Advertisement

ಆತ್ಮಹತ್ಯೆ ಮಹಾಪಾಪ! ಅನ್ನದಾತನ ಬವಣೆಗೊಂದು ಪರಿಹಾರ

03:45 AM Jan 27, 2017 | Team Udayavani |

ರೈತರ ಬವಣೆ ಮತ್ತು ಅವರ ಆತ್ಮಹತ್ಯೆ ಕುರಿತು ಈಗಾಗಲೇ ಹಲವು ಸಿನಿಮಾಗಳು, ಕಿರುಚಿತ್ರಗಳು ಬಂದಿವೆ. ಆ ಸಾಲಿಗೆ “ಅನ್ನದಾತ’ ಎಂಬ ಕಿರುಚಿತ್ರವೂ ಒಂದು. ಈ ಕಿರುಚಿತ್ರದ ಮೂಲಕ ವಚನ್‌ ಮನಿಯ ನಿರ್ದೇಶಕರಾಗಿದ್ದಾರೆ. “1995 ರಿಂದ 2014 ರವರೆಗೆ ಸುಮಾರು ನಾಲ್ಕು ಲಕ್ಷದಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

2004 ರಲ್ಲಿ 8,724 ರೈತರು ಸಮಸ್ಯೆಗೆ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಪ್ರತಿ ನಿತ್ಯ 42 ರಿಂದ 45 ಮಂದಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನಿಟ್ಟುಕೊಂಡು, ರೈತರ ಆತ್ಮಹತ್ಯೆ ತಡೆಗೊಂದು ಬಲವಾದ ಪರಿಹಾರ ಕಂಡುಕೊಳ್ಳಬೇಕು’ ಎಂಬ ನಿಟ್ಟಿನಲ್ಲೇ “ಅನ್ನದಾತ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದಾಗಿ ಹೇಳುತ್ತಾರೆ ವಚನ್‌ ಮನಿಯ. ಈಗಾಗಲೇ “ಅನ್ನದಾತ’ ಕಿರುಚಿತ್ರ ಡೆಲ್ಲಿ ಮತ್ತು ಮುಂಬೈನ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ. 

ಇತ್ತೀಚೆಗೆ ಪತ್ರಕರ್ತರಿಗೊಂದು ಪ್ರದರ್ಶನ ಏರ್ಪಡಿಸಿದ್ದ ವಚನ್‌ ಮನಿಯ, ಈ ಮೂಲಕ ರೈತರ ಆತ್ಮಹತ್ಯೆ ತಡೆಗಟ್ಟುವ ಕುರಿತು ಒಂದು ಚರ್ಚೆ ನಡೆಯಬೇಕು. ಸಾಮಾಜಿಕ ತಾಣಗಳಲ್ಲಿ ಈ ಕಿರುಚಿತ್ರವನ್ನು ಅಪ್‌ಲೋಡ್‌ ಮಾಡಿ, ಆ ಮೂಲಕ ಜಾಗೃತಿ ಉಂಟು ಮಾಡುವ ಸಣ್ಣ ಪ್ರಯತ್ನ ಮಾಡಲು ಹೊರಟಿದ್ದೇನೆ.

ಇಲ್ಲಿ ಸಾವಿಗೆ ಪರಿಹಾರ ಸೂಚಿಸಿಲ್ಲ. ಆದರೆ, ಆತ್ಮಹತ್ಯೆ ತಡೆಗೆ ಕುರಿತಾದ ಚರ್ಚೆಗಳು ನಡೆಯಬೇಕು. ಸಾಮಾಜಿಕ ತಾಣಗಳ ಮೂಲಕ ಒಂದು ದೊಡ್ಡ ಜಾಗೃತಿಯಾಗಬೇಕು ಎಂಬ ಆಸೆ ನನ್ನದು’ ಎನ್ನುತ್ತಾರೆ ವಚನ್‌ ಮನಿಯ.
ಅಂದಹಾಗೆ, ಮಾಗಡಿ ತಾಲೂಕಿನ ನೀಲಸಂದ್ರ ಎಂಬ ಗ್ರಾಮದಲ್ಲಿ “ಅನ್ನದಾತ’ ಕಿರುಚಿತ್ರವನ್ನು ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಬಬಿಂದರ್‌ ಸಿಂಗ್‌ ಕ್ಯಾಮೆರಾ ಹಿಡಿದಿದ್ದಾರೆ. ಸಮೀರ್‌ ಕುಲಕರ್ಣಿ ಸಂಗೀತ ನೀಡಿದ್ದಾರೆ. ಈಗಾಗಲೇ ಈ ಕಿರುಚಿತ್ರವನ್ನು ವೀಕ್ಷಿಸಿರುವ ಹಿರಿಯ ಕಲಾವಿದ ದತ್ತಣ್ಣ ಮತ್ತು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಕಿರುಚಿತ್ರದೊಳಗಿನ ಆಶಯಗಳ ಬಗ್ಗೆ ಮಾತಾಡಿದ್ದಾರೆ. ನಂಜಪ್ಪಣ್ಣ ಇಲ್ಲಿ ರೈತರಾಗಿ ನಟಿಸಿದರೆ, ಅವರ ಸಹೋದರಿ ಭದ್ರಕಾಳಮ್ಮ ಅವರು ಅವರ ತಾಯಿಯಾಗಿ ನಟಿಸಿದ್ದಾರೆ. ಉಳಿದಂತೆ ಬೋರೇಗೌಡ, ವಿನಯ್‌ಕುಮಾರ್‌ ಕಿರುಚಿತ್ರದ ಹೈಲೆಟ್‌. ಅಂದು ಈ ಕಿರುಚಿತ್ರದ ಹಿಂದೆ ಕೆಲಸ ಮಾಡಿದ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ಮನಿಯ ಸಂಸ್ಥೆ ನೆನಪಿನ ಕಾಣಿಕೆ ನೀಡಿ ಗೌರವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next