ವಿಜಯಪುರ: ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಭೀಮಾ ತೀರದ ಚಡಚಣ ಧರ್ಮರಾಜ ಎನ್‌ಕೌಂಟರ್ ನಕಲಿ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಮತ್ತೂಂದೆಡೆ ಪ್ರಕರಣದಲ್ಲಿ ನಕಲಿ ಎನ್‌ಕೌಂಟರ್ ಕೃತ್ಯಕ್ಕೆ ಪೊಲೀಸರೇ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಮಾಡಿದ್ದು, ಕಂಟ್ರಿ ಪಿಸ್ತೂಲ್ ಪೂರೈಕೆ ಮಾಡಿರುವ ಪ್ರಮುಖ ಆರೋಪಿಯನ್ನು ಸಿಐಡಿ ತನಿಖಾ ತಂಡ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಚಣಚಣ ಸಹೋದರಾದ ಧರ್ಮರಾಜ ಹಾಗೂ ಗಂಗಾಧರ ಇಬ್ಬರ ಹತ್ಯೆಯಲ್ಲೂ ಪೊಲೀಸರು ಹಾಗೂ ರೌಡಿ ಶೀಟರ್‌ಗಳ ನೇರ ಕೈವಾಡ ಇದೆ. ಈಗಾಗಲೇ ಗಂಗಾಧರ ಹತ್ಯೆ ಪ್ರಕರಣದಲ್ಲಿ ಪೊಲೀಸರ ಕೈವಾಡದ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಧರ್ಮರಾಜ ಎನ್ ಕೌಂಟರ್ ಕೂಡ ನಕಲಿ ಎಂದು ಮೃತನ ತಾಯಿ ವಿಮಲಾಬಾಯಿ ದೂರಿನ ಆಧಾರದಲ್ಲಿ ಈ ಪ್ರಕರಣವನ್ನೂ ಸಿಐಡಿ ತನಿಖೆಗೆ ವಹಿಸಲಾಗಿದೆ.
ಚಡಚಣ ಕುಟುಂಬದ ತಲೆಮಾರುಗಳ ವೈರಿಯಾದ ರೌಡಿಶೀಟರ್ ಮಹಾದೇವ ಭೈರಗೊಂಡ ಜೊತೆ ಚಡಚಣ ಎಸ್‌ಐ ಗೋಪಾಲ ಹಳ್ಳೂರ ಹಾಗೂ ಇತರ ಪೊಲೀಸರು ಕೈ ಜೋಡಿಸಿ ಚಡಚಣ ಸಹೋದರರ ಹತ್ಯೆ ಮಾಡಿದ ಆರೋಪ ಮಾಡಲಾಗಿದೆ. ಹೀಗಾಗಿಯೇ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಕೂಡ ಸಿಐಡಿ ತನಿಖೆಗೆ ವಹಿಸಿದೆ. ವಿಚಾರಣೆ ವೇಳೆ ಆರೋಪಿಗಳು ನಕಲಿ ಎನ್ ಕೌಂಟರ್‌ಗೆ ಮುನ್ನ ಅಕ್ರಮ ಶಸ್ತ್ರಾಸ್ತ್ರಗಳನ್ನು ಪೊಲೀಸರೇ ಧರ್ಮರಾಜ ಮನೆಯಲ್ಲಿ ಸಂಗ್ರಹಿಸಿದ್ದರು ಎಂಬುದನ್ನು ಬಾಯಿ ಬಿಟ್ಟಿದ್ದಾರೆ. ಎಸ್‌ಐ ಗೋಪಾಲ ಹಳ್ಳೂರ ಕಂಟ್ರಿ ಪಿಸ್ತೂಲ್ ಪೂರೈಕೆದಾರನ ಜೊತೆ ಅಪವಿತ್ರ ಮೈತ್ರಿ ಇತ್ತು.
ಆತನ ಮೂಲಕ ಅಕ್ರಮ ಶಸ್ತ್ರಾಸ್ತ್ರ ಪಡೆದು, ಧರ್ಮರಾಜ ತೋಟದ ಮನೆಯಲ್ಲಿ ಸಂಗ್ರಹಿಸಿದ್ದ. ನಂತರ ದಾಳಿ ನೆಪದಲ್ಲಿ ಧರ್ಮರಾಜ ಮೇಲೆ ಎನ್‌ಕೌಂಟರ್ ನಡೆಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಾಹಿತಿ ಆಧರಿಸಿ ಎನ್‌ಕೌಂಟರ್ ಪ್ರಕರಣದಲ್ಲಿ ಎಸ್‌ಐ ಗೋಪಾಲ ಹಳ್ಳೂರಗೆ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಪೂರೈಕೆ ಮಾಡಿರುವ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿದ್ದಾಗಿ ತಿಳಿದು ಬಂದಿದೆ.