ನೆಲಮಂಗಲ: ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವಿದ್ಯಾರ್ಥಿನಿಲಯದ ಮುಂದಿನ ಕಸದ ರಾಶಿ ಕಂಡು ಕೆಂಡಮಂಡಲರಾದರು. ಕೂಡಲೇ ಪುರಸಭೆ ಮುಖ್ಯಾಧಿಕಾರಿಯನ್ನು ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ, ವಸತಿನಿಲಯದ ಕೊಠಡಿಗಳು, ಅಡುಗೆ ಮನೆ, ಶೌಚಾಲಯ ಸೇರಿದಂತೆ ಸ್ವತ್ಛತೆ ಪರಿಶೀಲಿಸಿದರು.
ವಿದ್ಯಾರ್ಥಿನಿಲಯದ ಮುಂದೆ ಬಿದ್ದಿದ್ದ ಕಸದ ರಾಶಿ ಏಕೆ ವಿಲೇವಾರಿ ಮಾಡಿಲ್ಲ. ಕಸದಿಂದ ಮಕ್ಕಳಿಗೆ ಅನಾರೋಗ್ಯ ಉಂಟಾಗುವುದಿಲ್ಲವೆ? ಪರಿಸರ ಕಾಪಾಡಬೇಕಾದ ಪುರಸಭೆಯೇ ನಿರ್ಲಕ್ಷ್ಯ ತೋರಿದರೆ ಹೇಗೆ? ಕೆಲಸ ಮಾಡಲು ಇಷ್ಟವಿಲ್ಲದ ಅಧಿಕಾರಿಗಳ ಅವಶ್ಯಕತೆಯಿಲ್ಲ. ತಕ್ಷಣ ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್‌ರನ್ನು ಅಮಾನತುಗೊಳಿಸಿ ಎಂದು ಜಿಲ್ಲಾಧಿಕಾರಿ ರವೀಂದ್ರಗೆ ಸೂಚಿಸಿದರು.
ಮಕ್ಕಳಿಂದ ಮಾಹಿತಿ ಸಂಗ್ರಹ: ವಿದ್ಯಾರ್ಥಿ ನಿಲಯದ ಮಕ್ಕಳಿಂದ ಸರ್ಕಾರದ ಸೌಲಭ್ಯಗಳು ದೊರೆಯುತ್ತಿವೆಯೇ ? ಪೂರೈಕೆಯಾಗುತ್ತಿರುವ ಆಹಾರ ಗುಣಮಟ್ಟದ್ದಾಗಿದೆಯೇ? ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಂದ ಪಡೆದರು.
ಉಪ್ಪಿನಕಾಯಿ ಸವಿದ ಡಿಸಿಎಂ: ಹಾಸ್ಟೆಲ್‌ನ ಅಡುಗೆ ಕೋಣೆಗೆ ಭೇಟಿ ನೀಡಿದ ಡಿಸಿಎಂ ಅಕ್ಕಿ, ಬೇಳೆ, ಖಾರದಪುಡಿ, ತರಕಾರಿ, ಸಾಂಬಾರು ಪದಾರ್ಥಗಳು, ಮೆಣಸಿನಕಾಯಿ ಸೇರಿದಂತೆ ಇನ್ನಿತರ ಅಡುಗೆ ಸಾಮಾಗ್ರಿಗಳನ್ನು ಪರಿಶೀಲಿಸಿದರು. ಅಡುಗೆ ಕೋಣೆ ಸ್ವತ್ಛವಾಗಿರಿಸಲು ಅಡುಗೆ ಸಿಬ್ಬಂದಿಗೆ ಸೂಚಿಸಿ, ಬಟ್ಟಲಿನಲ್ಲಿದ್ದ ಉಪ್ಪಿನಕಾಯಿ ಸವಿದು ಚೆನ್ನಾಗಿದೆ ಎಂದು ಚಪ್ಪರಿಸಿದರು. ನಂತರ ವಿದ್ಯಾರ್ಥಿಗಳು ಕುಡಿಯುವ ನೀರನ್ನು ಕುಡಿದು ನೀರಿನ ಶುದ್ಧತೆ ಖಾತರಿ ಪಡಿಸಿಕೊಂಡರು.
ವಿದ್ಯಾರ್ಥಿಗಳಿಗೆ ನೀತಿ ಪಾಠ: ಹಾಸ್ಟೆಲ್ ಸ್ಥಿತಿಗತಿ ಪರಿಶೀಲಿಸಿದ ನಂತರ ವಿದ್ಯಾರ್ಥಿಗಳಿಗೆ ಜೀವನ ಪಾಠ ಮಾಡಿದ ಡಿಸಿಎಂ, ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಉನ್ನತ ಹುದ್ದೆಗೇರಿ ಸಮಾಜ ಸೇವೆ ಮಾಡಬೇಕು ಎಂದರು. ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಗ್ರಾಮಾಂತರ ಜಿಲ್ಲಾಧಿಕಾರಿ ಜೊತೆ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ್ದೇನೆ.
ಹಾಸ್ಟಲ್ ಹಾಗೂ ವಿದ್ಯಾರ್ಥಿಗಳ ಪರಿಸ್ಥಿತಿಯ ಬಗ್ಗೆ ಪರಿಶೀಲಿಸಿದ್ದು, ವಿದ್ಯಾರ್ಥಿನಿಲಯದ ಸ್ವತ್ಛತೆ ಉತ್ತಮವಾಗಿದೆ. ಹಾಸ್ಟಲ್ ಹೊರಗಿನ ಕಸದ ರಾಶಿ ನೋಡಿ ಬೇಸರವಾಯಿತು. ಹೀಗಾಗಿ ಮುಖ್ಯಾಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದರು. ತಹಶೀಲ್ದಾರ್ ಎಂ.ಶ್ರೀನಿವಾಸಯ್ಯ, ಪುರಸಭೆ ಆರೋಗ್ಯಾಧಿಕಾರಿ ಬಸವರಾಜು, ಲೆಕ್ಕಾಧೀಕಾರಿ ರವಿಕುಮಾರ್ ಇದ್ದರು.
ಸಚಿವರು ಪುರಸಭೆ ಮುಖ್ಯಾಧಿಕಾರಿ ಅಮಾನಗೊಳಿಸಲು ಸೂಚಿಸಿದ್ದಾರೆ. ಆದರೆ, ನನಗೆ ಅಮಾನತು ಮಾಡುವ ಅಧಿಕಾರವಿಲ್ಲ. ಡಿಸಿಎಂ ಅಮಾನತು ಮಾಡುವಂತೆ ತಿಳಿಸಿರುವ ವರದಿಯನ್ನು ಇಲಾಖೆ ಮುಖ್ಯಸ್ಥರಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸುತ್ತೇನೆ.
-ರವೀಂದ್ರ, ಜಿಲ್ಲಾಧಿಕಾರಿ