Advertisement

ಕೋಟ್ಲಾ ಕೋಟೆ ಏರಲು ರಾಜಸ್ಥಾನ್‌ ವಿಫ‌ಲ

06:00 AM May 04, 2018 | Team Udayavani |

ಹೊಸದಿಲ್ಲಿ: ಮಳೆಯಿಂದ ತೀವ್ರ ಅಡಚಣೆಗೊಳಗಾದ ಬುಧವಾರ ರಾತ್ರಿಯ ಕೋಟ್ಲಾ ಕಾಳಗದಲ್ಲಿ ಆತಿಥೇಯ ಡೆಲ್ಲಿ ಡೇರ್‌ಡೆವಿಲ್ಸ್‌ 4 ರನ್ನುಗಳ ರೋಚಕ ಜಯ ಸಾಧಿಸಿ ನಿಟ್ಟುಸಿರೆಳೆದಿದೆ. 12 ಓವರ್‌ಗಳಲ್ಲಿ 151 ರನ್ನುಗಳ ಕಠಿನ ಗುರಿ ಪಡೆದ ರಾಜಸ್ಥಾನ್‌ ರಾಯಲ್ಸ್‌ 5ಕ್ಕೆ 146ರ ತನಕ ಬಂದು ಸ್ವಲ್ಪದರಲ್ಲೇ ಎಡವಿದೆ.

Advertisement

ಮಳೆಯಿಂದಾಗಿ ಒಂದೂವರೆ ಗಂಟೆ ವಿಳಂಬಗೊಂಡು ಆರಂಭಗೊಂಡ ಈ ಪಂದ್ಯವನ್ನು 18 ಓವರ್‌ಗಳಿಗೆ ಇಳಿಸಲಾಗಿತ್ತು. ಆದರೆ ಡೆಲ್ಲಿ ಸರದಿಯ 17.1 ಓವರ್‌ ವೇಳೆ ಮತ್ತೆ ಮಳೆ ಸುರಿಯಿತು. ಆಗ ಆತಿಥೇಯ ತಂಡ 6 ವಿಕೆಟಿಗೆ 196 ರನ್‌ ಪೇರಿಸಿತ್ತು. ಬಳಿಕ ಡಿ-ಎಲ್‌ ನಿಯಮದಂತೆ ಗುರಿ ಯನ್ನು ಮರು ನಿಗದಿಗೊಳಿಸಿದಾಗ ರಹಾನೆ ಪಡೆಗೆ ಭಾರೀ ಸವಾಲು ಎದುರಾಯಿತು. ಆದರೂ ಜಾಸ್‌ ಬಟ್ಲರ್‌, ಡಿ’ಆರ್ಸಿ ಶಾರ್ಟ್‌ ಪ್ರಚಂಡ ಆರಂಭ ಒದಗಿಸಿ ಡೆಲ್ಲಿಗೆ ಭೀತಿಯೊಡ್ಡಿದರು. ಇವರಿಬ್ಬರ ಮೊದಲ ವಿಕೆಟ್‌ ಜತೆಯಾಟದಲ್ಲಿ 6.4 ಓವರ್‌ಗಳಿಂದ 82 ರನ್‌ ಒಟ್ಟುಗೂಡಿತು. 

