ಅಥಣಿ: ಪಟ್ಟಣದ 23 ವಾರ್ಡ್‌ಗಳಲ್ಲಿರುವ ಬಿಪಿಎಲ್ ಕುಟುಂಬದವರಿಗೆ (ಸುಮಾರು 25 ಸಾವಿರ ಕುಟುಂಬಗಳು) 4 ಸಾವಿರ ಕ್ವಿಂಟಲ್ ಆಹಾರ ಧಾನ್ಯ (ಜೋಳ ಹಾಗೂ ಗೋಧಿ) ವಿತರಿಸುವ ಮೂಲಕ ಮತ್ತೂಮ್ಮೆ ಡಿಸಿಎಂ ಲಕ್ಷ್ಮಣ ಸವದಿ ಮಾನವೀಯತೆ ಮೆರೆದಿದ್ದಾರೆ.
ಹೌದು, ಕಳೆದ ವರ್ಷ ಕೃಷ್ಣೆಗೆ ಪ್ರವಾಹ ಬಂದಾಗ ತಮ್ಮ ಜೀವದ ಹಂಗು ತೊರೆದು ಅಥಣಿ ಕ್ಷೇತ್ರದ ನದಿ ತೀರದ ಜನರನ್ನು ಪ್ರವಾಹದ ದವಡೆಯಿಂದ ಪಾರು ಮಾಡುವುದರ ಜೊತೆಗೆ ಅವರಿಗೆ ಅನ್ನ, ಬಟ್ಟೆ, ಹೊದಿಕೆ ನೀಡಿ ಅವರ ಬೆನ್ನಿಗೆ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ನಿಂತಿದ್ದರು. ಈಗ ಮಹಾಮಾರಿ ರೋಗ ಆವರಿಸಿದ್ದು, ಈಗಲೂ ಸಹ ಬಡವರಿಗೆ ಆಶ್ರಯದಾತರಾಗಿ ಆತ್ಮಬಲ ತುಂಬುತ್ತಿದ್ದಾರೆ.
ಕಳೆದ ಒಂದು ತಿಂಗಳು ಕೋವಿಡ್ 19 ದಿಂದ ಲಾಕ್‌ಡೌನ್ ಆದಾಗಿನಿಂದ ಜನರಿಗೆ ದುಡಿಯಲು ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದಾರೆ. ಹೀಗಾಗಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುಪುತ್ರ ಚಿದಾನಂದ ಸವದಿ ನೇತೃತ್ವದಲ್ಲಿ ಬಿಪಿಎಲ್ ಕುಟುಂಬವೊಂದಕ್ಕೆ 5 ಕೆಜಿ ಗೋಧಿ, 5 ಕೆಜಿ ಜೋಳವನ್ನು ಕಳೆದ ಐದು ದಿನಗಳಿಂದ ಉಚಿತವಾಗಿ ವಿತರಿಸಲಾಗುತ್ತಿದೆ.
ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಘೋಷಣೆ ಆದ ನಂತರ ಕೂಲಿಕಾರರು ಮತ್ತು ಬಡವರು ನಿತ್ಯದ ಜೀವನ ನಡೆಸುವುದು ದುಸ್ತರವಾಗಿತ್ತು. ಇದನ್ನರಿತ ಡಿಸಿಎಂ ಲಕ್ಷ್ಮಣ ಸವದಿಯವರು ಅಥಣಿ ಪಟ್ಟಣದ 23 ವಾರ್ಡ್‌ಗಳಲ್ಲಿ ಸತ್ಯ ಸಂಗಮ್ ಗ್ರಾಮ ವಿಕಾಸ ಪ್ರತಿಷ್ಠಾನದ ವತಿಯಿಂದ ಬಡ ಮತ್ತು ಅರ್ಹ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಿದ್ದಾರೆ.
ಧಾನ್ಯ ವಿತರಣೆ ಕಾರ್ಯದಲ್ಲಿ ಸತ್ಯ ಸಂಗಮ್ ಗ್ರಾಮ ವಿಕಾಸ ಪ್ರತಿಷ್ಠಾನದ ಶಿವಕುಮಾರ ಸವದಿ, ಶಿವಾನಂದ ಸವದಿ, ಸುಮಿತ್ ಸವದಿ, ನ್ಯಾಯವಾದಿಗಳಾದ ಸುಶೀಲಕುಮಾರ ಪತ್ತಾರ, ಎ.ಎಂ. ಖೋಬ್ರಿ, ಪಂಚಯ್ಯ ಅಳ್ಳಿಮಟ್ಟಿ, ಬಾಹುಬಲಿ ಕಡೋಲಿ, ಪ್ರದೀಪ ನಂದಗಾಂವ, ವಿಕಾಸ ತಾಂಬಟ ಸೇರಿದಂತೆ ಅನೇಕರು ತೊಡಗಿಕೊಂಡಿದ್ದಾರೆ.
ಕೋವಿಡ್ 19 ವೈರಸ್ ಹರಡುವ ಭೀತಿಯಿಂದ ದೇಶವೇ ಲಾಕ್‌ಡೌನ್ ಆಗಿದ್ದ ಈ ವೇಳೆ ನನ್ನ ಕ್ಷೇತ್ರದ ಜನ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಬಡವರಿಗೆ, ಕೃಷಿ ಕೂಲಿಕಾರರಿಗೆ ಯಾವುದೇ ರೀತಿಯ ಕೊರತೆ ಅನುಭವಿಸಬಾರದು. ಈ ಹಿತದೃಷ್ಟಿಯಿಂದ ಆಹಾರ ಧಾನ್ಯ ವಿತರಿಸುವುದರ ಮೂಲಕ ಅವರ ಸೇವೆ ಮಾಡುತ್ತಿದ್ದೇವೆ. –
ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ
ಸಂಕಷ್ಟ ಕಾಲದಲ್ಲಿ ಬಡವರ ಸೇವೆ ಮಾಡುವುದೆಂದರೆ ಅದು ಭಗವಂತನ ಸೇವೆ ಮಾಡಿದಂತೆ. ಅವರ ಪ್ರೀತಿ ವಿಶ್ವಾಸದ ಹರಕೆಯಿಂದಲೇ ಲಕ್ಷ್ಮಣ ಸವದಿಯವರು ಇಷ್ಟೊಂದು ಉನ್ನತ ಹುದ್ದೆಗೆ ಹೋಗಿದ್ದಾರೆ. ಅದಕ್ಕಾಗಿ ಜನತೆಗೋಸ್ಕರ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. –
ಚಿದಾನಂದ ಸವದಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವ ಮೋರ್ಚಾಧ್ಯಕ್ಷ
–ಸಂತೋಷ ರಾ ಬಡಕಂಬಿ