ಕಲಬುರಗಿ: ಜಿಲ್ಲೆಯ ಎಲ್ಲ ರೈತರಿಗೂ ಕಿಸಾನ್ ಕಾರ್ಡ್ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಬ್ಯಾಂಕರ್‌ಗಳಿಗೆ ಸೂಚಿಸಿದರು.
ಶನಿವಾರ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಯೋಜನೆಗಳ ಜಿಲ್ಲಾ ಮಟ್ಟದ ಪರಾಮರ್ಶೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಜಿಲ್ಲೆ ಎರಡನೇ ಸ್ಥಾನದಲ್ಲಿ ಇದೆ. ಆದಷ್ಟು ಬೇಗ ಒಂದನೇ ಸ್ಥಾನಕ್ಕೆ ಬರುವ ಪ್ರಯತ್ನ ಮಾಡಬೇಕು. ಪ್ರಮುಖವಾಗಿ ಸಣ್ಣ ಕೈಗಾರಿಕೆಗಳು, ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು, ರೈತರು, ಆಟೋ ಚಾಲಕರು ಇತ್ಯಾದಿ ವರ್ಗದವರನ್ನು ಪದೇಪದೆ ಬ್ಯಾಂಕ್‌ಗಳಿಗೆ ಅಲೆದಾಡಿಸದೇ ಸಾಲ ನೀಡಿ ಎಂದು ಹೇಳಿದರು.
ಸಂಸದ ಡಾ| ಉಮೇಶ ಜಾಧವ ಮಾತನಾಡಿ, ಸರ್ಕಾರದ ಅನೇಕ ಯೋಜನೆಗಳು ಜನರಿಗೆ ಸಹಾಯ ಮಾಡಲು ಇವೆ. ಇವು ಸಾಮಾನ್ಯ ವರ್ಗದವರಿಗೆ ಗೊತ್ತಿಲ್ಲ, ಅಂತಹ ಯೋಜನೆಗಳನ್ನು ಜನರಿಗೆ ತಲುಪಿಸಲು ರಸ್ತೆಗಳಲ್ಲಿ ಸ್ಟಾಲ್ ಹಾಕಿಕೊಂಡು, ಪ್ರಚಾರ ಮಾಡಬೇಕು ಎಂದು ಸೂಚಿಸಿದರು.
ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸದಾಶಿವ ವೀ.ರಾತ್ರಿಕರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ 1.60ಲಕ್ಷ ರೈತರಿಗೆ ಸಾಲ ನೀಡಿದ್ದೇವೆ. ಇನ್ನು 40 ಸಾವಿರ ರೈತರಿಗೆ ಸಾಲ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. 2,50,452ಮಂದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗಿದೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ನುಡಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ.ಎಸ್. ರಾಠೊಡ, ನರ್ಬಾಡ್ ಡಿಡಿಎಂ ರಮೇಶ ಭಟ್, ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ಎಜಿಎಂ ಗುರುರಾಜ ಎಸ್. ಇದ್ದರು.