ಬಟ್ಲರ್‌ 26 ಎಸೆತಗಳಿಂದ 67 ರನ್‌ ಸಿಡಿಸಿದರೆ (7 ಸಿಕ್ಸರ್‌, 4 ಬೌಂಡರಿ), ಶಾರ್ಟ್‌ 25 ಎಸೆತ ನಿಭಾಯಿಸಿ 44 ರನ್‌ ಬಾರಿಸಿದರು (4 ಸಿಕ್ಸರ್‌, 2 ಬೌಂಡರಿ).  ಮಧ್ಯಮ ಕ್ರಮಾಂಕದಲ್ಲಿ ಟ್ರೆಂಟ್‌ ಬೌಲ್ಟ್ ಘಾತಕ ದಾಳಿ ಸಂಘಟಿಸಿದ್ದ ರಿಂದ ರಾಜಸ್ಥಾನ್‌ ಒತ್ತಡಕ್ಕೆ ಸಿಲುಕಿತು. ಸ್ಯಾಮ್ಸನ್‌, ಸ್ಟೋಕ್ಸ್‌, ತ್ರಿಪಾಠಿ ಅಗ್ಗಕ್ಕೆ ವಿಕೆಟ್‌ ಒಪ್ಪಿಸಿದರು. ಅಂತಿಮ ಓವರಿನಲ್ಲಿ 15 ರನ್‌, ಕೊನೆಯ 2 ಎಸೆತಗಳಲ್ಲಿ 10 ರನ್‌ ತೆಗೆಯುವ ಸವಾಲು ಎದುರಾಯಿತು. ಬೌಲ್ಟ್ ಎಸೆದ 5ನೇ ಎಸೆತವನ್ನು ಕೆ. ಗೌತಮ್‌ ಬೌಂಡರಿಗಟ್ಟಿದರೂ ಅಂತಿಮ ಎಸೆತದಲ್ಲಿ ಸಿಕ್ಸರ್‌ ಬಾರಿಸಲು ಸಾಧ್ಯವಾಗಲಿಲ್ಲ!

200 ರನ್‌ ಕೂಡ ಕಡಿಮೆ: ಅಯ್ಯರ್‌
ಇದೊಂದು ಅಪ್ಪಟ ಬ್ಯಾಟಿಂಗ್‌ ಟ್ರ್ಯಾಕ್‌ ಆಗಿದ್ದರಿಂದ 200 ರನ್‌ ಕೂಡ ಇಲ್ಲಿ ಕಡಿಮೆಯೇ ಎಂದು ಡೆಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ ಅಭಿಪ್ರಾಯಪಟ್ಟರು. “ಪೃಥ್ವಿ ಶಾ ಆರಂಭ ಸ್ಫೋಟಕವಾಗಿತ್ತು. ರಿಷಬ್‌ ಪಂತ್‌ ಪ್ರಚಂಡ ಬ್ಯಾಟಿಂಗ್‌ ನಡೆಸಿದರು. ಪಂತ್‌ ಕೊನೆಯ ತನಕ ಆಡಿದ್ದರೆ ನಮ್ಮ ಮೊತ್ತ ಬಹಳ ಎತ್ತರಕ್ಕೆ ಬೆಳೆಯುತ್ತಿತ್ತು. ಮಳೆ ಬಂದು ನಿಂತ ಸ್ಥಿತಿಯಲ್ಲಿ ಬೌಲಿಂಗ್‌ ನಡೆಸುವುದು ಬಹಳ ಕಷ್ಟ. ಜತೆಗೆ ಸಣ್ಣ ಅಂಗಳ ಬೇರೆ. ಆದರೆ ನಮ್ಮದು ಕೇವಲ ಧನಾತ್ಮಕ ಯೋಚನೆಯಷ್ಟೇ ಆಗಿತ್ತು’ ಎಂದು ಅಯ್ಯರ್‌ ಹೇಳಿದರು. 

ಸೋಲಿನಿಂದ ನಿರಾಸೆ: ರಹಾನೆ
“ಸೋಲಿನಿಂದ ಬಹಳ ನಿರಾಸೆಯಾಗಿದೆ. 12 ಓವರ್‌ಗಳಲ್ಲಿ 151 ರನ್‌ ತೆಗೆಯುವುದು ಬಹಳ ಕಷ್ಟ. ಆದರೆ ನಮ್ಮ ಪ್ರಯತ್ನವಂತೂ ಅಮೋಘ. ಬಟ್ಲರ್‌ ಎಷ್ಟು ಅಪಾಯಕಾರಿ ಎಂಬುದು ಸ್ಪಷ್ಟವಾಗಿದೆ. ಅವರ ಫಾರ್ಮ್ ನಮಗೆ ಬಹಳ ಮುಖ್ಯ. ನಾವಿನ್ನೂ ಪಂದ್ಯಾವಳಿಯಲ್ಲಿ ಉಳಿದುಕೊಂಡಿದ್ದೇವೆ. ಮುಂದುವರಿಯುವ ವಿಶ್ವಾಸವಿದೆ. ಮುಂದಿನೆಲ್ಲ ಪಂದ್ಯಗಳೂ ನಮ್ಮ ಪಾಲಿಗೆ ನಾಕೌಟ್‌ ಪಂದ್ಯಗಳಾಗಿವೆ’ ಎಂಬುದು ಪರಾಜಿತ ರಾಜಸ್ಥಾನ್‌ ತಂಡದ ನಾಯಕ ಅಜಿಂಕ್ಯ ರಹಾನೆ ಪ್ರತಿಕ್ರಿಯೆ. ತಂಡ 5 ವಿಕೆಟ್‌ ಕಳೆದುಕೊಂಡರೂ ರಹಾನೆ ಬ್ಯಾಟಿಂಗಿಗೆ ಬರಲಿಲ್ಲ ಎಂಬುದು ಈ ಪಂದ್ಯದ ವಿಶೇಷ!

