ಉಡುಪಿ: ಜಿಲ್ಲೆಯ 13 ಜಿಲ್ಲಾಧಿಕಾರಿಗಳಿಗೆ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ ರುಕ್ಮಯ ನಾಯ್ಕ (60) 31 ವರ್ಷಗಳ ಸೇವೆಯ ಬಳಿಕ ಮಾ.30ರಂದು ನಿವೃತ್ತಿಯಾಗಲಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಇವರು ಒಂದೇ ಒಂದು ಅಪಘಾತ ಮಾಡಿಲ್ಲ ಎಂಬುವುದು ಇವರ ಹೆಗ್ಗಳಿಕೆ. ಯಾವುದೇ ಜಿಲ್ಲಾಧಿಕಾರಿ ಬಂದರೂ ಅವರಿಗೆ ನೆಚ್ಚಿನ ಚಾಲಕರಾಗಿ ಇವರು ಗುರುತಿಸಿಕೊಂಡಿದ್ದಾರೆ. ಕಾರು ಚಾಲನೆ, ವಾಹನ ನಿರ್ವಹಣೆ, ಚಾಲಕ ವೃತ್ತಿಯಲ್ಲಿ ಇವರು ಬಹಳ ನೈಪುಣ್ಯತೆ ಹೊಂದಿದ್ದಾರೆ.
ಬಡ ಕುಟುಂಬ
ಬಡತನ ಹಿನ್ನಲೆಯಿಂದಲೇ ಚಾಲಕ ವೃತ್ತಿಜೀವನಕ್ಕಿಳಿದ ಇವರು ಓದಿದ್ದು 7ನೇ ತರಗತಿ. 70ರ ದಶಕದಲ್ಲಿ ಮಂಗಳೂರಿನಲ್ಲಿ ಲಾರಿಯಲ್ಲಿ ಕ್ಲೀನರ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ಬಳಿಕ ಲಾರಿ ಚಾಲಕರಾದರು. 1988ರ ಫೆ.20ರಂದು ಇವರು ಸರಕಾರಿ ವಾಹನ ಚಾಲಕರಾಗಿ ಸೇವೆಗೆ ಸೇರಿದ್ದರು.
2001ರಿಂದ ಇವರು ಜಿಲ್ಲಾಧಿಕಾರಿಗಳಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳಾಗಿದ್ದ ಗೌರವ್ ಗುಪ್ತ, ಎಸ್.ಆರ್.ಉಮಾಶಂಕರ್, ಶಾಮ್ ಭಟ್, ಶಾಂತರಾಜ್, ವಿ.ಪೊನ್ನುರಾಜ್, ಹೇಮಲತಾ ಪಿ., ಡಾ| ಟಿಎಂ.ರೇಜು, ಡಾ| ಮುದ್ದುಮೋಹನ್, ಎಸ್.ಎಸ್. ಪಟ್ಟಣ ಶೆಟ್ಟಿ, ಡಾ| ವಿಶಾಲ್ ಆರ್., ಟಿ.ವೆಂಕಟೇಶ್, ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಕಾರು ಚಾಲಕರಾಗಿದ್ದರು.
ಮೂಲತಃ ಬೆಳ್ತಂಗಡಿ ಕಣಿಯೂರು ಗ್ರಾಮದವರಾದ ಇವರು ಪ್ರಸ್ತುತ 76ನೇ ಬಡಗಬೆಟ್ಟು ಬೈಲೂರು ಮಹಿಷಮರ್ದಿನಿ ದೇಗುಲದ ಸಮೀಪ ಸ್ವಂತ ಮನೆಯಲ್ಲಿ ನೆಲೆಸಿದ್ದಾರೆ.
ಇವರ ಪತ್ನಿ ವಿಜಯಬಾಯಿ ಅವರು ಆದಿ ಉಡುಪಿ ಅನುದಾನಿತ ಶಾಲೆಯಲ್ಲಿ ಶಿಕ್ಷಕಿ. ಇಬ್ಬರು ಪುತ್ರರು ಇವರಿಗಿದ್ದು, ಹಿರಿಯ ಪುತ್ರ ಕೆ.ಆರ್. ಅಜಯ್ ಅವರು ಇನ್ಫೋಸಿಸ್‌ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಿರಿಯ ಪುತ್ರ ಕೆ.ಆರ್.ಅಕ್ಷಯ್ ಅವರು ಎಂಜಿಎಂ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.