Advertisement

ಡಿಸಿಎಂ ಪ್ರಸ್ತಾಪ: ನಾಯಕರಲ್ಲಿ ತಳಮಳ

11:26 PM Aug 25, 2019 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲೀಗ ಉಪಮುಖ್ಯಮಂತ್ರಿ ಹುದ್ದೆಯ ಚರ್ಚೆ ಗಂಭೀರ ಸ್ವರೂಪಕ್ಕೆ ಹೋಗಿದ್ದು, ಹೊಸಬರಿಗೆ ಅಥವಾ ಶಾಸಕರಲ್ಲದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಪಕ್ಷದೊಳಗೆ ಅಸಮಾಧಾನ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನವಾಗಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಿದೆ. ಸರ್ಕಾರ ರಚನೆಯಾಗಿ, ಬಹುಮತ ಸಾಬೀತು ಮಾಡಿಯಾಗಿದೆ.

Advertisement

ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆಡಳಿತ ಯಂತ್ರದ ಸಮರ್ಥ ನಿರ್ವಹಣೆಗೆ ಮುಖ್ಯಮಂತ್ರಿಗಳಿದ್ದಾರೆ. ಹೀಗಿರುವಾಗ, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಅಗತ್ಯವೇನಿದೆ ಎಂದು ಕೆಲವು ಶಾಸಕರು ಬಿಜೆಪಿ ಮುಖಂಡರ ಬಳಿ ಹೇಳಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು, ಉಪಮುಖ್ಯಮಂತ್ರಿ ಹುದ್ದೆಯನ್ನು ಅಗತ್ಯವಾಗಿ ಸೃಷ್ಟಿಸಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.

ಭವಿಷ್ಯದಲ್ಲಿ ಗೊಂದಲ ಸೃಷ್ಟಿ: ಸಮುದಾಯದ ಆಧಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ನೀಡುವುದಾದರೆ ಭವಿಷ್ಯದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಹಿಂದಿನ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದವರನ್ನೇ ಮತ್ತೆ ಉಪಮುಖ್ಯಮಂತ್ರಿ ಮಾಡಿದರೆ ಇದರಿಂದಲೂ ಸಾಕಷ್ಟು ಅಸಮಾಧಾನ ಭುಗಿಲೇಳಲಿದೆ. ಅಲ್ಲದೆ, ಹಿರಿಯರನ್ನು ಬಿಟ್ಟು, ಹೊಸಬರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದರೆ, ಅನುಭವಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಹೊಸ ಆರೋಪಕ್ಕೆ ಸರ್ಕಾರ ಗುರಿಯಾಗುವ ಸಾಧ್ಯತೆಯೂ ಇದೆ. ಒಟ್ಟಾರೆಯಾಗಿ ಉಪಮುಖ್ಯಮಂತ್ರಿ ಹುದ್ದೆ, ಬಿಜೆಪಿ ಸರ್ಕಾರದಲ್ಲೀಗ ಹಲವು ರೀತಿಯಲ್ಲಿ ಚರ್ಚೆಗೆ ಕಾರಣವಾಗಿದೆ.