Advertisement

ಸ್ಕೋರ್‌ಪಟ್ಟಿ
ಡೆಲ್ಲಿ ಡೇರ್‌ಡೆವಿಲ್ಸ್‌

ಪೃಥ್ವಿ ಶಾ    ಸಿ ಮತ್ತು ಬಿ ಗೋಪಾಲ್‌    47
ಕಾಲಿನ್‌ ಮುನ್ರೊ    ಸಿ ಬಟ್ಲರ್‌ ಬಿ ಕುಲಕರ್ಣಿ    0
ಶ್ರೇಯಸ್‌ ಅಯ್ಯರ್‌    ಸಿ ತ್ರಿಪಾಠಿ ಬಿ ಉನಾದ್ಕತ್‌    50
ರಿಷಬ್‌ ಪಂತ್‌    ಸಿ ಸ್ಟೋಕ್ಸ್‌ ಬಿ ಉನಾದ್ಕತ್‌    69
ಗ್ಲೆನ್‌ ಮ್ಯಾಕ್ಸ್‌ವೆಲ್‌    ಎಲ್‌ಬಿಡಬ್ಲ್ಯು ಆರ್ಚರ್‌    5
ವಿಜಯ್‌ ಶಂಕರ್‌    ಸಿ ತ್ರಿಪಾಠಿ ಬಿ ಉನಾದ್ಕತ್‌    17
ಲಿಯಮ್‌ ಪ್ಲಂಕೆಟ್‌    ಔಟಾಗದೆ    1

ಇತರ        7
ಒಟ್ಟು  (17.1 ಓವರ್‌ಗಳಲ್ಲಿ 6 ವಿಕೆಟಿಗೆ)    196
ವಿಕೆಟ್‌ ಪತನ: 1-1, 2-74, 3-166, 4-172, 5-191.

ಬೌಲಿಂಗ್‌: ಧವಳ್‌ ಕುಲಕರ್ಣಿ    3-0-37-1
ಜೋಫ‌ ಆರ್ಚರ್‌        3.1-0-31-1
ಕೃಷ್ಣಪ್ಪ ಗೌತಮ್‌        2-0-27-0
ಜೈದೇವ್‌ ಉನಾದ್ಕತ್‌        4-0-46-3
ಶ್ರೇಯಸ್‌ ಗೋಪಾಲ್‌        2-0-26-1
ಬೆನ್‌ ಸ್ಟೋಕ್ಸ್‌        3-0-28-0

ರಾಜಸ್ಥಾನ್‌ ರಾಯಲ್ಸ್‌
(ಗುರಿ: 12 ಓವರ್‌ಗಳಲ್ಲಿ 151 ರನ್‌)

ಡಿ’ಆರ್ಸಿ ಶಾರ್ಟ್‌    ಸಿ ಆವೇಶ್‌ ಬಿ ಮ್ಯಾಕ್ಸ್‌ವೆಲ್‌    44
ಜಾಸ್‌ ಬಟ್ಲರ್‌    ಸ್ಟಂಪ್ಡ್ ಪಂತ್‌ ಬಿ ಮಿಶ್ರಾ    67
ಸಂಜು ಸ್ಯಾಮ್ಸನ್‌    ಸಿ ಮುನ್ರೊ ಬಿ ಬೌಲ್ಟ್    3
ಬೆನ್‌ ಸ್ಟೋಕ್ಸ್‌    ಸಿ ಶಂಕರ್‌ ಬಿ ಬೌಲ್ಟ್    1
ರಾಹುಲ್‌ ತ್ರಿಪಾಠಿ    ರನೌಟ್‌    9
ಕೃಷ್ಣಪ್ಪ ಗೌತಮ್‌    ಔಟಾಗದೆ    18
ಜೋಫ‌ ಆರ್ಚರ್‌    ಔಟಾಗದೆ    0

