Advertisement
1984. ನಾನಾಗ ನಾಲ್ಕನೇ ಕ್ಲಾಸು. ಊರಿನಲ್ಲಿ ನಮ್ಮ ಮನೆ ಎದುರಿಗೆ ಒಬ್ಬ ಶ್ರೀಮಂತರ ಮನೆಯಿತ್ತು. ಅಷ್ಟಕ್ಕೂ ಈ ಶ್ರೀಮಂತಿಕೆಯ ಲೇಬಲ್ ಹುಡುಕುತ್ತ ಹೋದರೆ, ಅದು ನಮ್ಮ ಬೀದಿಯಲ್ಲಿದ್ದ ಗೌಳಿಯ ಮುಂದೆ ಬಂದು ನಿಲ್ಲುತ್ತದೆ. ಈ ಗೌಳಿ ಅದು ಹೇಗೆ ಆ ಕಾಲದಲ್ಲೇ “ಸಾಮಾಜಿಕ ನ್ಯಾಯ’ದಲ್ಲಿ ನಂಬಿಕೆಯಿಟ್ಟಿದ್ದನೋ ಗೊತ್ತಿಲ್ಲ. ಆತನ ಬಳಿ ಯಾವಾಗಲೂ ಒಂದು ಸ್ಟೀಲಿನ ಲೋಟ ಇರುತ್ತಿತ್ತು. ಅದರಲ್ಲೇ ಆತ ಹಾಲು ಅಳೆದುಕೊಡುತ್ತಿದ್ದ. ಬರೀ ನಾಲ್ಕಾಣೆಗೆ ಲೋಟಪೂರ್ತಿ ತುಂಬಿಸಿಕೊಡುತ್ತಿದ್ದ. ಎಂಟಾಣೆಗೂ ಅಷ್ಟೇ, ರೂಪಾಯಿಗೂ ಅಷ್ಟೇ! ಅದು ಹೇಗೆ ಅಂತ ಅರ್ಥವಾಗದೇ ನಮಗೆಲ್ಲ ಗಲಿಬಿಲಿಯಾಗುತ್ತಿತ್ತು. ಕೊನೆಗೊಮ್ಮೆ, ಆತನ ಬಳಿ ಮೂರು ರೀತಿಯ ತಂಬಿಗೆಗಳಿದ್ದವು, ಅವುಗಳಲ್ಲಿ ಈ ಪುಣ್ಯಾತ್ಮ ಮೂರು ವಿಧವಾದ ಮಿಶ್ರಣಮಾಡಿದ್ದ ನೀರು ಹಾಲನ್ನು ಇಟ್ಟುಕೊಂಡಿರುತ್ತಿದ್ದ ಅಂತ ಗೊತ್ತಾಗಲು ವರ್ಷಗಳೇ ಬೇಕಾದವು.
Related Articles
Advertisement
ಅದಾದ ಕೆಲವರ್ಷಗಳ ನಂತರ, ನಮ್ಮಜ್ಜಿ ಮನೆಗೆ ಕಪ್ಪು ಬಿಳುಪಿನ ಹದಿನಾಲ್ಕಿಂಚಿನ Texla ಟೀವಿ ಬಂತು. ಅಲ್ಲಿಗೆ ನಮ್ಮ ಬಾನುಲಿಯ ಗಿಳಿವಿಂಡು ಕಾರ್ಯಕ್ರಮ “ರಂಗೋಲಿ’ಗೆ ಶಿಫ್ಟಾಯಿತು; ಎಳೆಯರ ಬಳಗ “ಸ್ಪೆ çಡರ್‌ಮ್ಯಾನ್’ ಮುಂದೆ ಸೋಲೊಪ್ಪಿಕೊಂಡಿತು. ಮುಂದಿನದೆಲ್ಲ ದೂರದರ್ಶನದ ಯಶೋಗಾಥೆಯೇ.
ಏ ಜೋ ಹೈ ಜಿಂದಗಿ, ಹಮ್ ಲೋಗ್, ಸ್ಟಾರ್ ಟ್ರೆಕ್, ಹಿ ಮ್ಯಾನ್, ಡೀಡೀಸ್ ಕಾಮಿಡಿ ಶೋ, ನುಕ್ಕಡ್, ಫೌಜಿ, ಇಂತೆಜಾರ್, ಉಡಾನ್, ರಜನಿ- ಒಂದೇ ಎರಡೇ? ರವಿವಾರದ ನಮ್ಮೆಲ್ಲರ ಬೆಳಗು “ರಂಗೋಲಿ’ಯಿಂದ ಪ್ರಾರಂಭವಾಗುತ್ತಿತ್ತು. ಗುರುವಾರದ ಡಿನ್ನರ್ “ಚಿತ್ರಹಾರ್’ನೊಂದಿಗೆ ಮುಗಿಯುತ್ತಿತ್ತು.
