Advertisement
ಅವಳಿನಗರದಲ್ಲಿ ಸಿಎಆರ್ ವಿಭಾಗದ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗಗಳ ಹುದ್ದೆಗಳು ಖಾಲಿ ಆಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯವರು ತಮ್ಮ ಹುದ್ದೆಯೊಂದಿಗೆ ಇವೆರಡು ಹುದ್ದೆಗಳನ್ನೂ ನಿಭಾಯಿಸುತ್ತಿದ್ದಾರೆ. ಅವಳಿ ನಗರದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮನೆಗಳ್ಳತನ, ಸರಗಳ್ಳತನ ಪ್ರಕರಣಗಳು ಹೆಚ್ಚಾಗಿವೆ.
Related Articles
Advertisement
ಇನ್ನು 2014ರಲ್ಲಿ ಕೊಲೆಗೆ ಯತ್ನ 35, 2015ರಲ್ಲಿ 48, 2016ರಲ್ಲಿ 53 ಮತ್ತು 2017ರ ಫೆಬ್ರವರಿವರೆಗೆ 11 ಆಗಿವೆ. ದರೋಡೆಗಳು 2014ರಲ್ಲಿ 4, 2015ರಲ್ಲಿ 3, 2016ರಲ್ಲಿ 9 ಮತ್ತು 2017ರ ಫೆಬ್ರವರಿವರೆಗೆ ಒಂದು ಆಗಿದೆ. ಸರಗಳ್ಳತನವು 2014ರಲ್ಲಿ 49, 2015ರಲ್ಲಿ 29, 2016ರಲ್ಲಿ 77, 2017ರ ಮೇ 20ರವರೆಗೆ ಅಂದಾಜು 20ಕ್ಕೂ ಅಧಿಕವಾಗಿವೆ.
ಅದೇ ರೀತಿ ಇನ್ನಿತರೆ ದರೋಡೆ ಪ್ರಕರಣಗಳು 2014ರಲ್ಲಿ 23, 2015ರಲ್ಲಿ 17, 2016ರಲ್ಲಿ 35, 2017ರ ಫೆಬ್ರವರಿವರೆಗೆ 6 ಆಗಿವೆ. ಹಗಲು ಹೊತ್ತಿನಲ್ಲೆ ಮನೆ ಕೀಲಿ ಮುರಿದು ಕಳ್ಳತನದ ಪ್ರಕರಣಗಳು 2014ರಲ್ಲಿ 22, 2015 ಮತ್ತು 2016ರಲ್ಲಿ ತಲಾ 25, 2017ರ ಫೆಬ್ರವರಿವರೆಗೆ 4 ಹಾಗೂ ರಾತ್ರಿ ಹೊತ್ತಿನಲ್ಲಿ 2014 ಮತ್ತು 2015ರಲ್ಲಿ 119, 2016ರಲ್ಲಿ 122, 2017ರ ಫೆಬ್ರವರಿ ವರೆಗೆ 24 ಆಗಿವೆ.
ಮನೆಗಳ್ಳತನ ಪ್ರಕರಣಗಳು 2014ರಲ್ಲಿ 32, 2015ರಲ್ಲಿ 49, 2016ರಲ್ಲಿ 25, 2017ರ ಫೆಬ್ರವರಿವರೆಗೆ 7 ಆಗಿವೆ. ವಾಹನಗಳ ಕಳ್ಳತನ ಪ್ರಕರಣಗಳು 2014ರಲ್ಲಿ 194, 2015ರಲ್ಲಿ 237, 2016ರಲ್ಲಿ 237, 2017ರ ಫೆಬ್ರವರಿವರೆಗೆ 30 ಹಾಗೂ ದಾ ಕಳ್ಳತನಗಳು 2014ರಲ್ಲಿ 94, 2015ರಲ್ಲಿ 102, 2016ರಲ್ಲಿ 99, 2017ರ ಫೆಬ್ರವರಿ ವರೆಗೆ 15 ಪ್ರಕರಣಗಳು ಆಯುಕ್ತರ ಕಚೇರಿಯ ದಾಖಲಾತಿಗಳ ಪ್ರಕಾರ ಆಗಿವೆ.
ಹು-ಧಾ ಅವಳಿ ನಗರದಲ್ಲಿ ಸರಗಳ್ಳರ ಮತ್ತು ಮನೆಗಳ್ಳರ ಹಾವಳಿ ಹೆಚ್ಚಾಗಿದೆ. ಹಗಲು ಹೊತ್ತಿನಲ್ಲೇ ಈ ಸರಗಳ್ಳರ ತಂಡವು ತಮ್ಮ ಕಾರ್ಯಾಚರಣೆಗೆ ಮುಂದಾಗಿದ್ದು, ಗರ್ಭಿಣಿ ಎಂಬ ಮಾನವೀಯತೆಯನ್ನು ಮರೆತು ತಮ್ಮ ಕೈಚಳಕ ತೋರಿದ್ದಾರೆ. ಮೇ 14ರಂದು ಗೋಕುಲ ರಸ್ತೆ ವಾಸವಿ ನಗರ ಸಮೀಪದ ಕಲ್ಯಾಣ ಮಂಟಪ ಹತ್ತಿರ ಬೈಕ್‌ನಲ್ಲಿ ಬಂದ ಖದೀಮರು ಹಾಡಹಗಲೇ ಮಹಿಳೆಯೊಬ್ಬರ ಸುಮಾರು 145 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಅದರಂತೆ ಮೇ 16ರಂದು ಒಂದೇ ದಿನ ಪ್ರತ್ಯೇಕ ನಾಲ್ಕು ಕಡೆ ಗರ್ಭಿಣಿ ಸೇರಿದಂತೆ ನಾಲ್ವರ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ. ಮೇ ತಿಂಗಳ ಮೊದಲಾರ್ಧದಲ್ಲೇ ಅಂದಾಜು 300ಕ್ಕೂ ಅಧಿಕ ಗ್ರಾಂ ತೂಕವುಳ್ಳ ಮಾಂಗಲ್ಯ ಸರ, ಚಿನ್ನದ ಸರಗಳನ್ನು ಕಳ್ಳರು ದೋಚಿದ್ದಾರೆ. ಆದರೆ ಇದುವರೆಗೂ ಯಾವೊಬ್ಬ ಸರಗಳ್ಳನೂ ಪೊಲೀಸರಿಗೆ ಸಿಕ್ಕಿ ಬಿದ್ದಿಲ್ಲ.
ಹಿರಿಯ ಅಧಿಕಾರಿಗಳ ಹುದ್ದೆಗಳೇ, ಅದರಲ್ಲೂ ಪೊಲೀಸ್ ಆಯುಕ್ತರ ನಂತರದ ಉನ್ನತ ಸ್ಥಾನ ಹೊಂದಿರುವ ಡಿಸಿಪಿ ಹುದ್ದೆಗಳೇ ಖಾಲಿ ಉಳಿದಿವೆ. ಅಪರಾಧ ಮತ್ತು ಸಂಚಾರ ವಿಭಾಗದಂತಹ ಪ್ರಮುಖ ಹುದ್ದೆಯೇ ಖಾಲಿಯಿರುವಾಗ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲು ಹಾಗೂ ಕಳ್ಳರನ್ನು ಹಿಡಿಯಲು ಪೊಲೀಸರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಸರಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಪ್ರಮುಖ ಸ್ಥಾನಗಳ ಹುದ್ದೆಗಳ ಅಧಿಕಾರಿಗಳನ್ನು ಭರ್ತಿ ಮಾಡಲು ಹಿಂದೇಟು ಹಾಕುತ್ತಿರುವಾಗ ಇನ್ನು ಕೆಳ ಹಂತದ ಅಧಿಕಾರಿಗಳು ಹಾಗೂ ಹುದ್ದೆಗಳನ್ನು ತುಂಬಲು ಇನ್ನೆಷ್ಟು ನಿರ್ಲಕ್ಷ ತೋರಲಿಕ್ಕಿಲ್ಲವೆಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಸರಕಾರ-ಜನಪ್ರತಿನಿಧಿಗಳು ಅವಳಿ ನಗರದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ಹತೋಟಿಗೆ ತರಲು ಹಾಗೂ ಸರಗಳ್ಳತನ ಹಾವಳಿ ತಡೆಗಟ್ಟಲು ದಕ್ಷ ಅಧಿಕಾರಿಗಳನ್ನು ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ.
* ಶಿವಶಂಕರ ಕಂಠಿ