ಇತರ        4
ಒಟ್ಟು  (12 ಓವರ್‌ಗಳಲ್ಲಿ 5 ವಿಕೆಟಿಗೆ)    146
ವಿಕೆಟ್‌ ಪತನ: 1-82, 2-92, 3-100, 4-118, 5-141.

ಬೌಲಿಂಗ್‌: ಶಾಬಾಜ್‌ ನದೀಂ        1-0-13-0
ಟ್ರೆಂಟ್‌ ಬೌಲ್ಟ್        3-0-26-2
ಆವೇಶ್‌ ಖಾನ್‌        2-0-36-0
ಲಿಯಮ್‌ ಪ್ಲಂಕೆಟ್‌        3-0-37-0
ಅಮಿತ್‌ ಮಿಶ್ರಾ        2-0-12-1
ಗ್ಲೆನ್‌ ಮ್ಯಾಕ್ಸ್‌ವೆಲ್‌        1-0-21-1

ಪಂದ್ಯಶ್ರೇಷ್ಠ: ರಿಷಬ್‌ ಪಂತ್‌

ಎಕ್ಸ್‌ಟ್ರಾ ಇನ್ನಿಂಗ್ಸ್‌ :  ಡೆಲ್ಲಿ-ರಾಜಸ್ಥಾನ್‌
ತಂಡದ ಇನ್ನಿಂಗ್ಸ್‌ 4.1 ಓವರ್‌ ಆಗುವಷ್ಟರಲ್ಲಿ ಜಾಸ್‌ ಬಟ್ಲರ್‌ ಅರ್ಧ ಶತಕ ಪೂರ್ತಿಗೊಳಿಸಿದರು. ಇದು ಕಡಿಮೆ ಓವರ್‌ ಲೆಕ್ಕಾಚಾರದಲ್ಲಿ ಐಪಿಎಲ್‌ನಲ್ಲಿ ದಾಖಲಾದ ಜಂಟಿ 2ನೇ ಅತೀ ವೇಗದ ಅರ್ಧ ಶತಕ. ಕೆ.ಎಲ್‌. ರಾಹುಲ್‌ ಇದೇ ಋತುವಿನಲ್ಲಿ 14 ಎಸೆತಗಳಲ್ಲಿ ಅರ್ಧ ಶತಕ ಪೂರ್ತಿಗೊಳಿಸುವಾಗ ಪಂಜಾಬ್‌ ಇನ್ನಿಂಗ್ಸ್‌ ಕೇವಲ 3.5 ಓವರ್‌ಗಳನ್ನಷ್ಟೇ ಕಂಡಿತ್ತು. ಕಳೆದ ವರ್ಷ ಕೆಕೆಆರ್‌ ವಿರುದ್ಧ ವಾರ್ನರ್‌ ಅರ್ಧ ಶತಕ ಪೂರೈಸುವಾಗ ಹೈದರಾಬಾದ್‌ ಇನ್ನಿಂಗ್ಸ್‌ನಲ್ಲಿ ಕೇವಲ 4.1 ಓವರ್‌ಗಳ ಆಟವಾಗಿತ್ತು.

ರಾಜಸ್ಥಾನ್‌ ವಿರುದ್ಧ ಸತತ 7 ಪಂದ್ಯಗಳನ್ನು ಸೋತ ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್‌ ಮೊದಲ ಜಯ ಸಾಧಿಸಿತು. ಇದು 2012ರ ಬಳಿಕ ರಾಜಸ್ಥಾನ್‌ ವಿರುದ್ಧ ಡೆಲ್ಲಿ ದಾಖಲಿಸಿದ ಮೊದಲ ಜಯ. ಅಂದಿನ ಜೈಪುರ ಪಂದ್ಯವನ್ನು ಡೆಲ್ಲಿ 6 ವಿಕೆಟ್‌ಗಳಿಂದ ಜಯಿಸಿತ್ತು.

