ಹುಬ್ಬಳ್ಳಿ: ಹೆಚ್ಚಿನ ಪ್ರಮಾಣದಲ್ಲಿ ಆಹಾರ ತ್ಯಾಜ್ಯ ಉತ್ಪತ್ತಿ ಮಾಡುವ ಹೋಟೆಲ್‌ಗಳು ಜೈವಿಕ ಅನಿಲ (ಬಯೋಗ್ಯಾಸ್) ಉತ್ಪಾದನಾ ಘಟಕ ಹೊಂದಬೇಕು ಎನ್ನುವ ಮಹಾನಗರ ಪಾಲಿಕೆ ಸೂಚನೆಗೆ ಉದ್ಯಮಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಡಿ. 20ರ ಡೆಡ್‌ಲೈನ್ ನೀಡಿದೆ. ಘಟಕ ಅಳವಡಿಸಿಕೊಳ್ಳದಿದ್ದರೆ ನೋಟಿಸ್ ಹಾಗೂ ಇತರೆ ಕ್ರಮಕ್ಕೆ ಚಿಂತನೆ ನಡೆಸಿದೆ.
ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ 100 ಕೆಜಿಯಷ್ಟು ಆಹಾರ ತಾಜ್ಯ ಉತ್ಪತ್ತಿಯಾಗುವ ಕಡೆಗಳಲ್ಲಿ ಜೈವಿಕ ಅನಿಲ ಘಟಕ ಹೊಂದಿರಬೇಕು. ನಿಮ್ಮ ತ್ಯಾಜ್ಯವನ್ನು ನೀವೇ ನಿರ್ವಹಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನ ನಿರ್ದೇಶನವಿದೆ. ಈ ನಿಯಮವನ್ನು ಮಹಾನಗರದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕಳೆದ ಒಂದು ವರ್ಷದ ಹಿಂದೆ ಚಾಲನೆ ನೀಡಿ ಚಿಟಗುಪ್ಪಿ ಪಾರ್ಕ್ ನಲ್ಲಿ ಒಂದು ಪೋಟೇಬಲ್ ಘಟಕ ಇಟ್ಟು ಜಾಗೃತಿ ಮೂಡಿಸುವ ಕೆಲಸ ನಡೆದಿತ್ತು. ಜೈವಿಕ ಅನಿಲ ಘಟಕಗಳನ್ನು ತಯಾರಿಸುವ ವಿವಿಧ ಅತ್ಯುತ್ತಮ ಕಂಪೆನಿಗಳನ್ನು ಕೂಡ ಪರಿಚಯಿಸಲಾಗಿದೆ.
ಮಹಾನಗರ ವ್ಯಾಪ್ತಿಯಲ್ಲಿರುವ ಸುಮಾರು 520 ಹೋಟೆಲ್‌ಗಳಿಂದ ನಿತ್ಯ 50-55 ಟನ್ ಆಹಾರ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ 100 ಕೆಜಿ ತ್ಯಾಜ್ಯ ಉತ್ಪಾದನೆಯಾಗುವ 13 ಹೋಟೆಲ್ ಗಳಿಗೆ ಘಟಕ ಹೊಂದುವುದು ಕಡ್ಡಾಯ ಎಂದು ಸೂಚನೆ ನೀಡಿದೆ. ಈಗಾಗಲೇ ಲಿಖೀತವಾಗಿಯೂ ತಿಳಿಸಲಾಗಿದೆ. ಇನ್ನೂ ಸುಮಾರು 25 ಹೋಟೆಲ್‌ಗಲ್ಲಿ 50-100 ಕೆಜಿಯವರೆಗೆ ತ್ಯಾಜ್ಯ ಉಂಟಾಗುತ್ತಿದೆ. ಈ ಹೋಟೆಲ್‌ಗಳಿಗೂ ಘಟಕ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಆದರೂ ಹೋಟೆಲ್ ಮಾಲೀಕರು ಘಟಕ ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ.
ಡಿ.20ರ ನಂತರ ನೊಟೀಸ್ ಜಾರಿ: ಆಹಾರ ತ್ಯಾಜ್ಯ ಉತ್ಪತ್ತಿ ಮಾಡುವ ಹೋಟೆಲ್, ರೆಸಾರ್ಟ್, ಕಲ್ಯಾಣ ಮಂಟಪ, ಹಾಸ್ಟೆಲ್‌ಗಳ ಮಾಲೀಕರಿಗೆ ಒಂದು ವರ್ಷ ಕಾಲಾವಕಾಶ ನೀಡಲಾಗಿತ್ತು. ಆಹಾರ ತ್ಯಾಜ್ಯ ನಿರ್ವಹಣೆ ಕುರಿತು ಮೂರ್‍ನಾಲ್ಕು ಸಭೆಗಳಲ್ಲಿ ವಿಸ್ತೃತವಾಗಿ ಮಾಹಿತಿ ನೀಡಲಾಗಿದೆ. ಹೀಗಾಗಿ ಡಿ. 20 ರೊಳಗೆ ಅನಿಲ ಘಟಕ ಹೊಂದಬೇಕು. ಇಲ್ಲದಿದ್ದರೆ ಪಾಲಿಕೆಯಿಂದ ನೋಟಿಸ್ ನೀಡಿ, ಮೂಲಸೌಲಭ್ಯಕ್ಕೂ ಕತ್ತರಿ ಹಾಕುವ ಸಾಧ್ಯತೆಗಳಿವೆ.
ಮಾಲೀಕರ ಹಿಂದೇಟು ಯಾಕೆ?: ಕಳೆದ ಒಂದು ವರ್ಷದಿಂದ ಪಾಲಿಕೆ ಕಸರತ್ತಿಗೆ ಎರಡು ಹೋಟೆಲ್‌ನ ಮಾಲೀಕರು ಘಟಕ ಹೊಂದುವುದಕ್ಕೆ ಆಸಕ್ತಿ ತೋರಿದ್ದಾರೆ. ಹೆಚ್ಚಿನ ಮಾಲೀಕರು ಜೈವಿಕ ಘಟಕಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸ್ಥಳದ ಕೊರತೆ, ಸಮರ್ಪಕ ಮಾಹಿತಿ ಇಲ್ಲದಿರುವುದು, ಸ್ಲರಿಯನ್ನು ಯಾರು ಖರೀದಿ ಮಾಡುತ್ತಾರೆ, ಘಟಕದ ನಿರ್ವಹಣೆ ಸೇರಿದಂತೆ ಪೂರಕ ಮಾಹಿತಿ ಪಾಲಿಕೆಯಿಂದ ಒದಗಿಸಿಲ್ಲ. ವರ್ಷದ ಹಿಂದೆ ಜೈವಿಕ ಅನಿಲ ಘಟಕ ಹೊಂದಬೇಕು ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. ಈಗ ಯೋಜನೆ ಅನುಷ್ಠಾನಗೊಳಿಸಿ ಎಂದು ಹೇಳಿದರೆ ಹೇಗೆ ಸಾಧ್ಯ ಎನ್ನುವುದು ಹೋಟೆಲ್ ಮಾಲೀಕರ ದೂರಾಗಿದೆ.
-ಹೇಮರಡ್ಡಿ ಸೈದಾಪುರ