Advertisement
ಟಿಪ್ಪು ಜಯಂತಿ ಸಂಬಂಧ ಸೋಮವಾರ ವಿಧಾನಸೌಧದಲ್ಲಿ ಡಿಜಿಪಿ ನೀಲಮಣಿರಾಜು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ನವೆಂಬರ್ 10ರಂದು ಕಾರ್ಯಕ್ರಮ ಸಭಾಂಗಣದಲ್ಲಿ ಮಾತ್ರ ನಡೆಯಬೇಕು. ಯಾವುದೇ ರೀತಿಯ ಬ್ಯಾನರ್ ಹಾಕುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಟಿಪ್ಪು ಅವಹೇಳನ ಮಾಡಿದರೆ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು. ಜತೆಗೆ ಈ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಉಗ್ರ ಪ್ರತಿಭಟನೆ ನಡೆಸಬಹುದಾಗಿದ್ದು, ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು ಎಂದೂ ಸೂಚನೆ ನೀಡಿದ್ದಾರೆ.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಟಿಪ್ಪು ಜಯಂತಿ ವಿಧಾನಸೌಧ ಬಾಂಕ್ವೆಟ್ ಸಭಾಂಗಣದ ಬದಲು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದರು. ಟಿಪ್ಪು ಜಯಂತಿ ಸಂದರ್ಭದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಘಟನೆಗಳು ಮರೆಯುವಂತಿಲ್ಲ. ಹೀಗಾಗಿ, ನ.10 ರಂದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಕೋಮು ಗಲಭೆ ಮತ್ತಿತರ ಘಟನೆಗಳು ನಡೆದರೆ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಠಾಣೆ ಇನ್ಸ್‌ಪೆಕ್ಟರ್‌ಗಳೇ ಹೊಣೆಯಾಗುತ್ತಾರೆ ಎಂದು ತಿಳಿಸಿದರು. ಬಿಜೆಪಿ ನಾಯಕರು ಕಳೆದ ಒಂದು ವಾರದಿಂದ ಟಿಪ್ಪು ಜಯಂತಿ ವಿಚಾರದಲ್ಲಿ ಜನರನ್ನು ಪ್ರಚೋದಿಸುವ ಹೇಳಿಕೆ ಕೊಡುತ್ತಿದ್ದಾರೆ. ಹೀಗಾಗಿ, ಪ್ರತಿ ಜಿಲ್ಲೆಯಲ್ಲೂ ಕಟ್ಟೆಚ್ಚರ ಅಗತ್ಯ ಎಂದು ಹೇಳಿದರು. ಟಿಪ್ಪು ಜಯಂತಿ ಆಚರಣೆ ಸಂಬಂಧ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಣ ಸಹ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
Related Articles
Advertisement
ಹಿಂದೆ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಮಾಡಿದ್ದಾಗ ಕುಮಾರಸ್ವಾಮಿ ವಿರೋಧ ಮಾಡಿದ್ದ ಬಗ್ಗೆ ಪ್ರತಿಕ್ರಿಯಿಸಿ, ಇದು ಸಮ್ಮಿಶ್ರ ಸರ್ಕಾರ. ಮಾತುಕತೆಯಂತೆ ಹಿಂದಿನ ಸಮ್ಮಿಶ್ರ ಸರ್ಕಾರದ ಎಲ್ಲ ಕಾರ್ಯಕ್ರಮ ಮುಂದುವರಿಸಲಾಗಿದೆ. ಹೀಗಾಗಿ, ಸಮ್ಮಿಶ್ರ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸಲಾಗುವುದು ಎಂದು ತಿಳಿಸಿದರು.