ಹೀಗಿದ್ದಾಗ, ಒಮ್ಮೆ ಅಜ್ಜಿಮನೆಯಲ್ಲಿ ಟೀವಿ ನೋಡುತ್ತಿದ್ದಂತೆ ಕರೆಂಟು ಹೋಯಿತು. ಎಲ್ಲರೂ ಬೇಸರದಿಂದ ಗೊಣಗುತ್ತ ಹೊರಗೆದ್ದು ಹೋದೆವು. ದೊಡ್ಡದೊಂದು ಮೊಂಬತ್ತಿ ಉರಿಸಿದ್ದ ಸೋದರಮಾವ, ಅದನ್ನು ಟೀವಿಯ ಮೇಲಿಟ್ಟು ನಿದ್ದೆಹೋ ಗಿಬಿಟ್ಟಿದ್ದ. ಮೊಂಬತ್ತಿಯ ಮೇಣ ನಿಧಾನಕ್ಕೆ ಕರಗುತ್ತ ಬಂದು Texla ಟೀವಿಯ ಪ್ಲಾಸ್ಟಿಕ್‌ನ ಮೇಲುಹೊದಿಕೆಯನ್ನೂ ಕರಗಿಸಿ ಕೊನೆಗೊಮ್ಮೆ ಪಿಕ್ಚರ್‌ಟ್ಯೂಬ್ “ಢಂ’ ಅಂದಾಗಲೇ ಮಾವನಿಗೆ ಎಚ್ಚರ ಆಗಿದ್ದು! ಅಲ್ಲಿಯವರೆಗೂ ಅನೂಚಾನಾಗಿ ನಡೆದುಬಂದಂಥ ಬೀಡುಬೀಸಾದ ದಿನಚರಿಯೊಂದು ಹುಷಾರು ತಪ್ಪಿದ್ದು ಹೀಗೆ.
ಅದಾದ ಮೇಲೆ, ನಮ್ಮನೆಗೆ ಕಪ್ಪುಬಿಳುಪಿನ “ಡಯನೋರಾ’ ಟೀವಿ ಬಂತು. ಒಳ್ಳೇ ತಿಜೋರಿಗಿರುವಂತೆ, ಅದಕ್ಕೆ ಅಕ್ಕಪಕ್ಕ ಸರಿಸಬಲ್ಲ ಬಾಗಿಲುಗಳಿದ್ದವು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಾವು ಶಟರ್ ಎಳೆಯುತ್ತಿದ್ದೆವು. ಹೀಗಿರುವಾಗಲೇ, ಪಕ್ಕದಮನೆಯವರು ಬಣ್ಣದ ಟೀವಿ ಖರೀದಿಸಿದರು. ಸರಿಯಾಗಿ ಅಷ್ಟೊತ್ತಿಗೆ ರಮಾನಂದ ಸಾಗರರ “ರಾಮಾಯಣ’ ಬಂತು ನೋಡಿ… ಭಾನುವಾರದ ಬೆಳಗನ್ನೇ ಆಪೋಶನ ತೆಗೆದುಕೊಂಡುಬಿಟ್ಟಿತು. ಬಾದರಾಯಣದ ಅಜ್ಜಿಯೊಂದು ಈ ರಾಮಾಯಣಕ್ಕೆಂದೇ ದೂರದಿಂದ ನಡೆದುಕೊಂಡು ನಮ್ಮನೆಗೆ ಬರುತ್ತಿತ್ತು. ಟೀವಿಯಲ್ಲಿ ದರುಶನವೀಯುತ್ತಿದ್ದ ರಾಮದೇವರ ನೈವೇದ್ಯಕ್ಕೆಂದು ಆಕೆಯ ಕೈಯಲ್ಲಿ ಎರಡು ಬಾಳೆಹಣ್ಣು, ಊದುಬತ್ತಿ ಬೇರೆ! ಅಂಥದೊಂದು ಖದರು ಹೊಂದಿದ್ದ ಈ ರಾಮಾಯಣ ಶುರುವಾಗುತ್ತಿದ್ದ ಹೊತ್ತಿನಲ್ಲಿ ಒಂದೇ ಒಂದು ನರಪಿಳ್ಳೆಯೂ ಬೀದಿಗಳಲ್ಲಿ ಕಾಣಸಿಗುತ್ತಿರಲಿಲ್ಲವೆಂಬುದು ಎಷ್ಟು ಸತ್ಯವೋ, ಭಾನುವಾರದ ಬೆಳಗಿನಲ್ಲಿ ಮುಹೂರ್ತವೊಂದು ಮೂಡಿಬಂದಿದ್ದರೂ ಆ ದಿನ ಮದುವೆಯಂಥ ಕಾರ್ಯಕ್ರಮವನ್ನೇ ನಿಗದಿಪಡಿಸಲು ಜನ ಹಿಂದೆಮುಂದೆ ನೋಡುತ್ತಿದ್ದರು ಅನ್ನುವುದೂ ಅಷ್ಟೇ ಸತ್ಯಸಂಗತಿ.– 1959, ಸೆಪ್ಟೆಂಬರ್ 15ರಂದು ಯಾವುದೇ ಆಡಂಬರ, ಪ್ರಚಾರವಿಲ್ಲದೇ ಭಾರತದಲ್ಲಿ ದೂರದರ್ಶನ ಶುರುವಾಯಿತು. ತರಾತುರಿಯಲ್ಲಿ ನಿರ್ಮಿಸಿದ್ದ ಸಣ್ಣ ಸ್ಟುಡಿಯೊ ಹಾಗೂ ಚಿಕ್ಕ ಟ್ರಾನ್ಸ್‌ಮೀಟರ್ ಮೂಲಕ, ದೆಹಲಿಯಲ್ಲಿ ಪ್ರಯೋಗಾರ್ಥ ಪ್ರಸಾರ ಸೇವೆ ಆರಂಭಿಸಿತು.
– 1965ರಲ್ಲಿ ಮೊದಲ ಬಾರಿಗೆ 5 ನಿಮಿಷದ ನ್ಯೂಸ್ ಬುಲೆಟಿನ್ ಪ್ರಸಾರ.
– ಪ್ರತಿಮಾ ಪುರಿ ಡಿಡಿಯ ಮೊದಲ ವಾರ್ತಾವಾಚಕಿ.
– 1970- ಆಕಾಶವಾಣಿಯಿಂದ ಬೇರ್ಪಟ್ಟು, “ದೂರದರ್ಶನ’ ಎಂದು ನಾಮಕರಣ.
– 1976, ಜನವರಿ 1- ಮೊದಲ ಬಾರಿಗೆ ವಾಣಿಜ್ಯ ಪ್ರಸಾರ.
– 1982, ಏಪ್ರಿಲ್ 25ರಂದು ಕಪ್ಪುಬಿಳುಪು ಸುಂದರಿಯ “ಡಿಡಿ-1′ ಮೊದಲ ಬಾರಿಗೆ, ವರ್ಣಪ್ರಸಾರ ಬಿತ್ತರಿಸಿತು. ಅದೇ ವರ್ಷ ದೆಹಲಿಯಲ್ಲಿ ಏಷ್ಯಾಡ್ ಇದ್ದ ಕಾರಣಕ್ಕೆ, ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
– 1994ರಲ್ಲಿ ಉರ್ದು ವಾರ್ತೆ ಪ್ರಸಾರ ಆರಂಭಿಸಿದಾಗ, ಸಾಕಷ್ಟು ವಿರೋಧ, ಹಿಂಸಾಚಾರ ನಡೆಯಿತು. ವಾರದೊಳಗೆ ಅದನ್ನು ನಿಲ್ಲಿಸಲಾಯಿತು. ಇದು ಡಿಡಿ-1ನ ಬಹುದೊಡ್ಡ ಕಪ್ಪುಚುಕ್ಕೆ.
