ಹೊಳೆಆಲೂರ: ರಾಜಕೀಯ ಪಕ್ಷಗಳು ರೈತ ಸಮುದಾಯದ ಹಿತ ಕಾಯುವಂತಹ ನೀರಾವರಿ ಯೋಜನೆ, ನಿರ್ಗತಿಕರಿಗೆ ಆಶ್ರಯ, ಮಕ್ಕಳಿಗೆ ಉತ್ತಮ ಶಿಕ್ಷಣ, ಮಹಿಳಾ ಸಬಲೀಕರಣದಂತಹ ಜನಪರ ಯೋಜನೆ ಅನುಷ್ಠಾನಗೊಳಿಸಬೇಕು. ಆದರೆ ಅದರ ಬದಲು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಯೋಜನೆಗೆ ಆದ್ಯತೆ ನೀಡುತ್ತಿರುವುದು ವಿಷಾದನೀಯ ಸಂಗತಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ ಹೇಳಿದರು.
ಮದ್ಯವರ್ಜನಾ ಸಮಿತಿ ಹೊಳೆಆಲೂರ, ಮದ್ಯಪಾನ ಸಂಯಮ ಮಂಡಳಿ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಸಂಸ್ಥೆ ಸಹಯೋಗದಲ್ಲಿ ಶಿವ ಪಾರ್ವತಿ ಮಾಂಗಲ್ಯ ಮಂದಿರದಲ್ಲಿ ನಡೆದ ಮದ್ಯವರ್ಜನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನಸಂಖ್ಯಾ ಆಧಾರದ ಮೇಲೆ ರಾಜ್ಯದಲ್ಲಿ ಸಾವಿರ ಸರಾಯಿ ಅಂಗಡಿಗಳಿಗೆ ಪರವಾನಗಿ ನೀಡುವ ಚಿಂತನೆ ಸರಕಾರದ ಮಟ್ಟದಲ್ಲಿ ನಡೆಯುತ್ತಿದ್ದು, ಅಂತಹ ಕೆಲಸಕ್ಕೆ ಸರಕಾರ ಕೈ ಹಾಕಿದರೆ ಧರ್ಮಸ್ಥಳ ಸಂಸ್ಥೆ ಸಹಯೋಗದ ಲಕ್ಷಾಂತರ ಕಾರ್ಯಕರ್ತರು ಬೀದಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ವೀರೇಂದ್ರ ಹೆಗ್ಗಡೆ ಅವರು ಸಮಾಜದ ದುರ್ಬಲ ವರ್ಗಗಳ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕಾಗಿ ಅನ್ನದಾನ, ವಿದ್ಯಾದಾನ, ರೋಗ್ಯದಾನ, ಅಭಯ ದಾನದಂತಹ ಯೋಜನೆ ಅನುಷ್ಠಾನಗೊಳಿಸುತ್ತಿರುವ ಮಾದರಿಯನ್ನು ಸರಕಾರ ಅರಿತುಕೊಳ್ಳಬೇಕು ಎಂದು ಹೇಳಿದರು.
ಮದ್ಯಪಾನ ಮುಕ್ತ 91 ಜೋಡಿಗಳಿಗೆ ಗ್ರಾಮದ ಹುರುಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮರು ಮದುವೆ ಮಾಡಲಾಯಿತು. ಅಸೂಟಿಯ ರೇವಣಸಿದ್ದೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಜನ ಜಾಗೃತಿ ವೇದಿಕೆ ಎಚ್.ಬಿ. ಅಸೂಟಿ, ಶಿಬಿರದ ಗೌರವಾಧ್ಯಕ್ಷ ಎ.ಎನ್. ಬಡಿಗೇರ, ಅಧ್ಯಕ್ಷ ಡಾ| ಪ್ರಕಾಶ ಜಂಬಲದಿನ್ನಿ, ಶಿಬಿರಾಧಿಕರಿ ಗಣೇಶ ಆಚಾರ್ಯ, ಯೋಜನಾಧಿಕರಿ ವಸಂತಿ ಅಮಿನ್, ತಾಪಂ ಸದಸ್ಯ ಜಗದೀಶ ಬ್ಯಾಡಗಿ, ಬಸವರಾಜ ಬೀರನೂರ, ಸಂಸ್ಥೆ ಮೇಲ್ವಿಚಾರಕ ಮಲ್ಲಿಕಾರ್ಜುನ ಸಂಕನಗೌಡ್ರ, ಬಿ.ಬಿ. ಅನಸಾರಿ, ಮಹಾಬಳೇಶ ಗಾಣಿಗೇರ, ಎಚ್.ವಿ. ಬ್ಯಾಡಗಿ ಇದ್ದರು.