ಜಾಸ್‌ ಬಟ್ಲರ್‌ ಕೇವಲ 18 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು. ಇದು ರಾಜಸ್ಥಾನ್‌ ಆಟಗಾರನೋರ್ವನ ಅತೀ ವೇಗದ ಅರ್ಧ ಶತಕವಾಗಿದೆ. 2012ರಲ್ಲಿ ಆರ್‌ಸಿಬಿ ವಿರುದ್ಧ ಓವೇಸ್‌ ಶಾ 19 ಎಸೆತಗಳಲ್ಲಿ 50 ರನ್‌ ಬಾರಿಸಿದ್ದು ರಾಜಸ್ಥಾನ್‌ ತಂಡದ ದಾಖಲೆಯಾಗಿತ್ತು.

ಬಟ್ಲರ್‌ ಪರಾಜಿತ ತಂಡದ ಪರ 3ನೇ ಅತೀ ವೇಗದ ಅರ್ಧ ಶತಕ ಬಾರಿಸಿದ ದಾಖಲೆ ಸ್ಥಾಪಿಸಿದರು (18 ಎಸೆತ). 2014ರ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ಸುರೇಶ್‌ ರೈನಾ 16 ಎಸೆತಗಳಲ್ಲಿ 50 ರನ್‌ ಹೊಡೆದದ್ದು ದಾಖಲೆ. 2016ರಲ್ಲಿ ಡೆಲ್ಲಿ ತಂಡದ ಕ್ರಿಸ್‌ ಮಾರಿಸ್‌ ಗುಜರಾತ್‌ ಲಯನ್ಸ್‌ ವಿರುದ್ಧ 17 ಎಸೆತಗಳಲ್ಲಿ ಫಿಫ್ಟಿ ಹೊಡೆದಿದ್ದರು.

ಅಮಿತ್‌ ಮಿಶ್ರಾ ಹೊಸದಿಲ್ಲಿಯ ಫಿರೋಜ್‌ ಷಾ ಕೋಟ್ಲಾ ಅಂಗಳದಲ್ಲಿ 50 ಟಿ20 ಪಂದ್ಯಗಳನ್ನಾಡಿದ ಮೊದಲ ಆಟಗಾರನೆನಿಸಿದರು.

ಬೆನ್‌ ಸ್ಟೋಕ್ಸ್‌ 100 ಟಿ20 ಪಂದ್ಯಗಳನ್ನು ಪೂರ್ತಿಗೊಳಿಸಿದರು.

ಶ್ರೇಯಸ್‌ ಅಯ್ಯರ್‌ (51) ಮತ್ತು ರಿಷಬ್‌ ಪಂತ್‌ (50) ಐಪಿಎಲ್‌ನಲ್ಲಿ 50 ಸಿಕ್ಸರ್‌ ಪೂರ್ತಿಗೊಳಿಸಿದರು. ಇವರಿಬ್ಬರು ಕೇವಲ ಡೆಲ್ಲಿ ತಂಡದ ಪರವಾಗಿ ಆಡಿ ಈ ಸಾಧನೆಗೈದದ್ದು ವಿಶೇಷ. ಡೆಲ್ಲಿ ಪರ 50 ಪ್ಲಸ್‌ ಸಿಕ್ಸರ್‌ ಸಿಡಿಸಿದ ಮತ್ತಿಬ್ಬರು ಆಟಗಾರರೆಂದರೆ ವೀರೇಂದ್ರ ಸೆಹವಾಗ್‌ (85) ಮತ್ತು ಡೇವಿಡ್‌ ವಾರ್ನರ್‌ (58).

ಅಜಿಂಕ್ಯ ರಹಾನೆ ತಂಡದಲ್ಲಿದ್ದೂ 6ನೇ ಸಲ ಬ್ಯಾಟಿಂಗ್‌ ಮಾಡಲು ಇಳಿಯಲಿಲ್ಲ. 2014ರಲ್ಲಿ ಮುಂಬೈ ವಿರುದ್ಧ ಕೊನೆಯ ಸಲ ರಹಾನೆ ಆಡದೇ ಉಳಿದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next