ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ 17ನೇ ವಾರ್ಡ್‌ನಲ್ಲಿ ಮಂಗಳವಾರ ಕೋವಿಡ್ -19 ಸೋಂಕಿಗೆ ಬಲಿಯಾದ ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಮಂದಿ ಪೈಕಿ 3 ಮಂದಿಗೆ ಶುಕ್ರವಾರ ಸೋಂಕು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿಢೀರನೆ 16ಕ್ಕೆ ಏರಿರುವುದು ಒಂದೆಡೆಯಾದರೆ, ಸೋಂಕಿಗೆ ಬಲಿಯಾದ ವೃದ್ಧ ಸಾವಿಗೂ ಮೊದಲು ತಮ್ಮ ವಾರ್ಡ್‌ನ 171 ಮನೆಗಳಿಗೆ ದವಸ, ಧಾನ್ಯಗಳನ್ನು ಹಂಚಿದ್ದ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.
ಕಳೆದ ಮಂಗಳವಾರ ತೀವ್ರ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ವೃದ್ಧನಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದ ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಇದರಿಂದ ಚಿಕ್ಕಬಳ್ಳಾಪುರ ನಗರದ 17ನೇ ವಾರ್ಡ್ ಜೊತೆಗೆ 11, 12, 10 ಸೇರಿ ನಾಲ್ಕು ವಾರ್ಡ್‌ಗಳನ್ನು ಮಂಗಳವಾರದಿಂದಲೇಸಂಪೂರ್ಣ ಸೀಲ್‌ಡೌನ್ ಮಾಡಲಾಗಿತ್ತು.
ವೃದ್ಧನ ಮಗನಿಗೂ ಸೋಂಕು: ಸೋಂಕಿಗೆ ಬಲಿಯಾದ ವೃದ್ಧನ 26 ವರ್ಷದ ಮಗನಿಗೂ ಕೋವಿಡ್ -19 ಪಾಸಿಟಿವ್ ಬಂದಿದೆ. ಆತ ಬೆಂಗಳೂರಿನ ಅರೇಬಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಆದರೆ ಆತನಿಗೆ ತನ್ನ ತಂದೆಯಿಂದ ಸೋಂಕು ಬಂತಾ ಇಲ್ಲ ಬೆಂಗಳೂರಿನಲ್ಲಿಯೇ ಸೋಂಕು ತಗುಲಿದೆಯಾ ಎನ್ನುವ ಬಗ್ಗೆ ಆರೋಗ್ಯ ಇಲಾಖೆ ಪರಿಶೀಲಿಸುತ್ತಿದೆ.ವೃದ್ಧನ ಮನೆ ಪಕ್ಕದಲ್ಲಿ ಅವರಿಗೆ ಆತ್ಮೀಯ ರಾಗಿದ್ದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
11 ಮಂದಿಯಲ್ಲಿ ನೆಗೆಟಿವ್: ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಜನರನ್ನು ಹೋಂ ಕ್ವಾರಂಟೆನ್‌ನಲ್ಲಿರಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಪೈಕಿ 11 ಮಂದಿ ವೈದ್ಯಕೀಯ ವರದಿ ನೆಗೆಟಿವ್ ಬಂದಿದ್ದು, ಪಾಸಿಟಿವ್ ಬಂದಿರುವ ಮೂವರನ್ನು ನಗರದ ಹಳೆ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಐಸೋಲೇಷನ್‌ನಲ್ಲಿ ಇಡಲಾಗಿದೆ ಎಂದರು. ಉಳಿದವರನ್ನು ವಾರ್ಡ್‌ನಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಜೊತೆಗೆ ಸೋಂಕು ಕಾಣಿಸಿಕೊಂಡಿರುವ ಮೂರು ಮಂದಿಯ ದ್ವಿತೀಯ ಸಂಪರ್ಕದಲ್ಲಿ ಬರೋಬ್ಬರಿ 42 ಜನರಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ.
ಚಿಕ್ಕಬಳ್ಳಾಪುರದ 17 ನೇ ವಾರ್ಡ್‌ನಲ್ಲಿ ಸಾವನ್ನಪ್ಪಿದ್ದ ವ್ಯಕ್ತಿ ತಮ್ಮ ವಾರ್ಡ್‌ನಲಿರುವ ಜನರಿಗೆ ಹಾಗೂ ನಿರಾಶ್ರಿತರಿಗೆ ದವಸ, ಧಾನ್ಯಗಳನ್ನು ಅಲ್ಲಿನ 171 ಮನೆಗಳಿಗೆ ನೀಡಿದ್ದಾರೆ ಎಂಬ ಮಾಹಿತಿ ದೊರೆಕಿದೆ. ಅವರಿಗೂ ಸಹ ಹೋಂ ಕ್ವಾರಂಟೈನ್ ಮಾಡಲಾಗಿದೆ. ಅವರ ಮನೆಗಳ ಮುಂದೆ ಭಿತ್ತಿ ಚಿತ್ರಗಳನ್ನು ಅಂಟಿಸಿ ಅವರಿಗೆ ಸ್ಟಾಂಪಿಂಗ್ ಸಹ ಮಾಡಲಾಗಿದೆ.
● ಆರ್.ಲತಾ, ಜಿಲ್ಲಾಧಿಕಾರಿ (ಸುದ್ದಿಗೋಷ್ಠಿಯಲೊಲಿ ಹೇಳಿದ್ದು)
ಕಾಗತಿ ನಾಗರಾಜಪ್ಪ