Advertisement

“ಡಿ ಗ್ರೂಪ್‌ ನೌಕರರ ವಜಾ ಆದೇಶ ಅಪ್ರಬುದ್ಧ’

10:16 PM Apr 08, 2019 | Team Udayavani |

ಪುತ್ತೂರು: ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಸರಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರನ್ನು ಹುದ್ದೆಯಿಂದ ತೆಗೆಯುವಂತೆ ಆರೋಗ್ಯ ಇಲಾಖೆ ಮಾಡಿರುವ ಆದೇಶವನ್ನು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಖಂಡಿಸಿದ್ದು, ಈ ಆದೇಶ ಅಪ್ರಬುದ್ಧ ಹಾಗೂ ವಿವೇಚನಾಶೂನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ರಾಜೇಶ್‌ ಬನ್ನೂರು, ಸರಕಾರಿ ಆಸ್ಪತ್ರೆಗಳ ವ್ಯವಸ್ಥಿತ ಕಾರ್ಯ ನಿರ್ವಹಣೆಗೆ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಸ್ವತ್ಛತೆ, ದಾಖಲಾತಿ ಇತ್ಯಾದಿಗಳ ನಿರ್ವಹಣೆಗೆ ಡಿ ಗ್ರೂಪ್‌ ನೌಕರರ ಅಗತ್ಯವಿದೆ. ಸರಕಾರಿ ಆಸ್ಪತ್ರೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ಗ್ರೂಪ್‌ ಡಿ ನೌಕರರ ನೇಮಕಾತಿ ಆಗದೇ ಇರುವ ಕುರಿತು ರಾಜ್ಯಾದ್ಯಂತ ದೂರುಗಳಿದ್ದವು. ಈ ಮಧ್ಯೆ ಇರುವ ಗುತ್ತಿಗೆ ನೌಕರರನ್ನೂ ಹುದ್ದೆಯಿಂದ ತೆಗೆಯುವ ಆದೇಶ ಸರಿಯಲ್ಲ ಎಂದು ಹೇಳಿದರು.

ಜನವಿರೋಧಿ ಧೋರಣೆ
ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಹಾಲಿ ವ್ಯವಸ್ಥೆಯನ್ನು ರದ್ದುಗೊಳಿಸುವುದು ರಾಜ್ಯ ಸರಕಾರದ ಜನವಿರೋಧಿ ಧೋರಣೆಗೆ ಸ್ಪಷ್ಟ ಸಾಕ್ಷಿ. ಇದರಿಂದ ಆರೋಗ್ಯ ವ್ಯವಸ್ಥೆ ಹಳ್ಳ ಹಿಡಿಯಲಿದೆ. ಡಿಸೆಂಬರ್‌ ತಿಂಗಳಲ್ಲಿ ಈ ಆದೇಶವನ್ನು ಹೊರಡಿಸಿರುವ ಸರಕಾರ ಮಾ. 22ರಿಂದ ಜಾರಿಗೊಳಿಸುವಂತೆ ಆದೇಶಿಸಿದೆ. ಎ. 5ಕ್ಕೆ ಆದೇಶದ ಪ್ರತಿ ತಲುಪಿದೆ. ಆಯವ್ಯಯ ನಿರ್ವಹಣೆಯಲ್ಲಿ ತೊಂದರೆ ಇರುವ ಕಾರಣಕ್ಕೆ ಸರಕಾರ ಈ ನಿರ್ಣಯ ಕೈಗೊಂಡಿದ್ದಲ್ಲಿ ಅದಕ್ಕೆ ಕೌಶಲದ ಕೊರತೆಯೇ ಕಾರಣ. ಸಾಮಾನ್ಯ ಜನರನ್ನು ಬಲಿಪಶು ಮಾಡುವುದು ತಪ್ಪು ಎನ್ನುವುದು ರಕ್ಷಾ ಸಮಿತಿ ಹಾಗೂ ಸಾರ್ವಜನಿಕರ ಅಭಿಪ್ರಾಯ ಎಂದು ಹೇಳಿದರು.

ನ್ಯಾಯಾಲಯದಲ್ಲಿ ದಾವೆ
ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರರು ಬೇಡವೆಂದಾದರೆ ಅಧಿಕಾರಿಗಳು ಈ ಕೆಲಸ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದ ರಾಜೇಶ್‌ ಬನ್ನೂರು, ಇದರ ವಿರುದ್ಧ ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟ ಹಮ್ಮಿಕೊಳ್ಳಲಿದ್ದೇವೆ. ಇಲಾಖೆಯ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುವ ಕುರಿತೂ ಚರ್ಚಿಸುತ್ತಿದ್ದೇವೆ ಎಂದು ಹೇಳಿದರು. ಸರಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ| ರಾಘವೇಂದ್ರ ಪ್ರಸಾದ್‌ ಬಂಗಾರಡ್ಕ, ವಿದ್ಯಾಗೌರಿ, ರಫೀಕ್‌ ದರ್ಬೆ ಪತ್ರಿಕಾಗೋಷ್ಠಿಯಲ್ಲಿದ್ದರು.

ವ್ಯವಸ್ಥೆ ಹಾಳು
ಪುತ್ತೂರು ಉತ್ತಮ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ದಿನಕ್ಕೆ ಸರಕಾರಿ 400 ರೋಗಿಗಳು ಬರುತ್ತಾರೆ. ತಿಂಗಳಿಗೆ 80 ಹೆರಿಗೆಗಳು ಇಲ್ಲಿ ಆಗುತ್ತಿವೆ. ಆದರೆ ಸರಕಾರದ ಆದೇಶಗಳು ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ. ಇಲ್ಲಿ 17 ಮಂದಿ ಗುತ್ತಿಗೆ ಆಧಾರದ ಡಿ ಗ್ರೂಪ್‌ ನೌಕರರು ಕೆಲಸ ನಿರ್ವಹಿಸುತ್ತಿದ್ದರು. ಕನಿಷ್ಠ ಇಷ್ಟು ನೌಕರರ ಅಗತ್ಯವಿದೆ. ಆದರೆ ಸರಕಾರದ ಆದೇಶದ ಬಳಿಕ ಆರೋಗ್ಯ ರಕ್ಷಾ ಸಮಿತಿಯ ಹಣದಿಂದ ವೇತನ ನೀಡಲು 6 ಮಂದಿಯನ್ನು ಉಳಿಸಿಕೊಂಡಿದ್ದೇವೆ.
ವಿದ್ಯಾ ಗೌರಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯೆ

Advertisement
Advertisement

Udayavani is now on Telegram. Click here to join our channel and stay updated with the latest news.

Next