Advertisement

ಬೇರಿಂಗ್‌ ಬದಲಿಸಲು ಡಿಸಿಎಂ ಸೂಚನೆ

12:10 PM Dec 16, 2018 | Team Udayavani |

ಬೆಂಗಳೂರು: “ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿಯ ಕಾಂಕ್ರೀಟ್‌ ಶಿಥಿಲಗೊಂಡ ಡಯಾಫ್ರೆàಮ್‌ ಕೆಳಭಾಗದ ಬೇರಿಂಗ್‌ ಬದಲಿಸಲು ಸೂಚನೆ ನೀಡಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Advertisement

ಸ್ಥಳ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, “ನಮ್ಮ ಮೆಟ್ರೋ ಅತ್ಯಂತ ಸುರಕ್ಷಿತವಾಗಿದೆ. ಕಂಬದಲ್ಲಿ ಯಾವುದೇ ದೋಷ ಇಲ್ಲ. ಬೀಮ್‌ನಲ್ಲಿ ಹಾಕಿದ ಕಾಂಕ್ರೀಟ್‌ ಶಿಥಿಲಗೊಂಡಿದ್ದರಿಂದ ಸ್ವಲ್ಪ ಜರುಗಿದೆ. ಅದರ ಭಾರ ಬೇರಿಂಗ್‌ ಮೇಲೆ ಬಿದ್ದಿದೆ.

ಆ ಬೇರಿಂಗ್‌ ರಿಪೇರಿ ಮಾಡುವುದು ಬೇಡ. ಬದಲಾಯಿಸಿಬಿಡಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಸೂಚಿಸಿದ್ದೇನೆ ಎಂದು ಹೇಳಿದರು. ಕಂಬದ ಮೇಲೆ ಬೇರಿಂಗ್‌ ಹಾಕಿ, ಬೀಮ್‌ ಅನ್ನು ಅಳವಡಿಸಿರುತ್ತಾರೆ. ಕಾಂಕ್ರೀಟ್‌ ಶಿಥಿಲಗೊಂಡಿದ್ದರಿಂದ ಬೇರಿಂಗ್‌ ಜರುಗಿದ್ದು, ಎಂದಿನಂತೆ ಪರಿಶೀಲನೆ ನಡೆಸುವಾಗ ಸಿಬ್ಬಂದಿಯ ಕಣ್ಣಿಗೆ ಬಿದ್ದಿದೆ ಎಂದರು.

ತಜ್ಞರ ಅಭಿಪ್ರಾಯ ಆಧರಿಸಿ ಕ್ರಮ: ಇನ್ನು ಮೆಟ್ರೋ ಬೀಮ್‌ನಲ್ಲಿ ಕಾಣಿಸಿಕೊಂಡ ಜೇನುಗೂಡು ಮಾದರಿಯ ಶಿಥಿಲ ಕಾಂಕ್ರೀಟ್‌ ದುರಸ್ತಿಗೆ ಈಗಾಗಲೇ ದೆಹಲಿ ಮೆಟ್ರೋ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಶನಿವಾರದಿಂದ ದುರಸ್ತಿ ಕಾರ್ಯ ಆರಂಭವಾಗಲಿದೆ. ಅಲ್ಲದೆ, ಈ ಸಮಸ್ಯೆ ಯಾವಾಗ ಕಾಣಿಸಿಕೊಂಡಿದೆ ಎಂಬುದನ್ನೂ ತಜ್ಞರು ತಿಳಿಸಲಿದ್ದಾರೆ. ಅದನ್ನು ಆಧರಿಸಿ, ಆ ಅವಧಿಯಲ್ಲಿದ್ದ ಗುತ್ತಿಗೆದಾರರು ಅಥವಾ ಇಂಜಿನಿಯರ್‌ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
 
ಟ್ರಿನಿಟಿ ನಿಲ್ದಾಣದಲ್ಲಿರುವಂತೆ ಮೆಟ್ರೋ ಮೊದಲ ಹಂತದ ಮಾರ್ಗದಲ್ಲಿ ಬಹುತೇಕ ಕಡೆ “ಶಾರ್ಟ್‌ ಸ್ಪ್ಯಾನ್‌’ (ಸಣ್ಣ ವಯಾಡಕ್ಟ್ಗಳು) ಕಂಡುಬರುತ್ತವೆ. ಅಲ್ಲೆಲ್ಲಾ ಇದೇ ರೀತಿಯ ಬೀಮ್‌ಗಳನ್ನು ಅಳವಡಿಸಲಾಗಿದ್ದು, ಅವೆಲ್ಲವುಗಳನ್ನೂ ಪರಿಶೀಲನೆಗೆ ಒಳಪಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದೂ ಡಾ.ಪರಮೇಶ್ವರ್‌ ತಿಳಿಸಿದರು.

