ಬೆಂಗಳೂರು: ನಗರದಲ್ಲಿ ನಿಗದಿತ ಗಡುವಿನ ನಂತರವೂ ಓಡಾಡುವ 2 ಸ್ಟ್ರೋಕ್ ಆಟೋಗಳಿಗೆ “ವಾಹನ ಅರ್ಹತಾ ಪತ್ರ’ ನೀಡುವುದಿಲ್ಲ ಎಂದು ಸಾರಿಗೆ ಆಯುಕ್ತ ಬಿ. ದಯಾನಂದ್ ಎಚ್ಚರಿಸಿದ್ದಾರೆ. ನಗರದಲ್ಲಿ ಸುಮಾರು 20ರಿಂದ 25 ಸಾವಿರ 2 ಸ್ಟ್ರೋಕ್ ಆಟೋಗಳಿವೆ.
ಈ ಪೈಕಿ 10 ಸಾವಿರ ಆಟೋಗಳನ್ನು ಮಾ. 31ರ ಒಳಗೆ ಗುಜರಿಗೆ ಹಾಕಲಾಗುವುದು. ಉಳಿದವು ನಗರದ ಹೊರಗೆ ಕಾರ್ಯಾಚರಣೆ ಮಾಡಬೇಕು. ಗಡುವು ನಂತರವೂ ಸಂಚರಿಸುವ ಆಟೋಗಳ ವಿರುದ್ಧ ಕಾರ್ಯಾಚರಣೆ ಜತೆಗೆ ವಾಹನ ಅರ್ಹತಾ ಪತ್ರ ನೀಡುವುದಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ನೆಲಮಂಗಲದ ಬಳಿ ಸಾðéಪ್ ಘಟಕ ತೆರೆಯಲಾಗಿದೆ. ರಾಜಾಜಿನಗರದಲ್ಲಿ ಶೀಘ್ರದಲ್ಲೇ ಮತ್ತೂಂದು ಘಟಕ ಆರಂಭಗೊಳ್ಳಲಿದೆ. ನಿತ್ಯ 300 ಆಟೋಗಳನ್ನು ಸಾðéಪ್ ಮಾಡುವ ಸಾಮರ್ಥ್ಯ ಈ ಘಟಕಗಳು ಹೊಂದಿವೆ. ಕಳೆದ ಬಾರಿ 993 ಆಟೋಗಳನ್ನು ಗುಜರಿಗೆ ಸೇರಿಸಲಾಗಿತ್ತು.
ಈ ವರ್ಷ 10 ಸಾವಿರ ಗುರಿ ಹೊಂದಲಾಗಿದೆ. ಇದಕ್ಕೆ ಪ್ರತಿಯಾಗಿ 30 ಸಾವಿರ ರೂ. ಸಬ್ಸಿಡಿ ನೀಡಲಿದ್ದು, ನೇರವಾಗಿ ಫಲಾನುಭವಿ ಖಾತೆಗೆ ಈ ಹಣ ಜಮೆ ಆಗಲಿದೆ ಎಂದು ಮಾಹಿತಿ ನೀಡಿದರು. ಪ್ರಸ್ತುತ 1.25 ಲಕ್ಷ ಆಟೋಗಳಿಗೆ ಪರ್ಮಿಟ್ ನೀಡಲಾಗಿದ್ದು, ಹೊಸದಾಗಿ ಯಾವುದೇ ಪರವಾನಗಿ ನೀಡುತ್ತಿಲ್ಲ. ಇವುಗಳನ್ನು ಶೀಘ್ರದಲ್ಲೇ ಇ-ಪರ್ಮಿಟ್‌ಗೆ ಪರಿವರ್ತಿಸಲಾಗುವುದು.
ಆಧಾರ್ ಲಿಂಕ್ ಇರುವುದರಿಂದ ಪ್ರಕ್ರಿಯೆಯಲ್ಲಿ ತುಸು ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿದರು. ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, ಅಟೋರಿಕ್ಷಾಗಳನ್ನು ರೆಟ್ರೋ ಫಿಟ್ಟಿಂಗ್ ಮೂಲಕ ಇ-ಅಟೋರಿಕ್ಷಾಗಳಿಗೆ ಪರಿವರ್ತನೆಗೊಂಡ ವಾಹನಗಳಿಗೂ ಇದು ಅನ್ವಯಿಸುತ್ತದೆ ಎಂದು ತಿಳಿಸಿದರು. ಹೆಚ್ಚುವರಿ ಸಾರಿಗೆ ಆಯುಕ್ತ (ಆಡಳಿತ) ಹೇಮಂತಕುಮಾರ್ ಉಪಸ್ಥಿತರಿದ್ದರು.
ಖಾಸಗಿ ಬಸ್‌ಗಳಿಗೂ ದರ ನಿಗದಿ: ಖಾಸಗಿ ಬಸ್‌ಗಳಿಗೂ ದರ ನಿಗದಿಪಡಿಸಲು ಉದ್ದೇಶಿಸಿದ್ದು, ಈ ಕುರಿತು ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಹಬ್ಬ-ಹರಿದಿನಗಳು, ಸಾಲು ರಜೆ ವೇಳೆ ಖಾಸಗಿ ಬಸ್‌ಗಳು ಬೇಕಾಬಿಟ್ಟಿ ಪ್ರಯಾಣ ದರ ವಿಧಿಸುತ್ತವೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಉದ್ದೇಶಿಸಿದ್ದು, ದರ ನಿಗದಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ದಯಾನಂದ್ ಹೇಳಿದರು.