ಭದ್ರತೆ ದೃಷ್ಟಿಯಿಂದ “ಶಿಫ್ಟ್’ಟಿಪ್ಪು ಜಯಂತಿ ವಿಧಾನಸೌಧ ಬಾಂಕ್ವೆಟ್ ಸಭಾಂಗಣದಲ್ಲೇ ಈ ಬಾರಿಯೂ ನಡೆಸಲು ಚಿಂತನೆ ನಡೆದಿತ್ತಾದರೂ ಹೆಚ್ಚಿನ ಜನ ಸೇರುವುದರಿಂದ ಸ್ಥಳಾವಕಾಶ ಸಾಲುವುದಿಲ್ಲ. ಜತೆಗೆ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಬದಲಾಯಿಸಲಾಗಿದೆ. ಕಳೆದ ವರ್ಷದ ಸಮಾರಂಭದ ದಿನ ನಡೆದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸಹ ಬಾಂಕ್ವೆಟ್ ಸಭಾಂಗಣದಲ್ಲಿ ಕಾರ್ಯಕ್ರಮ ಮಾಡಿದರೆ ಕಷ್ಟವಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಬದಲಾಯಿಸಲಾಗಿದೆ. ಆದರೆ, ಮುಸ್ಲಿಂ ಸಮುದಾಯದ ಸಚಿವರು-ಶಾಸಕರು ವಿಧಾನಸೌಧ ಬಾಂಕ್ವೆಟ್ ಸಭಾಂಗಣದಲ್ಲಿಯೇ ನಡೆಸಲು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.ಇನ್ನು, ಟಿಪ್ಪು ಜಯಂತಿ ಸಂದರ್ಭದಲ್ಲಿ ಮೆರವಣಿಗೆಗೆ ಅವಕಾಶ ಕೊಟ್ಟರೆ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿಯವರು ಮೆರವಣಿಗೆ ನಡೆಸುವ ಸಾಧ್ಯತೆ ಇರುವುದರಿಂದ ಗುಂಪು ಘರ್ಷಣೆ, ಗಲಭೆಗೆ ಕಾರಣವಾಗಬಹುದು ಎಂಬ ಆತಂಕವೂ ಇರುವುದರಿಂದ ಪರ ಅಥವಾ ವಿರೋಧ ಮೆರವಣಿಗೆಗೆ ಅವಕಾಶ ಕೊಡುವುದು ಬೇಡ ಎಂದು ಡಿಜಿಪಿ ಜತೆಗಿನ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ. ನ್ಯಾಯಾಲಯದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಹೋರಾಟಕ್ಕೆ ಕರೆ ನೀಡಿದ್ದಾರೆ. ಯಾರೇ ಶಾಂತಿಗೆ ಭಂಗ ತಂದರೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.
– ಡಾ.ಜಿ.ಪರಮೇಶ್ವರ, ಡಿಸಿಎಂ ಜನ ಶಾಂತಿ- ಸೌಹಾರ್ದಯುತವಾಗಿ ಬದುಕಬೇಕೆಂಬ ಇಚ್ಛೆ ಸರ್ಕಾರಕ್ಕಿದ್ದರೆ ಇಂತಹ ಯಾವುದೇ ಆಚರಣೆಯನ್ನು ಕೈಬಿಡಬೇಕು. ಪ್ರಜಾಪ್ರಭುತ್ವದಲ್ಲಿ ಯಾವಾಗಲೂ ಬಹುಸಂಖ್ಯಾತರ ಭಾವನೆ, ಮಾತಿಗೆ ಬೆಲೆ ಕೊಡಬೇಕು.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಟಿಪ್ಪು ಜಯಂತಿ ಆಚರಣೆಯನ್ನು ಸರಕಾರ ರದ್ದುಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಆಹ್ವಾನ ಪತ್ರಿಕೆಯಲ್ಲಿ ಯಾವುದೇ ಕಾರಣಕ್ಕೂ ನನ್ನ ಹೆಸರನ್ನು ಮುದ್ರಿಸಬಾರದು ಎಂದು ಸಿಎಂ ಮತ್ತು ಸಿಎಸ್‌ಗೆ ಪತ್ರ ಬರೆದಿದ್ದೇನೆ.
– ಕೋಟಾ ಶ್ರೀನಿವಾಸ ಪೂಜಾರಿ, ಪರಿಷತ್ ಪ್ರತಿಪಕ್ಷ ನಾಯಕ