Advertisement
ಜನರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ಕುಂದು ಕೊರತೆ ಆಲಿಕೆಯ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 29 ದೂರುಗಳು ದಾಖಲಾದವು.
Related Articles
Advertisement
ಸೌಲಭ್ಯ ಕಲ್ಪಿಸಿ: ಚಾಮರಾಜನಗರದಿಂದ ಕರೆ ಮಾಡಿದ ಸ್ಥಳಿಯರೊಬ್ಬರು 10 ನೇ ವಾರ್ಡ್ ಕರಿನಂಜನಪುರದಲ್ಲಿ ಮೂಲ ಸೌಕರ್ಯಗಳಿಲ್ಲದೆ ಪರಿತಪಿಸುವಂತಾಗಿದೆ. ರಸ್ತೆ, ಕುಡಿಯುವ ನೀರು ಸೌಲಭ್ಯಕ್ಕೆ ಈ ಹಿಂದೆಯೂ ಮನವಿ ಮಾಡಲಾಗಿದೆ ಎಂಬುದನ್ನು ಗಮನಕ್ಕೆ ತಂದರು. ಕೂಡಲೇ ಸಭೆಯಲ್ಲಿದ್ದ ಪೌರಾಯುಕ್ತರಿಗೆ ತಕ್ಷಣವೇ ಈ ಕುರಿತು ಕ್ರಮ ವಹಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಸಂತೆಮರಹಳ್ಳಿಯಿಂದ ಕರೆ ಮಾಡಿದ ಸ್ಥಳೀಯರೊಬ್ಬರು ಗ್ರಾಮ ಠಾಣೆ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎಂಬುದನ್ನು ಗಮನಕ್ಕೆ ತಂದರು. ಜಿಲ್ಲಾಧಿಕಾರಿಯವರು ಉತ್ತರಿಸಿ ಈ ಬಗ್ಗೆ ಪರಿಶೀಲಿಸಲು ತಿಳಿಸಲಾಗುವುದು ಎಂದರು.
ಅಪರಿಪೂರ್ಣ ಮಾಹಿತಿ: ನಗರದಿಂದ ಕರೆ ಮಾಡಿದ ಮತ್ತೋರ್ವರು ಖಾಸಗಿಯಾಗಿ ಮನೆ ಪಾಠ ಮಾಡುವವರ ಸಂಬಂಧ ತಾವು ಕೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ನೀಡಿರುವ ಮಾಹಿತಿ ಪರಿಪೂರ್ಣವಾಗಿಲ್ಲ. ಈ ಬಗ್ಗೆ ಸರಿಯಾದ ಮಾಹಿತಿ ನೀಡಲು ಸೂಚಿಸಬೇಕಿದೆ ಎಂದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಈ ಬಗ್ಗೆ ಗಮನಕ್ಕೆ ತರುವುದಾಗಿ ತಿಳಿಸಿದರು.
ಪಿಜಿ ಪಾಳ್ಯ ಗ್ರಾಮದಿಂದ ಸ್ಥಳೀಯರೊಬ್ಬರು ಕರೆಮಾಡಿ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸರಿಯಾದ ಆಹಾರ ವಿತರಣೆ ಮಾಡುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡುತ್ತೇನೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಉಪವಿಭಾಗಾಧಿಕಾರಿ ನಿಖೀತಾ ಚಿನ್ನಸ್ವಾಮಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ದೂರುಗಳ ಸರಮಾಲೆ: ಗ್ರಾಪಂ ಕಾರ್ಯನಿರ್ವಹಣೆ, ಕುಡಿಯುವ ನೀರು, ಕರಿಕಲ್ಲುಗಳ ಲಾರಿ ಸಂಚಾರದಿಂದ ಆಗುತ್ತಿರುವ ತೊಂದರೆ, ನಗರ ಸಂಚಾರ ಸುಧಾರಣೆ, ಒತ್ತುವರಿ ತೆರವು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಸ್ಯೆಗಳು ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿಬಂದವು. ಒಂದು ತಾಸಿನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಮಸ್ಯೆಗಳ ಕುರಿತು ದೂರುಗಳು ಬಂದವು.