Advertisement

ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ; ಕಣ್ಣೀರ ವಿದಾಯ

09:35 AM Sep 11, 2019 | sudhir |

ಕಡಬ: ಮಂಗಳೂರಿನ ಪಡೀಲ್‌ನಲ್ಲಿ ರವಿವಾರ ರಾತ್ರಿ ಪಕ್ಕದ ಮನೆಯ ಆವರಣ ಗೋಡೆ ಕುಸಿದು ಮೃತಪಟ್ಟ ಮೂಲತಃ ಕಡಬ ತಾಲೂಕು ನೂಜಿಬಾಳ್ತಿಲದ ಇಬ್ಬರು ಮಕ್ಕಳ ಅಂತ್ಯಸಂಸ್ಕಾರ ಸ್ವಗೃಹದಲ್ಲಿ ಸೋಮವಾರ ನಡೆಯಿತು.

Advertisement

ನೂಜಿಬಾಳ್ತಿಲ ಬಾಳೆಮಾರಿನ ರಾಮಣ್ಣ ಗೌಡ-ರಜನಿ ದಂಪತಿ ಮಂಗಳೂರಿನ ಪಡೀಲ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅವರ ಮಕ್ಕಳಾದ ವರ್ಷಿಣಿ (9) ಹಾಗೂ ವೇದಾಂತ್‌ (7) 4 ಮತ್ತು 2ನೇ ತರಗತಿ ಕಲಿಯುತ್ತಿದ್ದರು. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭ ಪಕ್ಕದ ಮನೆಯ ಆವರಣ ಗೋಡೆ ಕುಸಿದು ಇಬ್ಬರೂ ಅಸುನೀಗಿದ್ದರು. ಮರಣೋತ್ತರ ಪರೀಕ್ಷೆಯನ್ನು ನಡೆಸಿ ಬಳಿಕ, ಮೃತ ಮಕ್ಕಳು ಕಲಿಯುತ್ತಿದ್ದ ವಿದ್ಯಾಸಂಸ್ಥೆಯಲ್ಲಿ ದರ್ಶನಕ್ಕೆ ಇಡಲಾಯಿತು. ಬಳಿಕ ಕಡಬ ತಾಲೂಕಿನ ನೂಜಿಬಾಳ್ತಿಲದ ಮನೆಗೆ ತಂದು ಅಂತ್ಯ ವಿಧಿ ನೆರವೇರಿಸಲಾಯಿತು.

ಶಾಸಕರ ಭೇಟಿ
ಮೃತದೇಹಗಳನ್ನು ತಂದಾಗ ಬಾಳೆಮಾರು ಮನೆಯ ಪರಿಸರದಲ್ಲಿ ಸಾರ್ವಜನಿಕರೂ ಸೇರಿದ್ದರು. ಶಾಸಕ ಎಸ್‌. ಅಂಗಾರ ಅವರು ಮಕ್ಕಳ ಅಂತಿಮ
ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ, ಜಿಲ್ಲಾ ಪಂಚಾಯತ್‌ ಸದಸ್ಯ ಪಿ.ಪಿ. ವರ್ಗೀಸ್‌, ತಾಲೂಕು ಪಂಚಾಯತ್‌ ಸದಸ್ಯ ಗಣೇಶ್‌ ಕೈಕುರೆ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ತಾ.ಪಂ. ಮಾಜಿ ಅಧ್ಯಕ್ಷೆ ಪುಲಸಾö ರೈ, ಪಿಡಿಒ ಆನಂದ ಎ. ಸಹಿತ ಹಲವು ಗಣ್ಯರು, ಸಾರ್ವಜನಿಕರು ಮೃತರ ಮನೆಗೆ ಭೇಟಿ ನೀಡಿ, ಸಂತಾಪ ಸೂಚಿಸಿದರು.

