Advertisement

ಮುಷ್ಕರ ವಿಚಾರದಲ್ಲಿ ರಾಜಕೀಯ ಬೇಡ : ವಿರೋಧ ಪಕ್ಷಗಳಿಗೆ ಡಿಸಿಎಂ ಕಿವಿಮಾತು

07:48 PM Apr 10, 2021 | Team Udayavani |

ಬೆಂಗಳೂರು : ಮುಷ್ಕರ ನಿರತ ಸಾರಿಗೆ ನೌಕರರಿಗೆ ತಿಳಿವಳಿಕೆ ನೀಡಿ ಅವರನ್ನು ತಕ್ಷಣ ಕರ್ತವ್ಯಕ್ಕೆ ಮರಳುವಂತೆ ಮನವೊಲಿಸುವುದನ್ನು ಬಿಟ್ಟು ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ ಕಾಂಗ್ರೆಸ್‍ ಮುಖಂಡರು ನಮ್ಮ ಸರ್ಕಾರದ ಮೇಲೆಯೇ ಗೂಬೆ ಕೂರಿಸಿ ರಾಜಕೀಯ ಲಾಭಗಳಿಸಿಕೊಳ್ಳುವ ಹುನ್ನಾರ ನಡೆಸುತ್ತಿರುವುದು ದುರ್ದೈವದ ಬೆಳವಣಿಗೆ ಎಂದು ಉಪಮುಖ್ಯಂತ್ರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರು ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು 6ನೇ ವೇತನದ ಆಯೋಗದ ಶಿಫಾರಸ್ಸುಗಳನ್ನು ಸಾರಿಗೆ ನೌಕರರಿಗೆ ಅನ್ವಯಿಸಬೇಕು ಎಂದು ಈಗ ಮೊಸಳೆ ಕಣ್ಣೀರು ಸುರಿಸುವ ವಿರೋಧ ಪಕ್ಷಗಳು, ಹಿಂದೆ ತಾವೇ ಅಧಿಕಾರದಲ್ಲಿದ್ದಾಗ ವೇತನ ಆಯೋಗದ ಶಿಫಾರಸ್ಸುಗಳಂತೆ ಎಂದಾದರೂ ನಮ್ಮ ಸಾರಿಗೆ ನೌಕರರಿಗೆವೇತನಗಳನ್ನು ನೀಡಿದ ಇತಿಹಾಸವಿದೆಯೇ? ಹಿಂದೆ ಹಲವು ದಶಕಗಳ ಕಾಲ ಆಡಳಿತ ನಡೆಸಿದ ಇದೇ ವಿರೋಧ ಪಕ್ಷಗಳು ಎಂದಾದರೂ ಸಾರಿಗೆ ನಿಗಮಗಳ ನೌಕರರಿಗೆ ವೇತನ ಆಯೋಗದ ಶಿಫಾರಸ್ಸುಗಳ ಪ್ರಕಾರ ಸಂಬಳ ನೀಡಿದ ದಾಖಲೆ ಇದೆಯೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ :ಅಚ್ಚುಕಟ್ಟು ಪ್ರದೇಶದ ಗ್ರಾಮಗಳ ನೀರಾವರಿಗೆ ಮೊದಲು ಆದ್ಯತೆ ನೀಡಬೇಕು :ಪ್ರತಾಪ್‌ಚಂದ್ರ ಶೆಟ್ಟಿ

ಲಾಕ್‍ಡೌನ್‍ ಸಂಕಷ್ಟದಿಂದಾಗಿ ಸಾರಿಗೆ ನೌಕರರಿಗೆ ಸಂಬಳ ನೀಡುವುದಕ್ಕೂ ಕಷ್ಟವಾದಾಗ ನಮ್ಮ ಮುಖ್ಯಮಂತ್ರಿಗಳು ಸುಮಾರು 2 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತವನ್ನು ಸರ್ಕಾರದಿಂದ ನಾಲ್ಕೂ ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಿದ್ದು ಒಂದು ದಾಖಲೆಯಾಗಿದೆ.ಕೇವಲ ಒಂದೇ ವರ್ಷದಲ್ಲಿ ಇಷ್ಟೊಂದು ಬೃಹತ್ ಮೊತ್ತವನ್ನು ಹಿಂದೆ ಯಾವುದೇ ಸರ್ಕಾರವೂ ಸಾರಿಗೆ ನಿಗಮಗಳಿಗೆ ನೀಡಿದ ನಿದರ್ಶನಗಳಿಲ್ಲ. ಈ ಬಗ್ಗೆ ವಿರೋಧ ಪಕ್ಷದವರೇ ಅತ್ಮಾವಲೋಕನ ಮಾಡಿಕೊಂಡು ಮಾತನಾಡಿದರೆ ಒಳ್ಳೆಯದು. ಸಾರಿಗೆಯಂತಹ ಸಾರ್ವಜನಿಕ ಹಿತದೃಷ್ಟಿಯ ವಿಷಯಗಳಲ್ಲಿ ಯಾರೂ ರಾಜಕೀಯ ಬೆರೆಸಬಾರದು ಎಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next