Advertisement

ಗದುಗಿನಲ್ಲಿ ನಿರಂತರ ನೀರು ಯೋಜನೆ ಪೂರ್ಣಗೊಳಿಸಲು ಗಡುವು

03:02 PM Apr 28, 2022 | Team Udayavani |

ಗದಗ: ಗದಗ-ಬೆಟಗೇರಿ ನಗರದಲ್ಲಿ ನಿರಂತರ ಕುಡಿಯುವ ನೀರು ಯೋಜನೆಯನ್ನು ಮೇ 15ರ ಒಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರು, ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.

Advertisement

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅವಳಿ ನಗರದಲ್ಲಿ 24*7 ಕುಡಿಯುವ ನೀರಿನ ಕಾಮಗಾರಿ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಒಟ್ಟು 12 ಝೋನ್‌ಗಳ ಪೈಕಿ 7 ಝೋನ್‌ಗಳಲ್ಲಿ ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಅದನ್ನು ಮೇ 15ರ ಒಳಗಾಗಿ ಮುಕ್ತಾಯಗೊಳಿಸಬೇಕು. ಇನ್ನೆರಡು ತಿಂಗಳಲ್ಲಿ 24*7 ಕುಡಿಯುವ ನೀರು ಯೋಜನೆ ಲಾಭ ಜನರಿಗೆ ಒದಗಿಸಬೇಕು ಎಂದು ಆದೇಶಿಸಲಾಗಿದೆ ಎಂದರು.

ಅವಳಿ ನಗರದಲ್ಲಿ ಒಳಚರಂಡಿ ಅವ್ಯವಸ್ಥೆ ಬಗ್ಗೆ ನನ್ನ ಗಮನಕ್ಕೂ ಬಂದಿದ್ದು, ಶೀಘ್ರವೇ ಸರಿಪಡಿಸಲಾಗುವುದು. ಯುಜಿಡಿ ನಿರ್ವಹಣೆ ವೆಚ್ಚವನ್ನು ನಗರಸಭೆಯಿಂದ ಪಾವತಿಸಲಾಗುವುದು. ಗದಗ-ಬೆಟಗೇರಿ ಅವಳಿ ನಗರದ ಜನತೆಗೆ ಕುಡಿಯುವ ನೀರಿನ ಇನ್ನು 15 ಸಾವಿರ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಬೇಕಿದ್ದು, ಮೇ 27 ರೊಳಗಾಗಿ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಬಾವಿಗಳ ಪುನಶ್ಚೇತನ ಹಾಗೂ ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಜಿಲ್ಲೆಯ ರೋಣ, ಗಜೇಂದ್ರಗಡ, ನರೇಗಲ್‌ ಮೂರು ಪಟ್ಟಣಗಳಿಗೆ ಕುಡಿಯುವ ನೀರು ಕಲ್ಪಿಸುವ ಕಾಮಗಾರಿ ಮಂದಗತಿಯಲ್ಲಿದ್ದು, ತೀವ್ರಗತಿಗೊಳಿಸುವ ಮೂಲಕ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.

ನಗರದ ವಕಾರ ಸಾಲು ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಅವಳಿ ನಗರದ ವಕಾರ ಸಾಲು ಪ್ರಕರಣ ನ್ಯಾಯಾಲಯದಲ್ಲಿ ಇದೆ. ಕೋರ್ಟ್‌ ತೀರ್ಪಿನ ಬಳಿಕ ತೀರ್ಮಾನಿಸಲಾಗುವುದು. ಗದಗ ನಗರಸಭೆಯ ಸಮಗ್ರ ಅಭಿವೃದ್ಧಿಗೆ 40 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಇದೇ ವೇಳೆ ತಿಳಿಸಿದರು.

Advertisement

ಶಾಸಕ ಕಳಕಪ್ಪ ಬಂಡಿ, ಸಂಸದ ಶಿವಕುಮಾರ ಉದಾಸಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್‌ ಬನ್ಸಾಲಿ, ಕೆಯುಐಡಿಎಫ್ಸಿಎಂಡಿ ಎಂ.ದೀಪಾ ಚೋಳನ್‌, ಕೆಯುಡಬ್ಲ್ಯುಎಸ್‌ ಮತ್ತು ಡಿಬಿ ಎಂಡಿ ಕೆ.ಪಿ.ಮೋಹನ್‌ ರಾಜ್‌, ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಹಾಜರಿದ್ದರು.

ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಬೇಕೆಂಬುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಂಕಲ್ಪವಾಗಿದೆ. ಹೀಗಾಗಿ ಅಧಿಕಾರಗಳಿಗೆ ಗಡುವು ನೀಡಲಾಗಿದ್ದು, ವಿಳಂಬವಾದರೆ ಸಂಬಂಧಿತರ ವಿರುದ್ಧ ಕ್ರಮ ಜರುಗಿಸಲಾಗುವುದು. –ಬೈರತಿ ಬಸವರಾಜ, ನಗರಾಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next