Advertisement

ಇದಕ್ಕೂ ಮೊದಲು ಹಲಸೂರಿನಿಂದ ಟ್ರಿನಿಟಿ ವೃತ್ತದವರೆಗೆ ಮೆಟ್ರೋ ರೈಲಿನಲ್ಲಿ ಬಂದಿಳಿದ ಸಚಿವರು, ದೋಷ ಕಂಡುಬಂದ ಜಾಗವನ್ನು ಪರಿಶೀಲಿಸಿದರು. ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮೆಟ್ರೋದಲ್ಲೇ ಪ್ರಯಾಣಿಸಿದ ಸಚಿವ ಡಾ.ಜಿ.ಪರಮೇಶ್ವರ್‌: ಮೆಟ್ರೋ ಅಸುರಕ್ಷಿತ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಖುದ್ದು ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ ಅವರು ಶನಿವಾರ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.

ಬೆಳಗ್ಗೆ 10 ಗಂಟೆಗೆ ವಿಧಾನಸೌಧ ನಿಲ್ದಾಣದಿಂದ ಬಿಎಂಆರ್‌ಸಿ ಅಧಿಕಾರಿಗಳೊಂದಿಗೆ ಮೆಟ್ರೋ ಏರಿದ ಅವರು, ಬೀಮ್‌ನಲ್ಲಿ ದೋಷ ಕಾಣಿಸಿಕೊಂಡ ಮಾರ್ಗ ಟ್ರಿನಿಟಿ ನಿಲ್ದಾಣದ ಮೂಲಕ ಹಲಸೂರು ತಲುಪಿದರು. ಮತ್ತೆ ಟ್ರಿನಿಟಿ ವೃತ್ತಕ್ಕೆ ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿದರು. ಮಾರ್ಗ ಮಧ್ಯೆ ಪ್ರಯಾಣಿಕರಿಂದ ಅಭಿಪ್ರಾಯ ಸಂಗ್ರಹಿಸಿದರು.

ಪ್ರಯಾಣದ ವೇಳೆ ಪ್ರಯಾಣಕರೊಬ್ಬರ ಜತೆ ಮಾತಿಗಿಳಿದಾಗ, “ಬಸ್‌ಗಿಂತ ಮೆಟ್ರೋ ರೈಲು ಉತ್ತಮವಾಗಿದೆ. ಸಂಚಾರ ದಟ್ಟಣೆ ಕಿರಿಕಿರಿ ಇರುವುದಿಲ್ಲ. ಯಾವುದೇ ಸಮಸ್ಯೆ ಇಲ್ಲ’ ಎಂದರು. “ಏನಾದರೂ ಸಮಸ್ಯೆಯಾದರೆ ನಾನೇ ಇರುತ್ತೇನೆ. ಆತಂಕಪಡುವ ಅಗತ್ಯವಿಲ್ಲ’ ಎಂದು ಸಚಿವರು ಭರವಸೆ ನೀಡಿದರು. 

ಸಗಟು ತ್ಯಾಜ್ಯ ಪ್ರತ್ಯೇಕ – ಸೂಚನೆ: ಸಗಟು ತ್ಯಾಜ್ಯ ಉತ್ಪಾದಕರನ್ನು ಪ್ರತ್ಯೇಕಗೊಳಿಸಲು ಈಗಾಗಲೇ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಡಾ.ಜಿ.ಪರಮೇಶ್ವರ ತಿಳಿಸಿದರು. ಸಾಮಾನ್ಯ ತ್ಯಾಜ್ಯಗಳೊಂದಿಗೆ ವಾಣಿಜ್ಯ ತ್ಯಾಜ್ಯ ಸೇರಿಕೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈಗಾಗಲೇ ಕಡ್ಡಾಯವಾಗಿ ಪ್ರತ್ಯೇಕಗೊಳಿಸಲು ನಿರ್ದೇಶನ ನೀಡಲಾಗಿದೆ. ಅಲ್ಲದೆ, ಎಲ್ಲಿ ಹೆಚ್ಚು ಉತ್ಪಾದನೆ ಆಗುತ್ತಿದೆಯೋ ಅದನ್ನು ನಿಯಮಿತವಾಗಿ ಪರಿಶೀಲಿಸುವಂತೆ ಸೂಚಿಸಲಾಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next