇ ಚಿತ್ರದ ಶೂಟಿಂಗ್ ಹಾಗೂ ಪೋಸ್ಟ್ -ಪ್ರೊಡಕ್ಷನ್‌ನ ಬಹುತೇಕ ಕೆಲಸಗಳೆಲ್ಲಾ ಮುಗಿದು ಇತ್ತೀಚೆಗಷ್ಟೇ ಚಿತ್ರದ ಸೆನ್ಸಾರ್ ಕೂಡ ಆಗಿದೆ. “ಓಂ ಶ್ರೀಸಿನಿಮಾ’ ಬ್ಯಾನರ್‌ನಲ್ಲಿ ಈ ಚಿತ್ರಕ್ಕೆ ನಿರ್ದೇಶಕ ರಾಜೇಶ್ ಮೂರ್ತಿ ಅವರೆ ಕಥೆ-ಚಿತ್ರಕಥೆ ಬರೆದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ನಿತಿನ್ ಕುಮಾರ್ ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ವಿನೋದ್ ಆರ್. ಛಾಯಾಗ್ರಹಣ, ಸತೀಶ್ ಸಂಕಲನ ಕಾರ್ಯವಿದೆ.
ಸ್ವಪನ್ ಕೃಷ್ಣ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಗುನ್‌ಜನ್ ಅರಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಹುಲ್ ಸೋಮಣ್ಣ, ರಾಜೇಶ್ ಮಿಶ್ರ, ಮಾಸ್ಟರ್ ವಿಶೃತ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಹೊಸವರ್ಷದ ಆರಂಭದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.