ಅಶ್ವಥ್‌ ನಾರಾಯಣ ವರ್ಸಸ್‌ ಆರ್‌.ಅಶೋಕ್‌: ಒಕ್ಕಲಿಗ ಸಮುದಾಯದಿಂದ ಮಲ್ಲೇಶ್ವರದ ಶಾಸಕ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ ಅವರ ಹೆಸರು ಡಿಸಿಎಂ ಹುದ್ದೆಗೆ ಕೇಳಿ ಬಂದಿದೆ. ಆಗ ಅದೇ ಸಮುದಾಯದ ಬೆಂಗಳೂರಿನ ಶಾಸಕ ಆರ್‌.ಅಶೋಕ್‌ ಅವರನ್ನು ಕಡೆಗಣಿಸಿದಂತಾಗುತ್ತದೆ. ಅಶ್ವಥ್‌ ನಾರಾಯಣ ಅವರು ಪಕ್ಷ ನಿಷ್ಠರು ಹಾಗೂ ಸಂಘದ ಹಿರಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗೆಯೇ ಆರ್‌.ಅಶೋಕ್‌ ಅವರು ಕೂಡ ಪಕ್ಷದ ಕಟ್ಟಾಳು. ಬೆಂಗಳೂರಿನಲ್ಲಿ ಪಕ್ಷವನ್ನು ಬಲಪಡಿಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೀಗಾಗಿ, ಒಂದೇ ಸಮುದಾಯದಲ್ಲಿ ಹಿರಿಯರು ಮತ್ತು ಕಿರಿಯರ ನಡುವೆ ಕಿತ್ತಾಟ ಆರಂಭವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಉಪಮುಖ್ಯಮಂತ್ರಿ ಹುದ್ದೆಯನ್ನು ಗೋವಿಂದ ಕಾರಜೋಳ ಅವರಿಗೆ ನೀಡುವುದಕ್ಕೆ ಬಹುತೇಕರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಲಕ್ಷ್ಮಣ್‌ ಸವದಿಯವರಿಗೆ ಈ ಹುದ್ದೆ ನೀಡಬಾರದು ಎಂದು ಅನೇಕ ಶಾಸಕರು ಹಠಕ್ಕೆ ಬಿದ್ದಿದ್ದಾರೆ. ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿಯಾಗಿರುವಾಗ ಉಪಮುಖ್ಯಮಂತ್ರಿ ಸ್ಥಾನವನ್ನು ಅದೇ ಸಮುದಾಯಕ್ಕೆ ನೀಡುವುದು ಬೇಡ ಮತ್ತು ಅನುಭವಿ ಶಾಸಕರು, ವಿಧಾನ ಪರಿಷತ್‌ ಸದಸ್ಯರಿರುವಾಗ ಲಕ್ಷ್ಮಣ್‌ ಸವದಿಯವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ತರವಲ್ಲ ಎಂದು ಅನೇಕ ಶಾಸಕರು ಮುಖಂಡರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Advertisement

ಹಿಂದುಳಿದ ಸಮುದಾಯದಿಂದ ಯಾರು?: ಹಿಂದುಳಿದ ಸಮುದಾಯದಿಂದ ಯಾರನ್ನು ಉಪಮುಖ್ಯಮಂತ್ರಿ ಮಾಡುತ್ತಾರೆಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೆ.ಎಸ್‌.ಈಶ್ವರಪ್ಪ ಉಪಮುಖ್ಯಮಂತ್ರಿಯಾಗಿದ್ದರು. ಮತ್ತೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಅನುಮಾನ. ಆದರೆ, ಅದೇ ಸಮುದಾಯದ ಬೇರೆ ನಾಯಕರು ರೇಸ್‌ನಲ್ಲಿದ್ದಾರೆಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಉಪಮುಖ್ಯಮಂತ್ರಿ ಹುದ್ದೆ ಬಿಜೆಪಿಗೀಗ ನುಂಗಲಾರದ ತುತ್ತಾಗಿದೆ. ಅದರಲ್ಲೂ ಶಾಸಕರಲ್ಲದವರಿಗೆ ಈ ಹುದ್ದೆ ನೀಡಿದರೆ ಇನ್ನಷ್ಟು ಅಸಮಾಧಾನ ಭುಗಿಲೇಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಯಾವುದೇ ಜವಾಬ್ದಾರಿ ನಿರ್ವಹಿಸಲು ಸಿದ್ಧ
ಶಿವಮೊಗ್ಗ: “ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಹುದ್ದೆ ನೀಡಿದರೆ ಬೇಡ ಅನ್ನುವುದಿಲ್ಲ. ಹಿರಿಯರು ಯಾವ ಜವಾಬ್ದಾರಿ ವಹಿಸಿದರೂ ನಿರ್ವಹಿಸುತ್ತೇನೆ’ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಖಾತೆ ಹಂಚಿಕೆ ವಿಚಾರವಾಗಿ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ನಾನು ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿದ್ದು, ಹಿರಿಯರು ಯಾವುದೇ ಖಾತೆ ಕೊಟ್ಟರೂ ಅದನ್ನು ನಿರ್ವಹಿಸುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದೆರಡು ದಿನದೊಳಗೆ ಖಾತೆ ಹಂಚಿಕೆ ಕುರಿತು ತೀರ್ಮಾನಿಸುವುದಾಗಿ ತಿಳಿಸಿದ್ದಾರೆ. ಅದರಂತೆ ಆಗಲಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next