Advertisement
ಬೆಳಗಾವಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ, ಹಿರಿಯ ಶಾಸಕ ಉಮೇಶ್ ಕತ್ತಿ ಅವರು ಸಚಿವರಾಗಲಿದ್ದಾರೆ ಎಂಬ ಹೇಳಿಕೆ ನೀಡಿ ಮೂಲ ಬಿಜೆಪಿಯವರಿಗೂ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ಮೂಡಿಸಿದ್ದಾರೆ. ಹೊಸದಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಇಲ್ಲ ಎಂದು ಹೇಳುವ ಮೂಲಕ ಆ ಸ್ಥಾನದ ಆಕಾಂಕ್ಷಿಗಳಾದ ರಮೇಶ್ ಜಾರಕಿ ಹೊಳಿ, ಬಿ. ಶ್ರೀರಾಮುಲು ಅವರು ಉಪ ಮುಖ್ಯಮಂತ್ರಿ ಸ್ಥಾನದ ಆಸೆ ಕೈಬಿಡುವುದು ಸೂಕ್ತ ಎಂಬ ಸಂದೇಶ ನೀಡಿದ್ದಾರೆ. ಜತೆಗೆ ಹಾಲಿ ಮೂರು ಉಪಮುಖ್ಯಮಂತ್ರಿ ಸ್ಥಾನವನ್ನು ಹಿಂಪಡೆಯುವ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡಲಾಗುವುದು. ವರಿಷ್ಠರು ಬಯಸಿದರೆ ಒಂದಿಬ್ಬರನ್ನು ಕೈಬಿಡಬಹುದು ಎಂಬ ಸೂಚನೆ ನೀಡಿದ್ದಾರೆ. ಮೊದಲಿಗೆ ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಸ್ಪಷ್ಟಪಡಿಸಿದ ಯಡಿಯೂರಪ್ಪ ಈಗ ಉಪಚುನಾವಣೆಯಲ್ಲಿ ಗೆದ್ದವರ ಪೈಕಿ ಕೆಲವರಿಗೆ ಸಚಿವಗಿರಿ ಅನುಮಾನ ಎಂಬು ದನ್ನೂ ಖಾತರಿಪಡಿಸಿದಂತಿದೆ. ಕೊನೆಗೂ ಸಿಎಂ ಗುರುವಾರ ದಿಲ್ಲಿ ಪ್ರವಾಸಕ್ಕೆ ಅಣಿಯಾಗುವ ಮೂಲಕ ಸಂಪುಟ ವಿಸ್ತರಣೆ ಕಸರತ್ತು ನಿರ್ಣಾಯಕ ಹಂತ ತಲುಪಿದಂತಿದೆ. ವರಿಷ್ಠರ ಒಪ್ಪಿಗೆ ಸಿಕ್ಕಿದರೆ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ. ಶುಕ್ರವಾರ ದಿಲ್ಲಿಯಿಂದ ಬೆಂಗಳೂರಿಗೆ ಹಿಂದಿರುಗುವ ಸಾಧ್ಯತೆ ಇದೆ. ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮೊದಲ ಬಾರಿಗೆ ಯಡಿಯೂರಪ್ಪ ಅವರು ದಿಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗುವ ಕುತೂಹಲ ಮೂಡಿದೆ.
Related Articles
ಗುರುವಾರ ದಿಲ್ಲಿಗೆ ತೆರಳಿ ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ , ಶಾ ಅವರನ್ನು ಭೇಟಿಯಾಗಿ ಚರ್ಚಿಸಲಾಗುವುದು. ಇನ್ನು 2-3 ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು. ವರಿಷ್ಠರ ಜತೆಗೆ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.
Advertisement
ಯಡಿಯೂರಪ್ಪ ಅವರು ಗುರು ವಾರ ಬೆಳಗ್ಗೆ 11.45ಕ್ಕೆ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದು, ಅಪರಾಹ್ನ 2.45ಕ್ಕೆ ತಲುಪುವ ಸಾಧ್ಯತೆ ಇದೆ. ಅನಂತರ ವರಿಷ್ಠರ ಭೇಟಿಗೆ ಮುಂದಾಗ ಬಹುದು. ಕೇಂದ್ರ ಬಜೆಟ್ ಫೆ. 1ಕ್ಕೆ ಮಂಡನೆಯಾಗಲಿರುವುದರಿಂದ ಕೇಂದ್ರ ಸಚಿವರು ಕೂಡ ಬಜೆಟ್ ಸಿದ್ಧತಾ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಇನ್ನೊಂದೆಡೆ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರು ತೊಡಗಿಸಿಕೊಂಡಿದ್ದಾರೆ. ಈ ವೇಳೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ಸಾಧ್ಯವೇ ಎಂಬ ಕುತೂಹಲವೂ ಮೂಡಿದೆ.
ಗೆದ್ದವರಿಗೆ ಸ್ಥಾನ: ವಿರೋಧವಿಲ್ಲ !ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿಗಳು ವರಿಷ್ಠರೊಂದಿಗೆ ಚರ್ಚೆ ನಡೆಸಿರುವ ಸಾಧ್ಯತೆ ಬಹಳ ಕಡಿಮೆ. ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ವರಿಷ್ಠರಿಂದ ಯಾವುದೇ ರೀತಿಯ ಆಕ್ಷೇಪವಿದ್ದಂತಿಲ್ಲ. ಗೆದ್ದ 11 ಮಂದಿಗೂ ಸಚಿವ ಸ್ಥಾನ ನೀಡಬಹುದು. ಅವಕಾಶವಿದ್ದರೆ ಒಂದಿಬ್ಬರ ಮನವೊಲಿಸಿ ಅವರಿಗೆ ಪ್ರಮುಖ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸುವ ಬಗ್ಗೆ ಚಿಂತಿಸಬಹುದು. ಆ ಸ್ಥಾನಗಳನ್ನು ಮೂಲ ಬಿಜೆಪಿಗರಿಗೆ ನೀಡಿ ಸಮತೋಲನ ಸಾಧಿಸಲು ಪ್ರಯತ್ನಿಸಬಹುದು ಎಂಬ ಸಂದೇಶ ನೀಡಿದ್ದರು. ಅದರಂತೆ ಪಟ್ಟಿ ಸಿದ್ಧಪಡಿಸಿಕೊಂಡು ಸಲ್ಲಿಸಿದರೆ ವರಿಷ್ಠರು ಪರಿಗಣಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಿಲ್ಲಿ ಚುನಾವಣೆ ಬಳಿಕ ವಿಸ್ತರಣೆ
ಈ ಮಧ್ಯೆ ಶಾಸಕ ನಾರಾಯಣಗೌಡ, ದಿಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ವರಿಷ್ಠರು ನಿರತರಾಗಿದ್ದು, ಅದು ಪೂರ್ಣಗೊಂಡ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ವಿಧಾನಸೌಧದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ಸದ್ಯದಲ್ಲೇ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದ್ದು, ಬಿಜೆಪಿಗೆ ಬಂದ 17 ಮಂದಿಗೂ ಒಳ್ಳೆಯದೇ ಆಗಲಿದೆ. ಸಂಪುಟ ವಿಸ್ತರಣೆ ವಿಳಂಬಕ್ಕೆ ನಾನಾ ಕಾರಣಗಳಿವೆ. ಮೊದಲಿಗೆ ಸಂಕ್ರಾಂತಿ ಹಬ್ಬ ಎದುರಾಯಿತು. ಅನಂತರ ದಿಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಚುನಾವಣೆ ಬಳಿಕ ಯಡಿಯೂರಪ್ಪ ಅವರು ದಿಲ್ಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.