Advertisement

ಡಿಸಿಎಂ ಸ್ಥಾನ: ಬಹಿರಂಗ ಹೇಳಿಕೆ ಬೇಡ

11:15 PM Dec 17, 2019 | Lakshmi GovindaRaj |

ಬೆಂಗಳೂರು: ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನಗಳ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಪಕ್ಷ ನಿರ್ಣಯ ಮಾಡಿದೆ. ಈ ಹುದ್ದೆ ಬೇಕೋ? ಬೇಡವೋ? ಎಂಬ ಬಗ್ಗೆ ಅವರೇ ನಿರ್ಧರಿಸುತ್ತಾರೆ. ಹೀಗಾಗಿ, ಈ ಬಗ್ಗೆ ಶಾಸ ಕರು ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

Advertisement

ಜ್ಞಾನಜ್ಯೋತಿ ಸಭಾಂಗಣ ದಲ್ಲಿ ನಡೆದ ಐಟಿ-ಬಿಟಿ ಇಲಾಖೆಯ ಕಾರ್ಯಕ್ರಮದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ ಸಮರ್ಥ ಮುಖ್ಯಮಂತ್ರಿ ಇರುವಾಗ ಉಪ ಮುಖ್ಯಮಂತ್ರಿಗಳ ಅವಶ್ಯಕತೆಯಿಲ್ಲ ಎಂಬ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಎಷ್ಟು ಜನ ಉಪ ಮುಖ್ಯಮಂತ್ರಿಗಳಿರಬೇಕು ಎಂದು ಪಕ್ಷ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಣಯ ಮಾಡಿದ್ದಾರೆ.

ಈ ನಿರ್ಣಯದ ಬಗ್ಗೆ ಯಾರೇ ಹೇಳಿಕೆ ನೀಡಿದರೂ ಅದು ನಮ್ಮ ಪಕ್ಷ ಮತ್ತು ಮುಖ್ಯಮಂತ್ರಿ ವಿರುದ್ಧ ನೀಡಿದ ಹೇಳಿಕೆಯಾಗುತ್ತದೆ ಎಂದು ಕಿಡಿಕಾರಿದರು. ರಾಜ್ಯಕ್ಕೆ ಉಪ ಮುಖ್ಯಮಂತ್ರಿಗಳ ಅವಶ್ಯಕತೆಯಿದೆ ಎಂಬುದನ್ನು ಅರಿತು ಈ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ರಾಜಕಾರಣದಲ್ಲಿ ಯಾರಿಗೆ, ಎಂತಹ ಅವಕಾಶಗಳಾದರೂ ದೊರಕಬಹುದು. ಹೀಗಾಗಿ, ಮುಖ್ಯಮಂತ್ರಿಯವರು ನನ್ನ ಮೇಲೆ ನಂಬಿಕೆಯಿಟ್ಟು ಉಪ ಮುಖ್ಯಮಂತ್ರಿ ಸ್ಥಾನ ನೀಡಿದ್ದಾರೆ.

ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಅವರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದರು. ಯಾರ್ಯಾರಿಗೆ ಮಂತ್ರಿ ಪದವಿ ನೀಡಲಾಗುತ್ತದೆ ಎಂದು ಈಗಾಗಲೇ ಮುಖ್ಯಮಂತ್ರಿ ಘೋಷಿಸಿದ್ದಾರೆ. ಈ ಬಗ್ಗೆ ಆಶ್ಚರ್ಯಪಡುವ ಅಗತ್ಯವಿಲ್ಲ. ಮುಂದೆ ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದೂ ಸಹ ಅವರೇ ನಿರ್ಧರಿಸುತ್ತಾರೆ. ಸಚಿವ ಸಂಪುಟ ಪುನರ್‌ ರಚನೆ ಅಥವಾ ವಿಸ್ತರಣೆ ಮುಖ್ಯಮಂತ್ರಿಯವರಿಗೆ ಬಿಟ್ಟದ್ದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next