ಹುಬ್ಬಳ್ಳಿ: ಬಿಆರ್‌ಟಿಎಸ್ ರಸ್ತೆ ಹಾಗೂ ಕೇಂದ್ರ ರಸ್ತೆ ನಿಧಿಯಡಿ (ಸಿಆರ್‌ಎಫ್) ನಿರ್ಮಿಸಲಾದ ರಸ್ತೆಗಳ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು 10 ದಿನಗಳಲ್ಲಿ ಆರಂಭಿಸಲು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಅಧಿಕಾರಿಗಳಿಗೆ ಗಡುವು ನೀಡಿದರು.
ನಗರದ ಸರ್ಕಿಟ್ ಹೌಸ್‌ನಲ್ಲಿ ರವಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅತಿಕ್ರಮಣ ತೆರವಿಗೆ ಎಲ್ಲ ಜನಪ್ರತಿನಿಧಿಗಳು ಬೆಂಬಲಿಸುತ್ತಾರೆ. ಮುಲಾಜಿಲ್ಲದೆ ಅತಿಕ್ರಮಣ ತೆರವು ಮಾಡಬೇಕು. ಅತಿಕ್ರಮಣದಿಂದಾಗಿ ಬಿಆರ್‌ಟಿಎಸ್ ಹಾಗೂ ಸಿಆರ್ ಎಫ್ ರಸ್ತೆಗಳಲ್ಲಿ ಸಂಚಾರ ದುಸ್ತರವಾಗಿದೆ. ಸರಕಾರಿ ಜಾಗ ಅತಿಕ್ರಮಣ ಮಾಡಿಕೊಂಡವರ ಮೇಲೆ ಪೊಲೀಸ್ ಇಲಾಖೆ ಸಹಕಾರ ಪಡೆದುಕೊಂಡು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
43 ಕೋಟಿ ವೆಚ್ಚದಲ್ಲಿ ಗೋಕುಲ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡುವ ಅವಶ್ಯಕತೆಯಿಲ್ಲ. ವಿನ್ಯಾಸ ಬದಲಾವಣೆ ಮಾಡಿ. ಫುಟ್‌ಪಾತ್‌ಗೆ ಆದ್ಯತೆ ನೀಡಿ. ಸೈಕಲ್ ಪಾತ್‌ಗೆ ವಿರೋಧವಿಲ್ಲ. ಆದರೆ ಯಾವುದೇ ಕಾರಣಕ್ಕೂ ರಸ್ತೆಯ ಅಗಲವನ್ನು ಕಡಿಮೆ ಮಾಡಬಾರದು ಎಂದು ತಿಳಿಸಿದರು.
ಎಲ್ಲರೂ ಸರಕಾರಿ ಆಸ್ಪತ್ರೆಗಳನ್ನೇ ಅವಲಂಬಿಸುವ ಅವಶ್ಯಕತೆಯಿಲ್ಲ. ಆರೋಗ್ಯ ವಿಮಾ ಸೌಲಭ್ಯ ನೀಡುತ್ತಿರುವುದರಿಂದ ಆರೋಗ್ಯ ವಿಮಾ ಸಮಾಜ ಮಾಡುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ. ಆದ್ದರಿಂದ ವಿಮೆ ಹೊಂದಿದವರು ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದರು.
ಉಣಕಲ್ ಕೆರೆ ಅಭಿವೃದ್ಧಿಯ 3ನೇ ಹಂತದ 45 ಕೋಟಿ ರೂ. ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಿ. ಉಣಕಲ್ ಕೆರೆ ದಡದಲ್ಲಿರುವ ದೇವಸ್ಥಾನದ ಸಮೀಪದ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಕೆರೆಯನ್ನು ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಬೇಕು. ಅಲ್ಲಿ ಜಲಸಾಹಸ ಕ್ರೀಡೆಗಳಿಗೆ ಅವಕಾಶ ಕಲ್ಪಿಸಬೇಕಿದೆ ಎಂದರು. ವೈಟ್ ಟಾಪಿಂಗ್ ರಸ್ತೆಗಳಿಂದ ಕೆಲ ಸಮಸ್ಯೆಗಳು ಉದ್ಭವಿಸುತ್ತಿವೆ. ರಸ್ತೆಗಳ ಎತ್ತರ ಹೆಚ್ಚಾಗುತ್ತಿರುವುದರಿಂದ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ. ಮನೆಗೆ ನೀರು ನುಗ್ಗುವುದೆಂಬ ಭೀತಿ ಜನರಲ್ಲಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ದೀಪಾ ಚೋಳನ್, ಸ್ಮಾರ್ಟ್ ಸಿಟಿ ಎಂ.ಡಿ. ಶಕೀಲ ಅಹ್ಮದ್, ಎಸ್.ಎಚ್. ನರೇಗಲ್, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಮೊದಲಾದವರಿದ್ದರು.