ರವಿವಾರ ರಾತ್ರಿ ನಡೆದಿದ್ದೇನು?
ರಾಮಣ್ಣ ಕುಟುಂಬ ಹಲವು ವರ್ಷಗಳಿಂದ ಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಸೋಮವಾರ ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು ಕೋಣೆಯಲ್ಲಿ ಓದುತ್ತಿದ್ದರು. ನಿರಂತರ ಮಳೆಯ ಕಾರಣ ರಾತ್ರಿ 8 ಗಂಟೆ ವೇಳೆಗೆ ಮನೆಯ ಮೇಲೆ ಸುಮಾರು 20 ಅಡಿ ಎತ್ತರದಲ್ಲಿರುವ ಇನ್ನೊಂದು ಮನೆಯ ಆವರಣ ಗೋಡೆ ಕುಸಿದು ಬಿದ್ದಿತು. ಇದರಿಂದಾಗಿ ಮನೆಯ ಗೋಡೆ ಮಕ್ಕಳ ಮೇಲೆ ಬಿದ್ದು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಈ ವೇಳೆ ಮಕ್ಕಳ ಹೆತ್ತವರು ಇನ್ನೊಂದು ಕೋಣೆಯಲ್ಲಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದರು.

Advertisement

ಶಾಲೆಯಲ್ಲಿ ಅಂತಿಮ ನಮನ
ಸೋಮವಾರ ಬೆಳಗ್ಗೆ ವೆನಾÉಕ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಕಪಿತಾನಿಯೋ ಶಾಲೆಗೆ ತಂದು ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಶಾಲೆಗೆ ರಜೆ ಸಾರಲಾಯಿತು.

11 ಲ.ರೂ. ಪರಿಹಾರ
ಮಂಗಳೂರು: ಮೃತ ಮಕ್ಕಳ ಕುಟುಂಬಕ್ಕೆ ಸರಕಾರದಿಂದ ಪರಿಹಾರವಾಗಿ 10 ಲಕ್ಷ ರೂ. ಹಾಗೂ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ವೈಯಕ್ತಿಕವಾಗಿ ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ಮೂಲಕ ನೀಡಿದ 1 ಲಕ್ಷ ರೂ. ಸೇರಿದಂತೆ 11 ಲಕ್ಷ ರೂ.ಗಳ ಚೆಕ್‌ ಅನ್ನು ಹಸ್ತಾಂತರ ಮಾಡಲಾಯಿತು.

ರಾಮಣ್ಣ ಗೌಡ-ರಜನಿ ದಂಪತಿಗೆ ಹೊಸ ಮನೆ ಕಟ್ಟಲು ಸರಕಾರದ ವತಿಯಿಂದ ಜಾಗ ಹಾಗೂ ಸಹಾಯಧನವನ್ನು ಸರಕಾರದ ವತಿಯಿಂದ ನೀಡಲಾಗುವುದು ಎಂದು ಶಾಸಕ ಕಾಮತ್‌ ತಿಳಿಸಿದ್ದಾರೆ.

ಕೊಡಕ್ಕಲ್‌ ಶಿವನಗರದ ಬಾಡಿಗೆ ಮನೆಯು ಬಹುತೇಕ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಮನೆಗೆ ತರಲು ಸಾಧ್ಯವಾಗಿಲ್ಲ. ಪಕ್ಕದ ಮನೆಯಲ್ಲಿ ಸ್ಥಳೀಯರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಆವರಣ ಗೋಡೆ ಕುಸಿದ ಕಾರಣದಿಂದ ಮನೆ ಮಾಲಕರು ಹಾಗೂ ಪಕ್ಕದಲ್ಲಿರುವ ಇನ್ನೊಂದು ಮನೆಯವರನ್ನು ಸ್ಥಳಾಂತರಿಸಲಾಗಿದೆ.

ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪ್ರಮುಖರಾದ ಸುಧೀರ್‌ ಶೆಟ್ಟಿ ಕಣ್ಣೂರು, ವಸಂತ ಜೆ. ಪೂಜಾರಿ, ಮಂಗಳೂರು ತಹಶೀಲ್ದಾರ್‌ ಗುರುಪ್ರಸಾದ್‌ ಕಂದಾಯ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next