ಬೀದರ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ್ ಯಾದವ ಸಂಬಂಧಿಸಿದ ಎಲ್ಲ ಅನುಷ್ಠಾನಾಧಿಕಾರಿಗಳಿಗೆ ಗಡುವು ವಿಧಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಯೋಜನೆಯಡಿ 30 ಲಕ್ಷ ವರೆಗಿನ ಕಾಮಗಾರಿಗಳನ್ನು 3 ತಿಂಗಳೊಳಗೆ, 30 ಲಕ್ಷದಿಂದ 1 ಕೋಟಿವರೆಗಿನ ಕಾಮಗಾರಿಗಳನ್ನು 5 ತಿಂಗಳೊಳಗೆ, 1 ಕೋಟಿ ರೂ. ಕಾಮಗಾರಿಗಳನ್ನು 6 ತಿಂಗಳೊಳಗೆ ಪೂರ್ಣಗೊಳಿಸಬೇಕು.
ನಿವೇಶನ ಪರಿಶೀಲನೆ, ಕಾಮಗಾರಿ ಸ್ಥಳ ಮತ್ತು ಕಾಮಗಾರಿ ಬದಲಾವಣೆಯಂತಹ ಪ್ರಕ್ರಿಯೆ ಕೂಡ ತಿಂಗಳೊಳಗೆ ಮುಗಿಸಬೇಕು ಎಂದು ನಿರ್ದೇಶನ ನೀಡಿದರು. 2019ರ ಅ.11ರ ವರೆಗೆ 109 ಕಾಮಗಾರಿಗಳು ಮತ್ತು ಡಿ.20ರ ವರೆಗೆ 64 ಕಾಮಗಾರಿಗಳು ಆರಂಭವಾಗದೇ ಇರುವ ಬಗ್ಗೆ ಕಾರ್ಯದರ್ಶಿಗಳು ಸಂಬಂಧಿಸಿದ ಇಲಾಖೆಗಳಿಂದ ವಿವರಣೆ ಕೇಳಿದರು. ಲೋಕೋಪಯೋಗಿ ಇಲಾಖೆಯಿಂದ ಬಾಕಿ ಇರುವ 31 ಕಾಮಗಾರಿಗಳ ಪೈಕಿ 22 ಕಾಮಗಾರಿಗಳಿಗೆ ಈ ವರ್ಷ ಮಂಜೂರಾತಿ ಸಿಕ್ಕಿದೆ. ಇನ್ನುಳಿದ 9 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಅಭಿಯಂತರರು ಗಮನಕ್ಕೆ ತಂದರು. 13 ಕಾಮಗಾರಿ ಆರಂಭಿಸದೇ ಇರುವ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಕಾಮಗಾರಿಗಳ ಅನುಷ್ಠಾನಕ್ಕೆ ಒತ್ತು ಕೊಡುವಂತೆ ಸೂಚಿಸಲಾಯಿತು.
ಪ್ರಗತಿ ತೃಪ್ತಿಕರವಾಗಿಲ್ಲ: 2018-19ನೇ ಸಾಲಿನ ಕ್ರಿಯಾ ಯೋಜನೆಗಳಲ್ಲಿನ ಕಾಮಗಾರಿಗಳಿಗೆ ಅನುಮತಿ ನೀಡಿ ವರ್ಷವಾದರೂ ಅವುಗಳ ಪ್ರಗತಿ ತೃಪ್ತಿಕರವಾಗಿಲ್ಲ. ಕಾಮಗಾರಿ ಬದಲಾವಣೆ, ಅನುಷ್ಠಾನ, ಇಲಾಖೆ ಬದಲಾವಣೆ, ಕಾಮಗಾರಿ ರದ್ದು ಪಡಿಸುವುದು, ಕಾಮಗಾರಿಗೆ ಹೆಚ್ಚುವರಿ ಅನುದಾನಕ್ಕೆ ಸಂಬಂಧಿಸಿದ ಪ್ರಸ್ತಾವನೆ ಸರಿಯಾದ ಸಮಯಕ್ಕೆ ಕಳುಹಿಸಬೇಕು. ಕಡತಗಳನ್ನು ವರ್ಷಗಟ್ಟಲೇ ಇಟ್ಟುಕೊಂಡು ಕೂಡುವುದು ಸರಿಯಲ್ಲ. ಡಿಸೆಂಬರ್ ಮುಗಿಯಲು ಬಂದಿದ್ದು, ಕಾಮಗಾರಿ ಆರಂಭಕ್ಕೆ ಸಂಬಂಧಿಸಿದ ಪ್ರಕ್ರಿಯೆ ಕೂಡಲೇ ಪೂರ್ಣಗೊಳಿಸಬೇಕು. ಭೌತಿಕ-ಆರ್ಥಿಕ ಪ್ರಗತಿ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಹಿಂದೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಲವು ಕಾಮಗಾರಿ ಆರಂಭಿಸಲು ಮತ್ತು ಪೂರ್ಣಗೊಳಿಸುವಂತೆ ಕಾಲಮಿತಿ ನಿರ್ಧರಿಸಿ ತಿಳಿಸಿದ್ದರೂ ಕೆಲ ಇಲಾಖೆಗಳು ಅನಗತ್ಯ ವಿಳಂಬ ಮಾಡುತ್ತಿವೆ. ಅಧಿಕಾರಿಗಳು ಇಲ್ಲದ ನೆಪ ಹೇಳಿ ಕಾಲಹರಣ ಮಾಡಿದರೆ ಕಾಮಗಾರಿ ಅನುಷ್ಠಾನ ಮತ್ತು ಕಾಮಗಾರಿ ಅನುದಾನ ಬಳಕೆಯಾಗುವುದಿಲ್ಲ. ಇನ್ಮುಂದೆ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅಧಿಕಾರಿಗಳು ಮುಂದೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ಕಾರ್ಯದರ್ಶಿಗಳು ಇದೇ ವೇಳೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಧಿಕಾರಿ ಡಾ| ಎಚ್. ಆರ್. ಮಹಾದೇವ, ಜಿ.ಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಇತರರು ಇದ್ದರು.