– 2000, ಜನವರಿ 1ರಿಂದ 24 ಗಂಟೆಗಳ ಸೇವೆಗೆ ಚಾಲನೆ ಹುಟ್ಟಿದ ಉದ್ದೇಶವೇ ಬೇರೆ…
1959ರ ಸೆ.15ರಂದು, ಯುನೆಸ್ಕೋವು ಶೈಕ್ಷಣಿಕ, ಸಾಂಸ್ಕೃತಿಕ, ವೈಜ್ಞಾನಿಕ ಸಂಗತಿಗಳನ್ನು ಪ್ರಸಾರ ಮಾಡಲು, ಭಾರತಕ್ಕೆ 20 ಸಾವಿರ ಡಾಲರ್‌ಗಳೊಂದಿಗೆ, 180 ಫಿಲಿಪ್ಸ್ ಸೆಟ್‌ಗಳನ್ನು ನೀಡಿತು. ದೂರದರ್ಶನದ ಆರಂಭದಲ್ಲಿ ಆರೋಗ್ಯ, ಶೈಕ್ಷಣಿಕ ಜಾಗೃತಿಯ ಕಾರ್ಯಕ್ರಮಗಳಷ್ಟೇ ಮೂಡಿಬರುತ್ತಿದ್ದವು. ಅಧಿಕಾರಿಗಳು, ಮನೆ ಮನೆಗೆ ಫಿಲಿಪ್ಸ್ ಸೆಟ್‌ಗಳನ್ನು ಹೊತ್ತುಕೊಂಡು ಹೋಗಿ, ಜಾಗೃತಿ ಕಾರ್ಯಕ್ರಮಗಳನ್ನು ತಲುಪಿಸುತ್ತಿದ್ದರು. 80ರ ದಶಕದ ನಂತರವಷ್ಟೇ, ಮನರಂಜನೆಯ ಕಾರ್ಯಕ್ರಮಗಳು ಸೇರ್ಪಡೆಗೊಂಡವು. ಈಗಿನ ಡಿಡಿ ಕತೆ…
ಪ್ರಸ್ತುತ 67 ಸ್ಟುಡಿಯೊ, ವಿವಿಧ ಸಾಮರ್ಥ್ಯದ 1,416 ಟ್ರಾನ್ಸ್‌ಮೀಟರ್ ಮೂಲಕ ಸೇವೆ. 8 ಸ್ಥಳೀಯ, 1 ಅಂತಾರಾಷ್ಟ್ರೀಯ, 11 ಪ್ರಾದೇಶಿಕ ಮತ್ತು 15 ರಾಜ್ಯ ಜಾಲಗಳೂ ಸೇರಿದಂತೆ 60 ವಾಹಿನಿಗಳಿವೆ. 146 ದೇಶಗಳಲ್ಲಿ ಡಿಡಿ ಪ್ರಸಾರಗೊಳ್ಳುತ್ತದೆ. ಕನ್ನಡಿಗರಿಗೆ ಸಮೀಪವಾಗಿದ್ದು…
ಕರ್ನಾಟಕದಲ್ಲಿ ಮೊದಲು ದೂರದರ್ಶನ ಕೇಂದ್ರ ಹೊಂದಿದ ಹಿರಿಮೆ ಗುಲ್ಬರ್ಗಾ (ಈಗಿನ ಕಲ್ಬುರ್ಗಿ) ಜಿಲ್ಲೆಯದ್ದು (1979, ನವೆಂಬರ್ 3). ಉಪಗ್ರಹ ಸೂಚಿತ ದೂರದರ್ಶನ ಪ್ರಯೋಗ (ಖಐಖಉ) ಕಾರ್ಯಕ್ರಮದಡಿ, ಕಲಬುರ್ಗಿಯ ಹಳ್ಳಿಗಳಿಗೆ ಟಿ.ವಿ. ಸೆಟ್‌ಗಳು ಬಂದಿದ್ದವು. ಬೆಂಗಳೂರಿನಲ್ಲಿ ಇದರ ಕೇಂದ್ರ ಉದ್ಘಾಟನೆಗೊಂಡಿದ್ದು, 1981ರ ನವೆಂಬರ್ 1ರಂದು. “ಡಿಡಿ- 9′ ಕರ್ನಾಟಕ ಪ್ರಾದೇಶಿಕ ಭಾಷಾ ಉಪಗ್ರಹ ವಾಹಿನಿ 1991ರ ಆಗಸ್ಟ್ 15ರಂದು ತನ್ನ ಪ್ರಸಾರ ಸೇವೆ ಆರಂಭಿಸಿತು. ನಂತರ, 2000ದ ಇಸವಿಯಲ್ಲಿ ಬೆಂಗಳೂರು ದೂರದರ್ಶನಕ್ಕೆ “ಚಂದನ’ ಎಂದು ನಾಮಕರಣ ಮಾಡಲಾಯಿತು. – ರಾಘವೇಂದ್ರ ಜೋಶಿ