ಮುಧೋಳ: ಪ್ರತಿ ವರ್ಷ ಘಟಪ್ರಭಾ ನದಿಯ ಪ್ರವಾಹದಿಂದ ವರ್ಷದ ಗಂಜಿಯನ್ನು ಕಳೆದುಕೊಳ್ಳುತ್ತಿದ್ದೇವೆ. ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಬೇಕು.
ಸರ್ಕಾರ ದಿ.6 ಒಳಗೆ ರೈತರ ಪರವಾದ ನಿರ್ಧಾರವನ್ನು ಪ್ರಕಟಿಸದಿದ್ದರೆ ದಿ.7 ರಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಘಟಪ್ರಭಾ ನದಿ ಸಂತ್ರಸ್ಥರು ಶನಿವಾರ ಜಿಎಲ್ ಬಿಸಿ ಆವರಣದಲ್ಲಿ ಸಭೆಯಲ್ಲಿ ನಿರ್ಧರಿಸಿ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ಕಬ್ಬು ಬೆಳೆಗಾರರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಸೋರಗಾಂವಿ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷರಾದ ದುಂಡಪ್ಪ ಲಿಂಗರಡ್ಡಿ, ಮುತ್ತಪ್ಪ ಕೋಮಾರ ಮುಖಂಡರಾದ ಮಹೇಶಗೌಡ ಪಾಟೀಲ, ಸುಗುರಪ್ಪ ಅಕ್ಕಿಮರಡಿ, ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ ಮುಂತಾದವರು ಮಾತನಾಡಿ ಬೆಳೆ ಪರಿಹಾರವನ್ನು ಕಬ್ಬಿನ ಬೆಳೆಗೆ ಒಂದು ಎಕರೆಗೆ 1 ಲಕ್ಷ ಹಾಗೂ ಇತರೆ ಬೆಳೆಗಳಿಗೆ 50 ಸಾವಿರ ನೀಡಬೇಕು. ಹಾಗೂ ಎನ್ ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಮಾನದಂಡಗಳನ್ನು ಬದಲಾವಣೆಯನ್ನು ಮಾಡಬೇಕು. ಪ್ರವಾಹದಿಂದ ಮುಳುಗಡೆಯಾಗುವ ಗ್ರಾಮಗಳಿಗೆ ಹಾಗೂ ಮನೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸಬೇಕು. ಸತತವಾಗಿ ಮುಳುಗಡೆಯಾಗುವ ಜಮೀನುಗಳಿಗೆ ಶಾಶ್ವತ ಪರಿಹಾರ ನೀಡಬೇಕು. ಕಾತರಗಿ ಹಾಗೂ ಕಲಾದಗಿ ಮದ್ಯದ ಸೇತುವೆಯನ್ನು 50 ಮೀಟರ್ ಅಗಲೀಕರಣ ಮಾಡಲು ತುರ್ತು ಕ್ರಮ ಜರುಗಿಸಬೇಕು. ವಿದ್ಯುತ್ ಲೈನ್ ಗಳನ್ನ ಹಾಗೂ ಟಿಸಿಗಳನ್ನು ಕೂಡಲೇ ರಿಪೇರಿ ಮಾಡಿ ಸರಿಪಡಿಸಬೇಕು. ರೈತರ ಪಂಪಸೇಟ್ ಹಾನಿಗೊಳಗಾಗಿದ್ದು ಇವುಗಳಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಎಲ್ ಬಿಸಿ ಆವರದಲ್ಲಿ ಸಭೆ ಮುಗಿಸಿ ತಹಶೀಲ್ದಾರ್ ಮನವಿ ನೀಡಲಾಯಿತು. ತಹಶೀಲ್ದಾರ್ ವಿನೋದ ಹತ್ತಳ್ಳಿ ರವರು ಮನವಿ ಸ್ವೀಕರಿಸಿ ನೀವು ನೀಡಿದ ಮನವಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರಿಗೆ ಕಳುಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಖಂಡರಾದ ಮಲ್ಲಪ್ಪ ಕೋಮಾರ್, ನಿಂಗಪ್ಪ ಹೊಸಕೋಟಿ, ಕಲ್ಮೇಶ ಹನಬೋಜಿ, ಬಂಡುದಾದ ಘಾಟಗೆ, ಸದಪ್ಪ ತೇಲಿ, ವೆಂಕಣ್ಣ ಗಿಡ್ಡಪನವರ, ಹನಮಂತ ಅಡವಿ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ ಮುಂತಾದವರು ಭಾಗವಹಿಸಿದ್ದರು.
ಇದನ್ನೂ ಓದಿ: Runway Flooded: ಮಳೆಗೆ ಕೋಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ…